ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day: ಪಟ್ಟಣದ ಮಡಿಲಲ್ಲಿ ‘ಆಮ್ಲಜನಕ ಬ್ಯಾಂಕ್’

ಸುತ್ತಮುತ್ತಲಿನ ಪ್ರದೇಶದ ಜಲಮೂಲಕ್ಕೆ ಆಧಾರವಾದ ಹಳಕಾರ ಗ್ರಾಮ ಅರಣ್ಯ
Last Updated 4 ಜೂನ್ 2021, 19:49 IST
ಅಕ್ಷರ ಗಾತ್ರ

ಕಾರವಾರ: 1924ರಲ್ಲಿ ಸ್ಥಾಪನೆಯಾದ 219 ಎಕರೆ ವಿಸ್ತೀರ್ಣದ ಈ ‘ಗ್ರಾಮ ಅರಣ್ಯ’ವು ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಏಕೈಕ ಸ್ವತಂತ್ರ ಸಮಿತಿಯಾಗಿದೆ. ಪಟ್ಟಣಕ್ಕೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ‘ಆಮ್ಲಜನಕದ ಬ್ಯಾಂಕ್’ ಆಗಿರುವ ವನರಾಶಿಯನ್ನು ಸ್ಥಳೀಯರೇ ನಿರ್ವಹಿಸುತ್ತಿದ್ದಾರೆ.

ಕುಮಟಾ ಪಟ್ಟಣಕ್ಕೆ ಹೊಂದಿಕೊಂಡೇ ಇರುವ ‘ಹಳಕಾರ ಗ್ರಾಮ ಅರಣ್ಯ’ವು ತನ್ನ ಇತಿಹಾಸದಿಂದಲೇ ಗಮನ ಸೆಳೆಯುತ್ತದೆ. ರಾಜ್ಯದಲ್ಲಿ ಬ್ರಿಟಿಷರ ಕಾಲದಲ್ಲಿ ಆರಂಭವಾಗಿದ್ದ ‘ಗ್ರಾಮ ಅರಣ್ಯ’ಗಳನ್ನು 1974ರಲ್ಲಿ ರಾಜ್ಯ ಸರ್ಕಾರವು ಅರಣ್ಯ ಇಲಾಖೆಯ ವಶಕ್ಕೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಆಗ ಜಿಲ್ಲೆಯಲ್ಲಿ 165 ಸ್ವತಂತ್ರ ಗ್ರಾಮ ಅರಣ್ಯ ಸಮಿತಿಗಳಿದ್ದವು. ಕುಮಟಾ ತಾಲ್ಲೂಕು ಒಂದರಲ್ಲೇ 13 ಇದ್ದವು.

ಈ ಆದೇಶದ ವಿರುದ್ಧ ಹಳಕಾರ ಗ್ರಾಮ ಅರಣ್ಯ ಸಮಿತಿಯವರು ನ್ಯಾಯಾಲಯದ ಮೊರೆ ಹೋದರು. ಅರಣ್ಯ ಪ್ರದೇಶವು ಸರ್ಕಾರದ ವಶವಾಗುವುದನ್ನು ತಡೆದರು.

ದಟ್ಟವಾದ ಕಾಡಿನಿಂದ ಕೂಡಿರುವ ಈ ಗ್ರಾಮ ಅರಣ್ಯವು, ಸುತ್ತಮುತ್ತಲಿನ ನೂರಾರು ಮನೆಗಳ ನೀರಿನ ಪರಾವಲಂಬನೆಯನ್ನು ತಪ್ಪಿಸಿದೆ. ಇಲ್ಲಿನ ಉಷ್ಣಾಂಶವೂ ಇತರ ಪ್ರದೇಶಗಳಿಗಿಂತ ಎರಡು, ಮೂರು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಕಡಿಮೆ ಇರುವಂತೆ ಮಾಡಿದೆ.

‘ಕುಮಟಾದ ಹೆಗಡೆ ರಸ್ತೆಯ ಹಳಕಾರ ಕ್ರಾಸ್‌ನಿಂದ ಚಿತ್ರಿಗಿ ರಸ್ತೆಯ ಹಳಕಾರ ಕ್ರಾಸ್‌ವರೆಗೆ ಈ ಅರಣ್ಯದ ವ್ಯಾಪ್ತಿಯಿದೆ. ಜಿಲ್ಲಾಧಿಕಾರಿ ಮುಖ್ಯಸ್ಥರಾಗಿದ್ದರೂ ಸಮಿತಿಯು ಸಂಪೂರ್ಣ ಸ್ವತಂತ್ರವಾಗಿದೆ. ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಒಂಬತ್ತು ಸದಸ್ಯರಿದ್ದೇವೆ. ಸಮಿತಿಗೆ ಮೂರು ವರ್ಷಗಳಿಗೊಮ್ಮೆ ತಹಶೀಲ್ದಾರ್ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ’ ಎಂದು ಸಮಿತಿಯ ಅಧ್ಯಕ್ಷ ನಾಗರಾಜ ಭಟ್ಟ‘ಪ್ರಜಾವಾಣಿ’ಗೆ ವಿವರಿಸಿದರು.

‘ಈ ಕಾಡಿನ ಸುತ್ತಮುತ್ತ ಇರುವ ಕುಟುಂಬಗಳಿಗೆ ಸಮಿತಿಯಲ್ಲಿ ಸದಸ್ಯತ್ವ ನೀಡಲಾಗುತ್ತದೆ. ವರ್ಷಕ್ಕೆ ₹ 30 ಶುಲ್ಕ ಪಡೆಯಲಾಗುತ್ತದೆ. ಅವರು ಈ ಕಾಡಿನಿಂದ ತರಗೆಲೆ ಹಾಗೂ ಒಣಕಟ್ಟಿಗೆಯನ್ನು ತೆಗೆದುಕೊಂಡು ಹೋಗಲು ಅರ್ಹರಾಗಿರುತ್ತಾರೆ. ಸದಸ್ಯರಿಂದ ಸಂಗ್ರಹಿಸಿದ ಶುಲ್ಕದ ಮೊತ್ತದಿಂದ ಮತ್ತು ಅರಣ್ಯ ಉತ್ಪನ್ನವನ್ನು ಹರಾಜು ಹಾಕಿದಾಗ ಬರುವ ಹಣದಿಂದ ಕಾರ್ಯದರ್ಶಿಗೆ ಗೌರವಧನ ಮತ್ತು ಭದ್ರತಾ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ’ ಎಂದರು.

ಸಮಿತಿಯ ಗೌರವ ಕಾರ್ಯದರ್ಶಿ ಶಾಂತಾರಾಮ ಹರಿಕಾಂತ ಮಾತನಾಡಿ, ‘ಅಂದಿನ ದಿನಗಳಲ್ಲಿ ಬ್ರಿಟಿಷ್ ಅಧಿಕಾರಿ ಕಾಲನ್ ಎಂಬುವವರು ಈ ಪ್ರದೇಶವನ್ನು ಗ್ರಾಮಸ್ಥರ ಅನುಕೂಲಕ್ಕೆಂದು ವಹಿಸಿದ್ದರು. ಅಂದಿನಿಂದಲೂ ಈ ಕಾಡನ್ನು ನಮ್ಮದೇ ಆಸ್ತಿ ಎಂಬಂತೆ ಕಾಯ್ದುಕೊಂಡು ಬಂದಿದ್ದೇವೆ’ ಎಂದರು.

‘ಇಲ್ಲಿ ಸುತ್ತಮುತ್ತ 12 ಸರ್ಕಾರಿ ಬಾವಿಗಳು, 200ರಷ್ಟು ಖಾಸಗಿ ಬಾವಿಗಳಿವೆ. ಮಾವಿನಕೆರೆ ಎಂಬ ಕೆರೆಯೂ ಇಲ್ಲೇ ಇದೆ. ಕಾಡಿನ ಮಧ್ಯೆ ಒಂದು ಎಕರೆಯಷ್ಟು ಇಂಗುಗುಂಡಿ ಮಾಡಿರುವ ಕಾರಣ ನೀರು ಇಂಗುತ್ತದೆ’ ಎಂದು ವಿವರಿಸಿದರು.

ಹಳಚೇರಿ, ಸುರಗಿ, ಮತ್ತಿ, ಹೊನಗಲು, ಜುಮ್ಮ, ಬಿದಿರು, ಗೇರು, ಹೊಳೆಗೆರೆ ಸೇರಿದಂತೆ ಹಲವು ಮರಗಳು ಇಲ್ಲಿ ಬೃಹದಾಗಿ ಬೆಳೆದಿವೆ. ಹತ್ತಾರು ಪ್ರಭೇದಗಳ ಪಕ್ಷಿಗಳು, ಪ್ರಾಣಿಗಳು ಇಲ್ಲಿ ನಲಿಯುತ್ತಿವೆ. ಕಾಡಿನ ನಡುವೆ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಮಳೆ ನೀರು ಇಂಗಿ ಸಮೀಪದ ಜಲಮೂಲಗಳು ಸಮೃದ್ಧವಾಗಿವೆ. ಧನ್ವಂತರಿ ವನ ನಿರ್ಮಿಸಲಾಗಿದ್ದು, ಗಿಡಗಳ ಸಂರಕ್ಷಣೆ ಮಾಡಲಾಗುತ್ತಿದೆ.

ದಂಡದ ಅರ್ಧ ಬಹುಮಾನ!

‘ಕಾಡಿನೊಳಗೆ ಯಾರೂ ಹರಿತವಾದ ಆಯುಧಗಳೊಂದಿಗೆ ಹೋಗುವುದನ್ನು, ಹಸಿ ಮರ, ಟೊಂಗೆಗಳನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಒಂದುವೇಳೆ ಯಾರಾದರೂ ಹಾಗೆ ಮಾಡಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಆ ಮೊತ್ತದಲ್ಲಿ ಅರ್ಧದಷ್ಟನ್ನು ಮಾಹಿತಿ ನೀಡಿದವರಿಗೆ ಬಹುಮಾನವಾಗಿ ನೀಡಲಾಗುತ್ತದೆ. ಈ ಬಗ್ಗೆ ಚಿಕ್ಕ ಮಕ್ಕಳಲ್ಲೂ ಜಾಗೃತಿ ಮೂಡಿಸಲಾಗಿದೆ’ ಎಂದು ನಾಗರಾಜ ಭಟ್ಟ ಆಡಳಿತದ ಕ್ರಮವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT