ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಯಲ್ಲಿ ಲಾಕ್‌ಡೌನ್‌: ಸಂಚಾರ ಸ್ತಬ್ದ, ಅಂಗಡಿಗಳು ಬಂದ್

ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ
Last Updated 5 ಜುಲೈ 2020, 14:01 IST
ಅಕ್ಷರ ಗಾತ್ರ

ಶಿರಸಿ: ರಾಜ್ಯದಾದ್ಯಂತ ಘೋಷಿಸಿದ್ದ ಭಾನುವಾರದ ಲಾಕ್‌ಡೌನ್‌ಗೆ ತಾಲ್ಲೂಕಿನ ಜನರು ಉತ್ತಮವಾಗಿ ಸ್ಪಂದಿಸಿದರು. ಬೆಳಗಿನಿಂದ ಸಂಜೆಯವರೆಗೂ ಜನಸಂಚಾರ ತೀರಾ ವಿರಳವಾಗಿತ್ತು. ತುರ್ತು ಕೆಲಸವಿದ್ದವರು ಮಾತ್ರ ಮನೆಯಿಂದ ಹೊರ ಬಂದರು. ಇನ್ನುಳಿದವರು ಕುಟುಂಬದ ಸದಸ್ಯರೊಡನೆ ಕಾಲ ಕಳೆದರು.

ನಗರದಲ್ಲಿ ಔಷಧ ಅಂಗಡಿ, ಹಾಲಿನ ಮಳಿಗೆ, ತೀರಾ ಅಗತ್ಯವಸ್ತುಗಳ ಅಂಗಡಿಗಳು ಹೊರತುಪಡಿಸಿ, ಇನ್ನುಳಿದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್, ಆಟೊರಿಕ್ಷಾ, ಖಾಸಗಿ ವಾಹನಗಳ ಸಂಚಾರವೂ ಇರಲಿಲ್ಲ. ತರಕಾರಿ ಮಾರ್ಕೆಟ್‌ ಕೂಡ ಬಂದಾಗಿತ್ತು. ಮದ್ಯದಂಗಡಿ, ಕ್ಷೌರಿಕ ಅಂಗಡಿ, ಬಟ್ಟೆ ಅಂಗಡಿಗಳು ಸಂಪೂರ್ಣ ಬಂದಾಗಿದ್ದವು.

ಸದಾ ಜನಜಂಗುಳಿ ಇರುವ ಹಳೇ ಬಸ್ ನಿಲ್ದಾಣ ವೃತ್ತ, ಶಿವಾಜಿ ಚೌಕ, ಚನ್ನಪಟ್ಟಣ ಬಜಾರ, ನಟರಾಜ ರಸ್ತೆ, ದೇವಿಕೆರೆ ವೃತ್ತಗಳು ನಿರ್ಜನವಾಗಿದ್ದವು. ಎಲ್ಲ ಕಡೆಗಳಲ್ಲಿ ಪೊಲೀಸರು ಕಾವಲು ಕಾದರು. ಭಾನುವಾರ ದಿನವಿಡೀ ಆಗಾಗ ಬಿಡುವುಕೊಟ್ಟು ಮಳೆ ಸುರಿಯಿತು. ಜನರು ಮನೆಯಲ್ಲೇ ಉಳಿಯಲು ಮಳೆಯೂ ಕಾರಣವಾಯಿತು.

ಕೋವಿಡ್ ದೃಢ:

ಇಲ್ಲಿನ ಮಾರಿಕಾಂಬಾ ದೇವಾಲಯದ ಪಕ್ಕದಲ್ಲಿರುವ ಮನೆಯ ವ್ಯಕ್ತಿಯೊಬ್ಬರಿಗೆ ಭಾನುವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಹೀಗಾಗಿ, ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಈ ವ್ಯಕ್ತಿಯು ಕಿರಾಣಿ ಸಾಮಗ್ರಿ ಖರೀದಿಗಾಗಿ ಹುಬ್ಬಳ್ಳಿ ಹೋಗಿ, ಜೂನ್ 26ರಂದು ವಾಪಸ್ಸಾಗಿದ್ದರು. ಜುಲೈ 1ರಂದು ಜ್ವರ ಕಾಣಿಸಿಕೊಂಡ ಕಾರಣ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ವೈದ್ಯರು ನೀಡಿದ ಮಾಹಿತಿಯನ್ವಯ ತಾಲ್ಲೂಕು ಆರೋಗ್ಯ ಇಲಾಖೆ ಜ್ವರಪೀಡಿತ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿತ್ತು.

ಈ ವ್ಯಕ್ತಿ ಮಾರಿಕಾಂಬಾ ದೇವಾಲಯ, ಕೆಲವು ಕಿರಾಣೀ ಅಂಗಡಿಗಳಿಗೂ ಭೇಟಿ ನೀಡಿದ್ದರು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ದೇವಾಲಯವನ್ನು ಸ್ಯಾನಿಟೈಸ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT