ಶಿರಸಿ: ನಿಯಮ ಬಾಹಿರ ಕಾಮಗಾರಿ ಹಂಚಿಕೆ- ಆರೋಪ
ಶಿರಸಿ: ‘ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಸಹೋದರನಿಗೆ ಇತರ ಸದಸ್ಯರ ಗಮನಕ್ಕೆ ತಾರದೆ ಮೂರು ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಇದು ಪಂಚಾಯತ್ ರಾಜ್ ಅಧಿನಿಯಮಕ್ಕೆ ವಿರುದ್ಧವಾಗಿದೆ’ ಎಂದು ದೇವನಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಹೆಗಡೆ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಜನವರಿಯಲ್ಲಿ ಒಂದೇ ದಿನ ₹15 ಸಾವಿರ ವೆಚ್ಚದ ಗದ್ದೆಮನೆ ಸಾರ್ವಜನಿಕ ಬಾವಿಯ ಮುಂದುವರಿದ ಕಾಮಗಾರಿ, ₹ 15 ಸಾವಿರ, ₹ 30 ಸಾವಿರ ವೆಚ್ಚದ ಕಾರೆಪಟ್ಟಣಗದ್ದೆಯ ಸಾರ್ವಜನಿಕ ಬಾವಿ, ₹50 ಸಾವಿರ ವೆಚ್ಚದ ಸರಗುಪ್ಪ ಗ್ರಾಮದ ಬಿಳಿಗರೆ ಕುಡಿಯುವ ನೀರಿನ ಬಾವಿ ಮುಂದುವರಿದ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.
‘ಈ ಕಾಮಗಾರಿಗಳನ್ನು ಗ್ರಾಮ ಪಂಚಾಯ್ತಿ ಸದಸ್ಯರಾಗಿರುವ ಕಿರಣ ಮರಾಠಿ ಅವರ ಸ್ವಂತ ಸಹೋದರ ಉದಯ ಮರಾಠಿ ಅವರಿಗೆ ನೀಡಲಾಗಿದೆ. ಕಾರ್ಯಾದೇಶ ನೀಡಿದ್ದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಕಾಮಗಾರಿ ಬಿಲ್ ತಡೆಹಿಡಿದಿದ್ದೇವೆ. ನಿಯಮ ಮೀರಿದ ಪಿಡಿಒ, ಗುತ್ತಿಗೆದಾರ ಮತ್ತು ಸದಸ್ಯರ ಮೇಲೆ ಕ್ರಮವಾಗಬೇಕು’ ಎಂದು ಒತ್ತಾಯಿಸಿದರು.
‘ಕಾಮಗಾರಿ ನೀಡುವ ವೇಳೆ ಆಡಳಿತ ಮಂಡಳಿ ಅಧಿಕಾರದಲ್ಲಿರಲಿಲ್ಲ. ಮೂರು ಕಾಮಗಾರಿಗಳನ್ನು ಹಿಂದೆ ಇದೇ ಗುತ್ತಿಗೆದಾರರಿಗೆ ನೀಡಲಾಗಿದ್ದರಿಂದ ಮುಂದುವರಿದ ಕಾಮಗಾರಿಯನ್ನು ಅವರಿಗೆ ನೀಡಲಾಗಿದೆ. ನಿಯಮಕ್ಕೆ ವಿರುದ್ಧವಾಗಿ ಕಾಮಗಾರಿ ನೀಡಿಲ್ಲ’ ಎಂದು ಪಿಡಿಒ ಮಾಧವಿ ಕಾಮತ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.