ಗುರುವಾರ , ಮಾರ್ಚ್ 4, 2021
29 °C
ಭಟ್ಕಳ ಮಲ್ಲಿಗೆಗೆ ಭಾರೀ ಹೊಡೆತ; ಸರ್ಕಾರಕ್ಕೆ ಅಂದಾಜು ಪಟ್ಟಿ ಸಲ್ಲಿಸಿರುವ ತೋಟಗಾರಿಕಾ ಇಲಾಖೆ

ಪುಷ್ಪ ಕೃಷಿ: ಅಂದಾಜು ನಷ್ಟ ₹ 16 ಕೋಟಿ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಲಾಕ್‌ಡೌನ್ ಇದ್ದ ಕಾರಣ ಜಿಲ್ಲೆಯಲ್ಲಿ ಪುಷ್ಪ ಬೆಳೆಗಾರರು ಬೆಳೆದಿರುವ ಹೂಗಳ ಮಾರುಕಟ್ಟೆ ಸಾಧ್ಯವಾಗದೇ, ಒಂದೂವರೆ ತಿಂಗಳುಗಳಲ್ಲಿ ಅಂದಾಜು ₹ 16.37 ಕೋಟಿ ಮೌಲ್ಯದ ಹೂಗಳು ಹಾಳಾಗಿವೆ. ಅದರಲ್ಲೂ ಭಟ್ಕಳ ಮಲ್ಲಿಗೆ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ.

ಒಟ್ಟು 101.65 ಹೆಕ್ಟೇರ್‌ನಲ್ಲಿ ಬೆಳೆದಿರುವ ವಿವಿಧ ಜಾತಿಯ ಹೂಗಳ ಮಾರಾಟ ಸಾಧ್ಯವಾಗದೇ ಬೆಳೆಗಾರರು ನಷ್ಟಹೊಂದಿದ್ದಾರೆ ಎಂದು ತೋಟಗಾರಿಕಾ ಇಲಾಖೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಅಂದಾಜು ಪಟ್ಟಿಯಲ್ಲಿ ತಿಳಿಸಿದೆ. ಜಿಲ್ಲೆಯಲ್ಲಿ ಭಟ್ಕಳ ಮಲ್ಲಿಗೆ ಮುಖ್ಯ ಪುಷ್ಪ ಬೆಳೆಯಾಗಿದೆ. ಅದರ ಜೊತೆಗೆ, ಗ್ಲಾಡಿಯೊಲಸ್, ಗುಲಾಬಿ, ಚೆಂಡು ಹೂ, ಲಿಮೊನಿಯಮ್, ಸೇವಂತಿಗೆ ಹೂಗಳನ್ನು ರೈತರು ಬೆಳೆಯುತ್ತಾರೆ.

ಮುಕ್ತ ಬೇಸಾಯದ ಅಡಿಯಲ್ಲಿ 101 ಹೆಕ್ಟೇರ್ ಹಾಗೂ ಸಂರಕ್ಷಿತ ಬೇಸಾಯದ ಅಡಿಯಲ್ಲಿ 0.65 ಹೆಕ್ಟೇರ್‌ನಲ್ಲಿ ಪುಷ್ಪ ಬೆಳೆಯಲಾಗಿದೆ. ಲಾಕ್‌ಡೌನ್ ಕಾರಣ ಮಾರ್ಚ್‌ ಕೊನೆಯ ವಾರ ಹಾಗೂ ಏಪ್ರಿಲ್‌ ತಿಂಗಳಿನಲ್ಲಿ ಅಂದಾಜು ₹ 9.07 ಕೋಟಿ ಹಾಗೂ ಮೇ ತಿಂಗಳಿನಲ್ಲಿ ₹ 7.30 ಕೋಟಿ ಮೌಲ್ಯದ ಹೂಗಳನ್ನು ಹೊರ ಪ್ರದೇಶಗಳಿಗೆ ಕಳುಹಿಸಲು ಸಾಧ್ಯವಾಗದೇ, ರೈತರ ಭೂಮಿಯಲ್ಲೇ ಬೆಳೆ ನಷ್ಟವಾಗಿದೆ. ಇವುಗಳಲ್ಲಿ ಮುಕ್ತ ಬೇಸಾಯದ ಬೆಳೆಗೆ ₹ 16.22 ಕೋಟಿ ನಷ್ಟವಾಗಿದ್ದರೆ, ಸಂರಕ್ಷಿತ ಬೇಸಾಯದಲ್ಲಿ ಬೆಳೆದ ಲಿಮೊನಿಯಮ್, ಸೇವಂತಿಗೆ ಹೂಗಳ ಮಾರುಕಟ್ಟೆ ಮಾಡಲಾಗದೇ, ₹ 14.88 ಲಕ್ಷ ಹಾನಿಯಾಗಿದೆ.

