ಭಾನುವಾರ, ಮೇ 22, 2022
26 °C
ಜಾತಿ ಪ್ರಮಾಣಪತ್ರದಲ್ಲಿ ಸಮಸ್ಯೆ ನಿವಾರಣೆಗೆ ಅಂತಿಮ ತೀರ್ಮಾನ: ಸಚಿವ ಶ್ರೀರಾಮುಲು

ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ: ಸಚಿವ ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ‍ಪಂಗಡಗಳ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ವಿಚಾರದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ, ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ವಿವಿಧ ಸಮುದಾಯಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಮೊಗೇರ, ಗೊಂಡ, ಮಾದಿಗ, ಹಸಲರು, ಸಿದ್ದಿ, ಅಲೆಮಾರಿ ಸೇರಿದಂತೆ ಹಲವು ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

‘ಜಾತಿ ಪ್ರಮಾಣ ಪತ್ರಗಳನ್ನು ನೀಡುವಾಗ ಒಂದೇ ಸಮುದಾಯದವರಿಗೆ ಬೇರೆ ಬೇರೆ ಹೆಸರನ್ನು ಉಲ್ಲೇಖಿಸಿರುವುದು ಗಮನಕ್ಕೆ ಬಂದಿದೆ. ಕೆಲವರಿಗೆ ಪರಿಶಿಷ್ಟ ಜಾತಿ ಎಂದೂ ಮತ್ತೆ ಕೆಲವರಿಗೆ ಪರಿಶಿಷ್ಟ ವರ್ಗ ಎಂದು ಪ್ರಮಾಣಪತ್ರ ನೀಡಲಾಗಿದೆ. ಈ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಅಂಶಗಳನ್ನು ತಜ್ಞರ ಜೊತೆ ಚರ್ಚಿಸಲಾಗುವುದು. ಬಳಿಕ ಇದನ್ನು ಯಾವ ರೀತಿ ಇತ್ಯರ್ಥ ಮಾಡಬೇಕು ಎಂದು ನಿರ್ಧರಿಸಲಾಗುವುದು. ಕೆಲವೇ ತಿಂಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

ಸಚಿವರಿಗೆ ಮನವಿ ಸಲ್ಲಿಸಿದ ಹಲವು ಸಮುದಾಯಗಳ ಮುಖಂಡರು ಜಾತಿ ಪ್ರಮಾಣ ಪತ್ರಗಳಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ವಿವರಿಸಿದರು. ಇಲಾಖೆಯ ಅಧಿಕಾರಿಗಳಿಂದ ತೊಂದರೆಯಾಗುತ್ತಿದೆ. ಶಾಲಾ ಮಕ್ಕಳ ಪ್ರಮಾಣಪತ್ರದಲ್ಲೂ ದೋಷ ಕಾಣುತ್ತಿದ್ದು, ಸಮುದಾಯಗಳನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ದೂರಿದರು.

ತಪ್ಪಾಗಿದ್ದರೆ ಕ್ರಮ:

ಇಲಾಖೆಯಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದ ದುರುಪಯೋಗವಾಗುತ್ತಿರುವ ಬಗ್ಗೆ ಆರೋಪಗಳಿವೆ ಎಂದು ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ‘ಇಲಾಖೆಯಲ್ಲಿ ₹26 ಸಾವಿರ ಕೋಟಿ ಅನುದಾನವಿದೆ. ಇದು ದುರುಪಯೋಗ ಆಗಲು ಸಾಧ್ಯವಿಲ್ಲ. ಆದರೆ, ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಬರಲು ಅಧಿಕಾರಿಗಳಿಗೆ ಸೂಚಿಸಿದ್ದು, ತಪ್ಪಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ನಿವಾರಣೆ ಕ್ರಮಕ್ಕೆ ಹುಡುಕಾಟ:

‘ಪಂಚಮಸಾಲಿ ಲಿಂಗಾಯತ ಸಮಾಜವು 2ಎ ಮೀಸಲಾತಿಗೆ ಬೇಡಿಕೆಯಿಟ್ಟಿದೆ. ಆದರೆ, ಅದರಲ್ಲಿ ಕಾನೂನಿಗೆ ಸಂಬಂಧಿಸಿದ ಹಲವು ವಿಚಾರಗಳಿವೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ನಾನು ಸದನದಲ್ಲೇ ಚರ್ಚೆ ಮಾಡಿದ್ದೇವೆ. ತೊಡಕುಗಳನ್ನು ನಿವಾರಿಸುವ ವಿಧಾನದ ಬಗ್ಗೆ ಯೋಚಿಸಲಾಗುತ್ತಿದೆ. 26 ಜಿಲ್ಲೆಗಳಲ್ಲಿ ವರದಿ ಕೊಡುವಂತೆ ಸೂಚಿಸಲಾಗಿದ್ದು, ಅದನ್ನು ಆಧರಿಸಿ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ. ಬೇರೆ ಸಮುದಾಯಗಳಿಗೆ ಮೀಸಲಾತಿಯ ಬೇಡಿಕೆಯ ಬಗ್ಗೆಯೂ ಸರ್ಕಾರ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲಿದೆ’ ಎಂದು ಶ್ರೀರಾಮುಲು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಯಶ್ರೀ ಮೊಗೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು