ಸೋಮವಾರ, ಡಿಸೆಂಬರ್ 6, 2021
23 °C
ಶಿರಸಿಯ ತೋಟಗಾರಿಕಾ ಕಾಲೇಜಿನ ಹಣ್ಣು ವಿಜ್ಞಾನ ವಿಭಾಗದ ಪ್ರಯೋಗ

ಅಂಗಾಂಶ ಕಸಿ ಪ್ರಯೋಗ: ಡ್ರ್ಯಾಗನ್ ಫ್ರುಟ್ ಗಿಡದ ಪುಟ್ಟ ಕಾಂಡದಿಂದ ಸಾವಿರ ಗಿಡ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಚೀನಾ ಮೂಲದ ಡ್ರ್ಯಾಗನ್ ಫ್ರುಟ್ ಬೆಳೆಯಲು ಹಲವು ರೈತರು ಈಚೆಗೆ ಒಲವು ತೋರಿದ್ದಾರೆ. ಭವಿಷ್ಯದಲ್ಲಿ ಹಣ್ಣಿನ ಕೃಷಿ ಮುನ್ನೆಲೆಗೆ ಬಂದರೆ ಬೇಡಿಕೆಗೆ ತಕ್ಕಷ್ಟು ಗಿಡ ಪೂರೈಸುವ ಅನುಕೂಲಕ್ಕೆ ಅಂಗಾಂಶ ಕಸಿ ಮೂಲಕ ಗಿಡ ಬೆಳೆಸುವ ಪ್ರಯೋಗ ನಡೆಯುತ್ತಿದೆ.

ಹಣ್ಣಿನ ಗಿಡದ ಪುಟ್ಟ ಕಾಂಡ ಭಗದಿಂದ ಸಾವಿರ ಸಂಖ್ಯೆಯ ಸಸಿ ಉತ್ಪಾದಿಸುವ ಪ್ರಯೋಗವನ್ನು  ಇಲ್ಲಿನ ತೋಟಗಾರಿಕಾ ಕಾಲೇಜಿನ ಹಣ್ಣು ವಿಜ್ಞಾನ ವಿಭಾಗ ಕೈಗೆತ್ತಿಕೊಂಡಿದೆ.

ಕಾಲೇಜಿನ ಡೀನ್ ಡಾ.ಎನ್.ಕೆ.ಹೆಗಡೆ, ಹಣ್ಣು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ನಾಗೇಶ ನಾಯ್ಕ ಕಾಗಾಲ ಅವರ ಮಾರ್ಗದರ್ಶನದಲ್ಲಿ ಅಂಗಾಂಶ ಕಸಿ ಮೂಲಕ ಕಾಲೇಜಿನ ಪ್ರಯೋಗಾಲಯದಲ್ಲಿ  ಮೊದಲ ಬಾರಿಗೆ ಡ್ರ್ಯಾಗನ್ ಫ್ರುಟ್ ಬೆಳೆಸಲಾಗುತ್ತಿದೆ.

ಕಾಂಡದಿಂದ ಸಾವಿರ ಸಸಿ: ‘ಡ್ರ್ಯಾಗನ್ ಫ್ರುಟ್ ಗಿಡದ 5 ಸೆಂ.ಮೀ.ನಷ್ಟು ಕಾಂಡ ಭಾಗ ಕತ್ತರಿಸಿ ಅದನ್ನು ಅಂಗಾಶ ಕಸಿ ಪ್ರಯೋಗಾಲದಲ್ಲಿ ರೋಗರಹಿತವಾಗಿ ಸಂರಕ್ಷಿಸಲಾಯಿತು. ಹತ್ತು ಕಾಂಡಗಳನ್ನು ರಾಸಾಯನಿಕ ಸಂರಕ್ಷಣೆಗೆ ಒಳಪಡಿಸಿದ್ದೆವು. ಈ ಪೈಕಿ ಐದು ಕಾಂಡಗಳಲ್ಲಿ ತಲಾ ಸಾವಿರದಷ್ಟು ಗಿಡಗಳು ಮೊಳಕೆಯೊಡೆದವು’ ಎನ್ನುತ್ತಾರೆ ಹಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ್ ಡಿ.ಪಿ.

‘ಸತತ ಆರು ತಿಂಗಳ ಪ್ರಯೋಗದ ಬಳಿಕ ರೋಗರಹಿತವಾಗಿ ಬೆಳೆದ ಗಿಡಗಳನ್ನು ಪಾಲಿಹೌಸ್‍ನಲ್ಲಿಟ್ಟು ಬೆಳೆಸುತ್ತಿದ್ದೇವೆ. ಇನ್ನೂ ಎರಡು ಅಥವಾ ಮೂರು ತಿಂಗಳ ಆರೈಕೆ ಬಳಿಕ ಅವುಗಳು ನಾಟಿಗೆ ಸಿದ್ಧಗೊಳ್ಳುತ್ತವೆ’ ಎಂದು ಹೇಳಿದರು.

‘ಪಾಪಾಸು ಕಳ್ಳಿ ಜಾತಿಗೆ ಸೇರಿದ ಡ್ರ್ಯಾಗನ್ ಫ್ರುಟ್‍ ಗಿಡ ಕೃಷಿ ಭೂಮಿಯಲ್ಲಿ ಬೆಳೆಸಲು 20 ಸೆಂ.ಮೀ. ಕಾಂಡ ಭಾಗದ ಅಗತ್ಯವಿದೆ. ಬೀಜದಿಂದಲೂ ಸಸಿ ಬೆಳೆಸಲಾಗುತ್ತದೆ. ಆದರೆ ಈ ಹಣ್ಣಿನ ಜನಪ್ರಿಯತೆ ಹೆಚ್ಚುತ್ತಿರುವ ಕಾರಣ ಇದರ ಕೃಷಿ ಭವಿಷ್ಯದಲ್ಲಿ ಹೆಚ್ಚು ಚಾಲ್ತಿಗೆ ಬರಬಹುದು. ಆಗ ಹಳೆಯ ಪದ್ಧತಿ ಅನುಸರಿಸಿದರೆ ಅಗತ್ಯದಷ್ಟು ಗಿಡ ಪೂರೈಕೆ ಸಾಧ್ಯವಾಗದು. ಈ ಕಾರಣಕ್ಕೆ ಅಂಗಾಂಶ ಕಸಿ ಮೂಲಕ ಹೆಚ್ಚು ಗಿಡ ಬೆಳೆಸುವ ಪ್ರಯೋಗ ಕೈಗೊಂಡಿದ್ದೇವೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು