ಬುಧವಾರ, ಡಿಸೆಂಬರ್ 1, 2021
22 °C
ಹಣ ಪಾವತಿಸಲೂ ಸಿದ್ಧರಿದ್ದೇವೆ ಎನ್ನುತ್ತಿರುವ ಪ್ರವಾಸಿಗರು

ಗೋಕರ್ಣ: ಲಸಿಕೆ ನೀಡುವಂತೆ ವೈದ್ಯರಿಗೆ ವಿದೇಶಿಗರ ದುಂಬಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡುತ್ತಿರುವ ಕೋವಿಡ್ ಲಸಿಕೆಗೆ ವಿದೇಶಿ ಪ್ರವಾಸಿಗರಿಂದಲೂ ಬೇಡಿಕೆ ವ್ಯಕ್ತವಾಗುತ್ತಿದೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಬರುವ ವಿದೇಶಿಗರು, ‘ಬೇಕಿದ್ದರೆ ಹಣ ಪಾವತಿಸುತ್ತೇವೆ. ದಯವಿಟ್ಟು ಲಸಿಕೆ ನೀಡಿ’ ಎಂದು ವೈದ್ಯರಿಗೆ ದುಂಬಾಲು ಬೀಳುತ್ತಿದ್ದಾರೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ, ‘ಗೋವಾ, ಬೆಂಗಳೂರಿಗೆ ಹೋಗುವ ವಿದೇಶಿ ಪ್ರಜೆಗಳು ಗಂಟಲು ದ್ರವ ಪರೀಕ್ಷೆಗೆ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ. ಅವರು ಲಸಿಕೆಯನ್ನೂ ನೀಡುವಂತೆ ಕೇಳುತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ 15ಕ್ಕೂ ಹೆಚ್ಚು ವಿದೇಶಿಗರು ಬಂದು ಕೇಳಿದ್ದಾರೆ. ಆದರೆ, ನಮಗೆ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಆದೇಶ ಬಂದಿಲ್ಲ’ ಎಂದರು.

‘ವಿದೇಶಿ ಪ್ರವಾಸಿಗರ ಆಧಾರ್ ಕಾರ್ಡ್, ‘ಪಾನ್’ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೇ ಲಸಿಕೆ ಕೊಡಲು ಸಾಧ್ಯವಿಲ್ಲ. ಈಗ ಹಂತಹಂತವಾಗಿ ಜನರಿಗೆ ಲಸಿಕೆ ನೀಡುತ್ತಿರುವ ರೀತಿಯಲ್ಲೇ ವಿದೇಶೀಗರಿಗೂ ದೊರಕಬಹುದು. ಆಗ ಹೇಳುತ್ತೇವೆ’ ಎಂದು ವೈದ್ಯರು ಮನವರಿಕೆ ಮಾಡುತ್ತಿದ್ದಾರೆ.

ಬ್ರಿಟನ್ ಪ್ರಜೆ ವಿಲಿಯಂ ದಿಸ್ಕ್ರೋಲ್ ಪ್ರತಿಕ್ರಿಯಿಸಿ, ‘ನಾನು ಒಂದೂವರೆ ವರ್ಷದಿಂದ ಗೋಕರ್ಣದಲ್ಲಿಯೇ ಇದ್ದೇನೆ. ದೇವರ ದಯೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಯೂರೋಪಿನ ಅನೇಕ ದೇಶಗಳಲ್ಲಿ ಈಗ ಮತ್ತೆ ಲಾಕ್‌ಡೌನ್ ಮಾಡಿದ್ದಾರೆ. ನಾವು ನಿಜಕ್ಕೂ ಅದೃಷ್ಟವಂತರು. ಭಾರತ ತುಂಬ ಆಧ್ಯಾತ್ಮದಿಂದ ಕೂಡಿರುವ ಶಕ್ತಿಶಾಲಿ ದೇಶ. ಇಲ್ಲಿಯೇ ಇದ್ದ ವಿದೇಶಿಯರಿಗೆ ಕೋವಿಡ್ ಲಸಿಕೆ ನೀಡಿದರೆ ತುಂಬ ಉಪಕಾರವಾಗುತ್ತಿತ್ತು’ ಎಂದು ಆಶಿಸಿದರು.

ರಷ್ಯಾದ ಮಹಿಳೆ ನತಾಶಾ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಕರ್ಣದಲ್ಲಿ 250ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು