ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಅವಧಿಗೆ ಮುನ್ನವೇ ಗಜಪಡೆ ಲಗ್ಗೆ

ಮುಂಡಗೋಡ ತಾಲ್ಲೂಕಿನಲ್ಲಿ ಬದಲಾಗುತ್ತಿರುವ ಕಾಡಾನೆ ಪಥದಿಂದ ರೈತರಿಗೆ ಆತಂಕ
Last Updated 9 ಸೆಪ್ಟೆಂಬರ್ 2020, 16:02 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನಲ್ಲಿ ಕೇವಲ ಐದು ತಿಂಗಳ ಅಂತರದಲ್ಲಿ ಗಜಪಡೆ ಮತ್ತೆ ಕಾಣಿಸಿಕೊಂಡಿದೆ. ವಾರ್ಷಿಕ ಸಂಚಾರದ ಅವಧಿಯ ಒಂದು ತಿಂಗಳು ಮುಂಚೆಯೇ ಆನೆಗಳು ಗದ್ದೆಗಳಿಗೆ ಲಗ್ಗೆಯಿಟ್ಟಿವೆ. ಕಳೆದ ವರ್ಷದಂತೆ ಈ ವರ್ಷವೂ ಕಾಡಾನೆಗಳ ಹಿಂಡು ಹೊಸ ಪಥದಲ್ಲಿ ಸಂಚಾರ ನಡೆಸುವ ಸೂಚನೆ ನೀಡಿದೆ.

ಆನೆಗಳು ಪ್ರತಿವರ್ಷ ಸೆಪ್ಟಂಬರ್ ಅಂತ್ಯದಲ್ಲಿ ದಾಂಡೇಲಿ ಅಭಯಾರಣ್ಯದಿಂದ ಯಲ್ಲಾಪುರ, ಕಿರವತ್ತಿ ಮೂಲಕ ಮುಂಡಗೋಡ ತಾಲ್ಲೂಕಿನ ಅರಣ್ಯ ಪ್ರವೇಶಿಸುತ್ತಿದ್ದವು. ನಾಲ್ಕೈದು ತಿಂಗಳು ಇಲ್ಲಿನ ತೋಟ, ಗದ್ದೆಗಳಿಗೆ ಲಗ್ಗೆಯಿಡುತ್ತಿದ್ದವು. ಬನವಾಸಿ ಅರಣ್ಯದತ್ತ ತೆರಳಿ ನಂತರ ದಾಂಡೇಲಿಗೆ ಮರಳುವುದು ಕಾಡಾನೆಗಳ ವಾರ್ಷಿಕ ಸಂಚಾರವಾಗಿದೆ. ಆದರೆ, ಈ ವರ್ಷ ಮೊದಲೇ ಬಂದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

‘ತಾಲ್ಲೂಕಿನ ಮೈನಳ್ಳಿ, ಬಸನಾಳ, ಕ್ಯಾತ್ನಳ್ಳಿ, ಕೂರ್ಲಿ, ಚಳಗೇರಿ ಭಾಗದಲ್ಲಿ ಈಗಾಗಲೇ ಕಾಡಾನೆಗಳು ಸಂಚರಿಸುತ್ತಿವೆ. ಕೆಲವೆಡೆ ಭತ್ತ ಹಾಗೂ ಗೋವಿನಜೋಳ ಬೆಳೆಗೆ ಹಾನಿ ಮಾಡಿವೆ. ಈ ಹಿಂದೆ ಬೆಳೆ ಕೊಯ್ಲಿಗೆ ಬಂದಾಗ ಕಾಡಾನೆಗಳು ಬರುತ್ತಿದ್ದವು’ ಎಂದು ರೈತರಾದ ಭಾಗು ಕೊಕರೆ, ಪರಸಪ್ಪ ಅಂತೋಜಿ, ಲಕ್ಷ್ಮಣ ನಾಯ್ಕ ಹೇಳಿದರು.

ಹೋಗಿದ್ದೇ ತಡವಾಗಿ:

ಪ್ರತಿ ವರ್ಷ ಜನವರಿ ಅಂತ್ಯದ ಒಳಗೆ ಕಾಡಾನೆಗಳು ತಾಲ್ಲೂಕಿನ ಗಡಿ ದಾಟಿ ಯಲ್ಲಾಪುರ ಅರಣ್ಯಕ್ಕೆ ಮರಳಿ ಹೋಗುವುದು ವಾಡಿಕೆ. ಆದರೆ, ಈ ವರ್ಷ ಮಾರ್ಚ್ ಅಂತ್ಯದವರೆಗೂ ಕಾತೂರ ಅರಣ್ಯ ವ್ಯಾಪ್ತಿಯಲ್ಲಿಯೇ ಸಂಚರಿಸಿ ಬೆಳೆ ಹಾನಿ ಮಾಡಿದ್ದವು. ಗೋವಿನಜೋಳ ಹಾಗೂ ಬಾಳೆ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದ್ದು ಕೂಡ ಕಾಡಾನೆಗಳು ಒಂದೇ ಕಡೆ ಹೆಚ್ಚು ದಿನ ಬಿಡಾರ ಹೂಡಲು ಕಾರಣವಾದವು. ನಾಲ್ಕೈದು ತಿಂಗಳ ಅಂತರದಲ್ಲಿ ಮತ್ತೆ ಗಜಪಡೆ ಬಂದಿವೆ’ ಎನ್ನುತ್ತಾರೆ ಕಾತೂರ ವಲಯ ಅರಣ್ಯಾಧಿಕಾರಿ ಅಜೇಯ ನಾಯ್ಕ.

ಹೊಸ ದಾರಿ ಹುಡುಕಿದ್ದವು:ಕಳೆದ ವರ್ಷ ಬಂದಿದ್ದ ಕಾಡಾನೆಗಳು ಸಾಂಪ್ರದಾಯಿಕ ಪಥವನ್ನು ಬಿಟ್ಟು, ಹೊಸ ದಾರಿಯಲ್ಲಿ ಸಾಗಿದ್ದವು. ಎರಡು ದಶಕಗಳಲ್ಲಿ ಹೋಗದಿದ್ದ ಸ್ಥಳಗಳಿಗೂ ಕಾಡಾನೆಗಳು ಲಗ್ಗೆಯಿಟ್ಟಿದ್ದವು. ಇದು ರೈತರಲ್ಲಿ ಅಚ್ಚರಿಯ ಜೊತೆಗೆ ಆತಂಕ ಮೂಡಿಸಿತ್ತು. ಹೊಸ ಪ್ರದೇಶಗಳಲ್ಲಿಯೂ ಆಹಾರದ ಲಭ್ಯತೆಯಿಂದ ಕಾಡಾನೆಗಳು ಮೂಲಸ್ಥಾನಕ್ಕೆ ಮರಳಲು ಹಿಂದೇಟು ಹಾಕಿದ್ದವು. ಅದೇ ದಾರಿಗೂ ಈ ಸಲ ಕಾಡಾನೆಗಳು ಹೋಗುವ ಸಾಧ್ಯತೆಯಿದೆ ಎಂದು ಅರಣ್ಯ ಸಿಬ್ಬಂದಿ ಅಂದಾಜಿಸಿದ್ದಾರೆ.

‘ಶಾಶ್ವತ ಪರಿಹಾರಕ್ಕೆ ಹಿನ್ನಡೆ’:‘ಕಾಡಾನೆಗಳು ಈ ವರ್ಷ ಸ್ವಲ್ಪ ಬೇಗ ಬಂದಿವೆ. ಈ ಹಿಂದೆ ಕೆಲವೆಡೆ ಆನೆ ಕಂದಕ ನಿರ್ಮಿಸಲಾಗಿದ್ದು, ಇನ್ನೂ ಆಗಬೇಕಾಗಿದೆ. ಕಂದಕ ಇಲ್ಲದ ಕಡೆ ಹಾಗೂ ಅರಣ್ಯಕ್ಕೆ ತಾಗಿ ಇರುವ ಅತಿಕ್ರಮಣ ಹೊಲಗದ್ದೆಗಳ ಮೂಲಕ ಸಂಚರಿಸುತ್ತವೆ. ಆನೆಗಳು ಹೊಸ ದಾರಿಯನ್ನು ಹುಡುಕುತ್ತಿರುವುದರಿಂದ, ಶಾಶ್ವತ ಪರಿಹಾರಕ್ಕೆ ತಕ್ಕಮಟ್ಟಿಗೆ ಹಿನ್ನಡೆ ಆಗುತ್ತಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ.ವಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡಾನೆಗಳು: ಅಂಕಿ ಅಂಶ

* ಪ್ರತಿವರ್ಷ ಬರುವ ಕಾಡಾನೆಗಳು:ಸುಮಾರು 35

* 3– 4 ತಂಡಗಳಾಗಿ ಬೇರ್ಪಡುತ್ತವೆ

* 90ರಿಂದ 120 ದಿನ ತಾಲ್ಲೂಕಿನಲ್ಲಿ ಸಂಚಾರ

* 70 ಕಿಲೋಮೀಟರ್ ಆನೆ ಕಂದಕ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT