ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಾಡಲು ನೀರಿಲ್ಲ; ಕೆಲಸಕ್ಕಾಗಿ ಹೊರ ಜಿಲ್ಲೆಗೆ ಗುಳೆ ಹೋದವರ ಮತದಾನ ಅನುಮಾನ

ಹೊರ ಜಿಲ್ಲೆಗೆ ಕಾರ್ಮಿಕರು
Last Updated 30 ಏಪ್ರಿಲ್ 2019, 16:48 IST
ಅಕ್ಷರ ಗಾತ್ರ

ಶಿರಸಿ: ಇಬ್ಬರದೂ ಹೋರಾಟವೇ. ಒಬ್ಬರದು ಅಧಿಕಾರಕ್ಕಾಗಿ ನಡೆದರೆ, ಇನ್ನೊಬ್ಬರದು ಬದುಕಿಗಾಗಿ ಹೋರಾಟ. ರಾಜಕೀಯ ನಾಯಕರು ಚುನಾವಣೆಯ ಭರಾಟೆಯಲ್ಲಿದ್ದರೆ, ಇದರ ಗೊಡವೆಯೇ ಇಲ್ಲದ ಕೂಲಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದಾರೆ. ಇವರು ಮತದಾನ ಪ್ರಕ್ರಿಯೆಯಿಂದ ವಂಚಿತವಾಗುವ ಸಾಧ್ಯತೆ ದಟ್ಟವಾಗಿದೆ.

ತಾಲ್ಲೂಕಿನ ಪೂರ್ವಭಾಗದ ಬನವಾಸಿ ಹೋಬಳಿ ನಿರಂತರ ಬರಗಾಲಕ್ಕೀಡಾಗುವ ಪ್ರದೇಶ. ಮರಳು ಗಣಿಗಾರಿಕೆ, ಅತಿಕ್ರಮಣದಂತಹ ಹೊಡೆತಕ್ಕೆ ಸಿಲುಕಿ, ಈ ಭಾಗದ ಜೀವನಾಡಿಯಾಗಿರುವ ವರದಾ ನದಿ ಪ್ರತಿವರ್ಷ ಬೇಸಿಗೆ ಬತ್ತುತ್ತದೆ. ಇದರಿಂದ ರೈತರು ಹಿಂಗಾರು ಕೃಷಿ ಮಾಡುವುದನ್ನು ಬಿಟ್ಟು ಹಲವಾರು ವರ್ಷಗಳು ಕಳೆದಿವೆ.

ಬನವಾಸಿ ಸುತ್ತಲಿನ ಕೃಷಿ ಕಾರ್ಮಿಕರು ಸ್ಥಳೀಯವಾಗಿ ಅಥವಾ ತಾಲ್ಲೂಕಿನ ಪಶ್ಚಿಮ ಭಾಗದ ರೈತರ ತೋಟಗಳಲ್ಲಿ ದುಡಿಯುತ್ತಾರೆ. ಆದರೆ, ದಾಸನಕೊಪ್ಪ, ರಂಗಾಪುರ, ಕಲಕೊಪ್ಪ ಮೊದಲಾದ ಊರುಗಳು ಕೃಷಿ ಕಾರ್ಮಿಕರು ಬೇಸಿಗೆ ಬಂತೆಂದರೆ, ಕಾಫಿ ಸೀಮೆಯಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಹೀಗೆ ಗುಳೆ ಹೋದವರು ಮತ್ತೆ ತಿರುಗಿ ಊರಿಗೆ ಬರುವುದು ಮಳೆಗಾಲ ಆರಂಭದ ಹೊತ್ತಿಗೆ.

‘ತಿಗಣಿ, ಭಾಶಿ, ಮೊಗಳ್ಳಿ ಭಾಗದಲ್ಲಿ ನೀರಾವರಿ ವ್ಯವಸ್ಥೆಯಿದೆ. ಆದರೆ, ದಾಸನಕೊಪ್ಪ ಪಂಚಾಯ್ತಿಯ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿದೆ. ಜಾನುವಾರು ಸಾಕಣೆಯೇ ಕಷ್ಟವಾಗಿರುವ ಇನ್ನು ಕೃಷಿ ಮಾಡುವುದು ಎಲ್ಲಿಂದ ಬಂತು ? ನಿತ್ಯ ದುಡಿದು ತಿನ್ನುವವರಿಗೆ ಕೈಗೆ ಕೆಲಸವಿಲ್ಲದಿದ್ದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಹೀಗಾಗಿ ಹಲವರು ಕೆಲಸ ಹುಡುಕಿಕೊಂಡು ಕುಟುಂಬ ಸಮೇತ ಹೋಗುತ್ತಾರೆ’ ಎನ್ನುತ್ತಾರೆ ದಾಸನಕೊಪ್ಪದ ಮಂಜಮ್ಮ.

‘ಹಗಲು ಹೊತ್ತಿನಲ್ಲಿ ಹಳ್ಳಿಯಲ್ಲಿರುವವರು ಮಕ್ಕಳು ಮತ್ತು ವೃದ್ಧರು ಮಾತ್ರ. ಗಂಡಸರು, ಹೆಂಗಸರೆಲ್ಲ ಬೆಳಿಗ್ಗೆ ಬರುವ ವಾಹನದಲ್ಲಿ ತೋಟದ ಕೆಲಸಕ್ಕೆ ಹೋಗುತ್ತಾರೆ, ಸಂಜೆ ವಾಪಸ್ಸಾಗುತ್ತಾರೆ. ಇನ್ನು ಕೆಲವು ಯುವಕರು ಕೆಲಸಕ್ಕಾಗಿ ನಗರ ಸೇರಿದ್ದಾರೆ. ಕಾಫಿ ಸೀಮೆಯಲ್ಲಿ ಒಳ್ಳೆಯ ಕೂಲಿ ಸಿಗುವುದರಿಂದ ಅಲ್ಲಿ ಒಮ್ಮೆ ಹೋದವರು, ಮತ್ತೆ ಮರುವರ್ಷವೂ ಅಲ್ಲಿಯೇ ಹೋಗಿ ಬಿಡುತ್ತಾರೆ. ಇವರೆಲ್ಲ ಮತದಾನಕ್ಕೆ ಬರುವುದು ಅನುಮಾನ’ ಎಂದರು ರೈತ ವಸಂತಗೌಡ ಪಾಟೀಲ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂದು ದಶಕ ಕಳೆದರೂ, ಬಹುತೇಕ ಜನರಿಗೆ ಈ ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಯೋಜನೆಯಲ್ಲಿ ಕೂಲಿ ಹಣ ಬರುವುದೂ ತಡವಾಗುತ್ತದೆ. ಸ್ಥಳೀಯವಾಗಿ ಇರುವ ಕೂಲಿ ಇದಕ್ಕಿಂತ ಇದು ಕಡಿಮೆ ಮೊತ್ತವೂ ಹೌದು. ಅದಕ್ಕಾಗಿ ಈ ಕೆಲಸವನ್ನು ನಂಬದೇ ಹೊರ ಊರಿಗೆ ಹೋಗುತ್ತಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT