ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿ ದರದಲ್ಲೇ ಡೀಸೆಲ್ ಪೂರೈಕೆ: ಶೀಘ್ರವೇ ತಜ್ಞರ ತಂಡ ಭೇಟಿ

ಮೀನುಗಾರಿಕಾ ದೋಣಿಗಳಿಗೆ ಇಂಧನ ನೀಡಲು ಹೊಸ ವ್ಯವಸ್ಥೆ
Last Updated 15 ಜೂನ್ 2021, 13:36 IST
ಅಕ್ಷರ ಗಾತ್ರ

ಕಾರವಾರ: ಈ ವರ್ಷದ ಮುಂಗಾರು ಅವಧಿಯ ನಂತರ ಮೀನುಗಾರರು ತಮ್ಮ ದೋಣಿಗಳಿಗೆ ಮಾರುಕಟ್ಟೆ ದರದಲ್ಲಿ ಡೀಸೆಲ್ ಖರೀದಿಸುವ ಪ್ರಮೇಯವಿರುವುದಿಲ್ಲ. ಸರ್ಕಾರ ನಿಗದಿ ಪಡಿಸಿದ ಸಬ್ಸಿಡಿ ದರದಲ್ಲೇ ನೇರವಾಗಿ ದೋಣಿಗಳಿಗೇ ಡೀಸೆಲ್ ಪೂರೈಕೆಯಾಗಲಿದೆ. ಇದಕ್ಕೆ ಮೀನುಗಾರಿಕಾ ಇಲಾಖೆ ಸಿದ್ಧತೆ ನಡೆಸಿದ್ದು, ತಜ್ಞರ ತಂಡವೊಂದು ಶೀಘ್ರವೇ ಜಿಲ್ಲೆಗೆ ಭೇಟಿ ನೀಡಲಿದೆ.

ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಯಲ್ಲಿ ದೋಣಿ ಮಾಲೀಕರು ಡೀಸೆಲ್ ಖರೀದಿಸಿದ ನಂತರ ಅವರ ಬ್ಯಾಂಕ್ ಖಾತೆಗೆ ಸರ್ಕಾರದ ಸಹಾಯಧನ (ಸಬ್ಸಿಡಿ ಮೊತ್ತ) ಜಮೆಯಾಗುತ್ತಿತ್ತು. ಇದು ವಿಳಂಬವಾದಷ್ಟೂ ಮೀನುಗಾರರಿಗೆ ಆರ್ಥಿಕ ಹೊರೆಯಾಗುತ್ತಿತ್ತು. ಇದನ್ನು ತಪ್ಪಿಸಲು ವ್ಯವಸ್ಥೆ ರೂಪಿಸುವ ಬಗ್ಗೆ ಈ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದರು.

ಹೊಸ ವ್ಯವಸ್ಥೆಯೇನು?: ಸರ್ಕಾರದಿಂದ ಅನುಮೋದಿತ 13 ಡೀಸೆಲ್ ಬಂಕ್‌ಗಳುಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿವೆ. ಇವುಗಳಿಂದ ಬಂದರಿನ ಜಟ್ಟಿಯವರೆಗೆ ಪೈಪ್‌ಲೈನ್ ಅಳವಡಿಸಬೇಕು. ಪೈಪ್‌ನ ಡೀಸೆಲ್ ತುಂಬುವ ಭಾಗದಲ್ಲಿ (ನೋಸಲ್) ಮತ್ತು ದೋಣಿಗಳ ಡೀಸೆಲ್ ಟ್ಯಾಂಕ್‌ಗಳಿಗೆ ವಿಶೇಷವಾದ ‘ಮೈಕ್ರೋ ಚಿಪ್’ ಅಳವಡಿಸಲಾಗುತ್ತದೆ.

ಈ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ಡೀಸೆಲ್ ತುಂಬಿಕೊಂಡು ಬಂದು ದೋಣಿಗಳ ಟ್ಯಾಂಕ್‌ಗೆ ತುಂಬಲು ಅವಕಾಶವಿಲ್ಲ. ಇದರಿಂದ ಮೀನುಗಾರಿಕೆ ಇಲಾಖೆಯಲ್ಲಿ ಸಬ್ಸಿಡಿಗೆ ಅರ್ಹತೆ ಪಡೆದ ದೋಣಿಗಳಿಗೆ ಮಾತ್ರ ಸರ್ಕಾರದ ಪ್ರಯೋಜನ ವರ್ಗಾವಣೆಯಾಗುತ್ತದೆ. ಯಾರದ್ದೋ ದೋಣಿಯ ಹೆಸರಿನಲ್ಲಿ ಮತ್ಯಾರೋ ಸಬ್ಸಿಡಿ ಡೀಸೆಲ್ ಪಡೆದು ದುರ್ಬಳಕೆ ಮಾಡುವುದನ್ನು ತಡೆಯಲು ಅನುಕೂಲವಾಗುತ್ತದೆ.

‘ಈ ರೀತಿಯ ವ್ಯವಸ್ಥೆಯಿಂದ ದೋಣಿಗಳು ಎಷ್ಟು ದೂರ ಸಾಗಿವೆ, ಎಲ್ಲೆಲ್ಲಿ ಸಾಗಿವೆ, ಒಂದುವೇಳೆ ಡೀಸೆಲ್ ತುಂಬಿಕೊಂಡು ಬಂದರಿನಲ್ಲೇ ನಿಂತಿದ್ದರೆ ಅದಕ್ಕೆ ಕಾರಣವೇನು ಎಂಬೆಲ್ಲ ಮಾಹಿತಿಗಳನ್ನು ಇಲಾಖೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ 890 ದೋಣಿಗಳು ಸಬ್ಸಿಡಿ ಪಡೆಯಲು ಅರ್ಹವಾಗಿವೆ’ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ತಿಳಿಸಿದ್ದಾರೆ.

‘ಜನವರಿಯಿಂದ ಮಾರ್ಚ್‌ವರೆಗಿನ ಡೀಸೆಲ್ ಸಬ್ಸಿಡಿ ಹಣ ಮಂಜೂರಾಗಿದೆ. ಆದರೆ, ಫಲಾನುಭವಿ ಖಾತೆಗೆ ನೇರ ಪಾವತಿ ವ್ಯವಸ್ಥೆಯಲ್ಲಿ ಮೀನುಗಾರರ ಖಾತೆಗೆ ಹಣ ವರ್ಗಾಯಿಸಲು ತಾಂತ್ರಿಕ ಸಮಸ್ಯೆಯಿದೆ. ಈ ಬಗ್ಗೆ ದೋಣಿಗಳ ಮಾಲೀಕರಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರವೇ ಸಮಸ್ಯೆ ಪರಿಸಲಾಗುವುದು’ ಎಂದೂ ಹೇಳಿದ್ದಾರೆ.

300 ಲೀಟರ್‌ಗೆ ಅವಕಾಶ: ಮೀನುಗಾರಿಕಾ ದೋಣಿಗಳಿಗೆ ಬಳಸುವ ಪ್ರತಿ ಲೀಟರ್ ಡೀಸೆಲ್‌ಗೆ ಸರ್ಕಾರವು ಪ್ರಸ್ತುತ ₹ 10.75 ಸಹಾಯಧನ ನೀಡುತ್ತಿದೆ. ದೋಣಿಯ ಸಂಚಾರದ ಆಧಾರದಲ್ಲಿ ದಿನವೊಂದಕ್ಕೆ 70ರಿಂದ 300 ಲೀಟರ್ ಡೀಸೆಲ್‌ಗೆ ಸಬ್ಸಿಡಿ ಪಡೆಯಲು ಅವಕಾಶವಿದೆ. ಹೊಸ ವ್ಯವಸ್ಥೆಯಲ್ಲಿ ಸರ್ಕಾರವು ಸಹಾಯಧನಕ್ಕಾಗಿ ಬೇರೆ ಅನುದಾನ ನೀಡಬೇಕಾಗಿಲ್ಲ. ಬದಲಾಗಿ ಡೀಸೆಲ್ ಮೇಲೆ ವಿಧಿಸುತ್ತಿದ್ದ ರಾಜ್ಯದ ಸೆಸ್‌ ಅನ್ನು ಕಡಿತ ಮಾಡಿಯೇ ಮೀನುಗಾರರಿಗೆ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT