ಸೋಮವಾರ, ಫೆಬ್ರವರಿ 24, 2020
19 °C
ಸಿಸಿಎಫ್ ಯತೀಶಕುಮಾರ್ ಭರವಸೆ

ಹಳೇ ಅತಿಕ್ರಮಣದಾರರ ಒಕ್ಕಲೆಬ್ಬಿಸದಂತೆ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಸಿಬ್ಬಂದಿಗೆ ನಿರ್ದೇಶನ ನೀಡಲಾಗುವುದು. ಆದರೆ, ಹೊಸ ಅತಿಕ್ರಮಣಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ್ ಭರವಸೆ ನೀಡಿದರು.

ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬುಧವಾರ ಯತೀಶಕುಮಾರ್ ಅವರನ್ನು ಭೇಟಿ ಮಾಡಿದ, ಭಟ್ಕಳ ತಾಲ್ಲೂಕಿನ ಅತಿಕ್ರಮಣದಾರರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆಗುತ್ತಿರುವ ದೌರ್ಜನ್ಯವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.

‘ದೊಡ್ಡವರು ಕಟ್ಟಿರುವ ಮನೆ ಉಳಿಸಿ, ಬಡವರ ಮನೆ ಕೆಡುವುತ್ತಾರೆ. ಹೆಂಗಸರು ಮಾತ್ರ ಇರುವ ಮನೆಗೆ ಬಂದು ಹೆದರಿಸುತ್ತಾರೆ. ನಾಲ್ಕೈದು ದಶಕಗಳ ಹಿಂದೆ ಅತಿಕ್ರಮಣ ಮಾಡಿ ನಿರ್ಮಿಸಿಕೊಂಡಿದ್ದ ಮನೆ ಕುಸಿದು ಬೀಳುವ ಹಂತಕ್ಕೆ ಬಂದಿದ್ದರಿಂದ ಸಾಲ ಮಾಡಿ, ಹೊಸ ಮನೆ ಕಟ್ಟಿಕೊಳ್ಳಲು ಮುಂದಾಗಿದ್ದೆವು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಬಂದು, ಅವನ್ನೆಲ್ಲ ಕೆಡವಿದ್ದಾರೆ. ಬೂಟು ಗಾಲಿನಲ್ಲಿ ಮನೆಯೊಳಗೆ ಬಂದು ಬೆದರಿಕೆ ಹಾಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೇ ಅತಿಕ್ರಮಣದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿದ್ದಾರೆ. ಬಡವರಿಗೊಂದು, ಉಳ್ಳವರಿಗೊಂದು ಕಾನೂನು ಯಾಕೆ’ ಎಂದು ಮಹಿಳೆಯರಿಬ್ಬರು ಪ್ರಶ್ನಿಸಿದರು.

‘ಎಲ್ಲೂ ಇಲ್ಲದ ಕಾನೂನು ಭಟ್ಕಳಕ್ಕೆ ಮಾತ್ರ ಯಾಕಿದೆ ? ಗುಡಿಸಲು ಕಟ್ಟಿಕೊಂಡಿರುವ ಬಡವರು, ಮನೆ ಕರ ತುಂಬುತ್ತಾರೆ. ಅವರ ವಾಸ್ತವ್ಯದ ಜಾಗದ ಜಿಪಿಎಸ್ ಕೂಡ ಆಗಿದೆ. ಹೀಗಿರುವಾಗ ಅವರನ್ನು ಒಕ್ಕಲೆಬ್ಬಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಅತಿಕ್ರಮಣದಾರರ ಪರ ಮಾತನಾಡಿದ, ರವೀಂದ್ರ ನಾಯ್ಕ ಅವರು ಗದ್ಗದಿತರಾದರು.

‘ಜಿಲ್ಲೆಯ ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜನರ ಭಾವನೆಗೆ ಸ್ಪಂದಿಸಿದ್ದಾರೆ. ಆದರೆ, ಕೆಲವು ಕಡೆಗಳಲ್ಲಿ ಬಹಳ ಹಿಂಸೆ ನೀಡಿದ್ದಾರೆ. ಇದೇ ನೆಲದ ಜನರಿಗೆ ನೆಲೆಯಿಲ್ಲದಿದ್ದರೆ ಅವರು ಎಲ್ಲಿ ಹೋಗಬೇಕು’ ಎಂದು ಅಂಕೋಲಾದ ಜಿ.ಎಂ.ನಾಯ್ಕ ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು