ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರ ಉತ್ಪನ್ನಕ್ಕೆ ವೈಜ್ಞಾನಿಕ ದರ ಸಿಗಲಿ: ರೈತ ಮುಖಂಡರ ಹಕ್ಕೊತ್ತಾಯ

Last Updated 2 ಜನವರಿ 2020, 13:54 IST
ಅಕ್ಷರ ಗಾತ್ರ

ಕಾರವಾರ: ‘ಸರ್ಕಾರವು ಬೆಳೆಗಳಿಗೆ ನೀಡುವ ಸಾಂತ್ವನ ದರ (ಕನಿಷ್ಠ ಬೆಂಬಲ ಬೆಲೆ) ನಮಗೆ ಬೇಕಿಲ್ಲ. ಕೃಷಿಕರೇ ನಿರ್ಧರಿಸುವ ವೈಜ್ಞಾನಿಕ ದರ ಸಿಗಬೇಕು. ಇತರ ಉತ್ಪನ್ನಗಳಿಗೆ ನಿಗದಿಯಾಗುವ ರೀತಿಯಲ್ಲಿ ಮಾರಾಟ ದರ (ರಿಟೇಲ್ ಪ್ರೈಸ್) ನಿಗದಿಯಾಗಬೇಕು’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್ ಒತ್ತಾಯಿಸಿದರು.

ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮ ಪಂಚಾಯ್ತಿಯ ಕಲ್ಲೇಶ್ವರ ಗೋಪಾಲಕೃಷ್ಣ ಸಭಾಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ‘ರೈತರ ವಿಶೇಷ ಗ್ರಾಮ ಸಭೆ’ಯಲ್ಲಿ ಅವರು ಮಾತನಾಡಿದರು.

ಸಭೆಯ ಉದ್ದೇಶಗಳನ್ನು ವಿವರಿಸಿದ ಅವರು, ‘ಸ್ವಾಭಿಮಾನದಿಂದ ಜೀವನ ನಡೆಸಲು ಸಾಧ್ಯವಾಗುವಂತೆ ರೈತರ ಉತ್ಪನ್ನಗಳಿಗೆ ದರ ಸಿಗಬೇಕು ಎಂದು ಹಲವು ಸಲಚರ್ಚಿಸಲಾಗಿದೆ. ಆದರೆ, ಅದರಿಂದೇನೂ ಆಗಿಲ್ಲ. ಗ್ರಾಮ ಪಂಚಾಯ್ತಿಯ ಮೂಲಕ ರೈತರ ಹಕ್ಕನ್ನು ಪ್ರತಿಪಾದಿಸುವುದು ಈ ಸಭೆಯ ಉದ್ದೇಶವಾಗಿದೆ’ ಎಂದರು.

‘ವೈಜ್ಞಾನಿಕ ದರ ನೀಡಿ’:‘ಸೂಜಿಯಿಂದ ಹಿಡಿದು ವಿಮಾನದವರೆಗೆ ಎಲ್ಲವುಗಳಿಗೂ ದರ ನಿಗದಿಯಾಗಿದೆ. ಆದರೆ, ರೈತರ ಉತ್ಪನ್ನಗಳಿಗೆ ಬೆಲೆಯೇ ನಿಗದಿಯಾಗಿಲ್ಲ. ಅದನ್ನು ಸರ್ಕಾರ ಮಾಡುವಂತೆ ಹಕ್ಕು ಮಂಡಿಸುವುದೇ ಸಭೆಯ ಗುರಿಯಾಗಿದೆ. ಸಾಲಮನ್ನಾ, ಸಬ್ಸಿಡಿ ಎಲ್ಲವೂ ಆಮಿಷ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ದರ ಸಿಕ್ಕಿದರೆ ಅಷ್ಟೇ ಸಾಕು’ ಎಂದು ಶಿವರಾಮ ಗಾಂವ್ಕರ್ ಅಭಿಪ್ರಾಯಪಟ್ಟರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರತಿ ಕ್ವಿಂಟಲ್ ಅಡಿಕೆ ಕೃಷಿಗೆ ₹ 93,646 ವೆಚ್ಚವಾಗುತ್ತದೆ. ₹ 10 ಕ್ವಿಂಟಲ್ ಸರಾಸರಿ ಇಳುವರಿ ಬಂದರೆ ಈಗಿನ ದರದಲ್ಲಿ ₹ 2 ಲಕ್ಷ ಆದಾಯ ಸಿಗುತ್ತದೆ. ಇದರಲ್ಲಿ ಕೂಲಿ, ನಿರ್ವಹಣೆ, ಸಂಸಾರದ ಎಲ್ಲ ಖರ್ಚುಗಳೂ ಹೋಗಬೇಕು’ ಎಂದರು.

‘ಪ್ರತಿ ಎಕರೆ ಕಾಳುಮೆಣಸು ಕೃಷಿಗೆ ₹ 47,026 ಖರ್ಚಿದೆ. ಜಿಲ್ಲೆಯಲ್ಲಿ 400 ಕೆ.ಜಿ. ಸರಾಸರಿ ಬೆಳೆ ಬಂದಾಗ ₹ 1.20 ಲಕ್ಷ ಆದಾಯ ನಿರೀಕ್ಷಿಸಬಹುದು’ ಎಂದು ಹೇಳಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ನಾಯಕ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರತಿ ಎಕರೆ ಬೇಸಾಯಕ್ಕೆ ₹ 26 ಸಾವಿರ ಖರ್ಚಿದ್ದರೆ, ₹ 37 ಸಾವಿರ ಆದಾಯವಿದೆ. ಇದರಲ್ಲಿ ಭತ್ತದ ಹುಲ್ಲಿನ ದರವೂ ಸೇರಿದೆ’ ಎಂದು ತಿಳಿಸಿದರು.

ಹೈನುಗಾರಿಕೆ ಬಗ್ಗೆ ಮಾತನಾಡಿದ ಕೃಷಿಕ ವಿಘ್ನೇಶ್ವರ ಭಟ್, ‘ಪ್ರಸ್ತುತ 16 ಲೀಟರ್ ಹಾಲು ನೀಡುವ ಹಸುವಿಗೆ ₹50 ಸಾವಿರ ಬೆಲೆಯಿದೆ. ಐದು ಆಕಳಿನ ಕೊಟ್ಟಿಗೆ ನಿರ್ಮಿಸಲು ₹10 ಲಕ್ಷ ಬೇಕು. ಪ್ರತಿ ವರ್ಷ ಒಂದು ಹಸುವಿಗೆ ₹2 ಲಕ್ಷ ಖರ್ಚು ಮಾಡಬೇಕು’ ಎಂದು ಅಂಕಿ ಅಂಶ ವಿವರಿಸಿದರು.

ಈ ಎಲ್ಲ ವಿಚಾರಗಳ ಬಗ್ಗೆ ರೈತರು, ಅಧಿಕಾರಿಗಳು ಸಂವಾದ ನಡೆಸಿ ಕನಿಷ್ಠ ಖರೀದಿ ದರ ನಿಗದಿಪಡಿಸಿ ಠರಾವು ಸ್ವೀಕರಿಸಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯ ಜಗದೀಶ ನಾಯಕ ಮೊಗಟಾ, ತಾಲ್ಲೂಕು ಪಂಚಾಯ್ತಿ ಸದಸ್ಯೆ ವೀಣಾ ಸಿದ್ದಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗೌರಿ ಸಿದ್ದಿ,ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಡಾ.ಬಿಪಿ.ಸತೀಶ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಐ.ಎನ್.ಬಸವೇಗೌಡ ರೈತರು ಇದ್ದರು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಿರೀಶ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT