ಶಿರಸಿ: ಪುಷ್ಪ ಜಾತ್ರೆಗೆ ಜನರ ಯಾತ್ರೆ

ಶಿರಸಿ: ಸೇವಂತಿಗೆ ಹೂಗಳಲ್ಲಿ ಮೈದಳೆದ ಕುಂಬಳಜ್ಜಿ ಹುಳ, ಕೆಂಗುಲಾಬಿಯಲ್ಲಿ ಮೂಡಿದ ಬಿಂಬಿ, ಶ್ವೇತವರ್ಣದ ಪುಷ್ಪ ಪಪ್ಪಿ, ಹೂ ಮಂಟಪ..ಎತ್ತ ದೃಷ್ಟಿ ಹರಿಸಿದರೂ, ಪುಷ್ಪ ಲೋಕದಲ್ಲಿ ಮೂಡಿದ ಪ್ರಾಣಿ–ಪಕ್ಷಿಗಳು.
ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಶನಿವಾರದಿಂದ ಆರಂಭವಾಗಿರುವ ಫಲಪುಷ್ಪ ಪ್ರದರ್ಶನ ಹಾಗೂ ಕಿಸಾನ್ ಮೇಳವು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಶ್ರೀಧರ ಹೆಗಡೆ ಜಡ್ಡಿಮನೆ ಹಾಗೂ ರವೀಂದ್ರ ಯಲಗೋಡಮನೆ ಅವರು 11 ತಾಸು ಶ್ರಮವಹಿಸಿ, 20 ಅಡಿ ಅಗಲದ ಪುಷ್ಪ ರಂಗೋಲಿ ಸಿದ್ಧಪಡಿಸಿದ್ದಾರೆ. ಒಂಬತ್ತು ಜಾತಿಯ ಸುಮಾರು 95 ಕೆ.ಜಿ ಹೂ ಪಕಳೆಯಿಂದ ಈ ರಂಗೋಲಿ ತಯಾರಿಸಿದ್ದಾರೆ.
19 ಅಡಿ ಎತ್ತರ ಹೂ ಮಂಟಪವು ವಿಶೇಷ ಆಕರ್ಷಣೆಯಾಗಿದೆ. ಗುಲಾಬಿ ಹೂವಿನಲ್ಲಿ ಮೂಡಿದ ಫಿರಂಗಿ, ಆನೆ, ಧಾರವಾಡದ ಅಮೃತ ಅಕಾಡೆಮಿಯವರು ತಂದಿರುವ ತೆಂಗಿನ ಕಾಯಿಯಲ್ಲಿ ಮಾಡಿರುವ ವಿವಿಧ ಕಲಾಕೃತಿಗಳು ಕಣ್ಸೆಳೆಯುತ್ತಿವೆ. ರೈತರು ಬೆಳೆದಿರುವ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಕಾಳುಮೆಣಸು, ಅನಾನಸ್, ಬಾಳೆ, ಪಪ್ಪಾಯಿ, ಕಲ್ಲಂಗಡಿ, ತರಕಾರಿ ಬೆಳೆಗಳು ನೋಡುಗರ ಮನಸೆಳೆದಿವೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪ್ರದರ್ಶನಕ್ಕೆ ಚಾಲನೆ ನೀಡಿದರು. 2005- 06ರಲ್ಲಿ ಜಿಲ್ಲೆಯಲ್ಲಿ 25 ಹೆಕ್ಟೇರ್ ಇದ್ದ ತೋಟಗಾರಿಕಾ ಪ್ರದೇಶ 58ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ರೈತರ ಆರ್ಥಿಕ ಸುಧಾರಣೆಗೆ ಪೂರಕವಾಗಿರುವ ತೋಟಗಾರಿಕಾ ಬೆಳೆಗೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ. ಶಿರಸಿಯಲ್ಲಿ ಪಶುಸಂಗೋಪನಾ ಕಾಲೇಜು ಪ್ರಾರಂಭಕ್ಕೆ ಮುಖ್ಯಮಂತ್ರಿ ಬಳಿ ಚರ್ಚಿಸಲಾಗುವುದು ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ, ಬಸವರಾಜ ದೊಡ್ಮನಿ, ಉಷಾ ಹೆಗಡೆ, ರೂಪಾ ನಾಯ್ಕ, ಪ್ರಭಾವತಿ ಗೌಡ, ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ, ಪ್ರಮುಖರಾದ ಎಸ್.ಎನ್.ಹೆಗಡೆ, ವಿವೇಕ ಜಾಲಿಸತ್ಗಿ ಇದ್ದರು. ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಸ್ವಾಗತಿಸಿದರು. ಸತೀಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾರ್ಟಿ ಕ್ಲಿನಿಕ್ ಮುಖ್ಯಸ್ಥ ವಿ.ಎಂ.ಹೆಗಡೆ ನಿರೂಪಿಸಿದರು. ಗಣೇಶ ಹೆಗಡೆ ವಂದಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.