ಶುಭ ಸಮಾರಂಭಗಳು ಹೆಚ್ಚು ನಡೆಯುವ ಈ ತಿಂಗಳುಗಳಲ್ಲಿ ಭಟ್ಕಳ ಮಲ್ಲಿಗೆಗೆ ಉತ್ತಮ ದರವಿರುತ್ತಿತ್ತು. ದಿನಕ್ಕೆ ಸುಮಾರು ₹ 25 ಲಕ್ಷ ವಹಿವಾಟು ನಡೆಯುತ್ತಿತ್ತು. ಇದೇ ಅವಧಿಯಲ್ಲಿ ಮಾರುಕಟ್ಟೆ ಸ್ಥಗಿತವಾಗಿದ್ದ ಕಾರಣ ಬೆಳೆಗಾರರು ತೀವ್ರ ಹಾನಿ ಅನುಭವಿಸಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಈ ಕುರಿತು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಬಿ.ಪಿ.ಸತೀಶ ಅವರನ್ನು ವಿಚಾರಿಸಿದಾಗ, ‘ಭಟ್ಕಳದಲ್ಲಿ 20ರಿಂದ 50 ಗಿಡಗಳನ್ನು ಬೆಳೆಸಿಕೊಂಡು ಮಲ್ಲಿಗೆ ಕೃಷಿ ಮಾಡುವವರೇ ಹೆಚ್ಚಿದ್ದಾರೆ. ಒಂದು ಹೆಕ್ಟೇರ್‌ನಲ್ಲಿ ಸುಮಾರು 1800 ಗಿಡಗಳಿರುತ್ತವೆ. ಸರ್ಕಾರ ನಿಗದಿಪಡಿಸಿದಂತೆ ಪ್ರತಿ ಹೆಕ್ಟೇರ್‌ಗೆ ₹ 25ಸಾವಿರ ಪರಿಹಾರ ದೊರೆಯಲಿದೆ’ ಎಂದರು.

‘ಕಲ್ಲಂಗಡಿ, ಬಾಳೆ, ಅನಾನಸ್ ಮೊದಲಾದ ತೋಟಗಾರಿಕಾ ಹಣ್ಣುಗಳ ಪ್ರತಿದಿನದ ಆವಕ ಹಾಗೂ ಮಾರಾಟ, ಲಭ್ಯವಾದ ದರವನ್ನೊಳಗೊಂಡ ಮಾರುಕಟ್ಟೆ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಕೋವಿಡ್ 19 ಪೂರ್ವ ರೈತರಿಗೆ ದೊರೆತ ದರ, ಕಳೆದ ವರ್ಷ ಲಭ್ಯವಾಗಿದ್ದ ದರ ಹಾಗೂ ಪ್ರಸ್ತುತ ಸಿಗುತ್ತಿರುವ ಬೆಲೆಯ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಹಣ್ಣಿನ ಮಾರುಕಟ್ಟೆಯಲ್ಲಿ ದರ ತುಸು ಚೇತರಿಕೆ ಕಂಡಿದೆ’ ಎಂದು ಅವರು ತಿಳಿಸಿದರು.

ಮುಕ್ತ ಬೇಸಾಯದ ಹೂವಿನ ಬೆಳೆ

ಪುಷ್ಪ;ವಿಸ್ತೀರ್ಣ(ಹೆಕ್ಟೇರ್‌ಗಳಲ್ಲಿ);ಉತ್ಪಾದನೆ ಪ್ರಮಾಣ(ಟನ್/ಕಡ್ಡಿಗಳ ಸಂಖ್ಯೆ);ಒಟ್ಟು ನಷ್ಟ(ಲಕ್ಷ ರೂ.ಗಳಲ್ಲಿ)

ಮಲ್ಲಿಗೆ;90;180;1575

ಗ್ಲಾಡಿಯೋಲಸ್;0.20;24,000 ಕಡ್ಡಿ;2.40

ಗುಲಾಬಿ;05;20;40

ಚೆಂಡು ಹೂ;05;15;4.50

ಇತರ ಹೂ;0.80;05;0.84

ಸಂರಕ್ಷಿತ ಬೇಸಾಯದ ಹೂವಿನ ಬೆಳೆ

ಲಿಮೊನಿಯಮ್;0.05;1200 ಕಡ್ಡಿಗಳು;0.30

ಸೇವಂತಿಗೆ;0.60;8.10;14.58

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು