ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ ಮಾಲೀಕರ ಬದುಕು ಅತಂತ್ರ

ಲಾಕ್‌ಡೌನ್ ಪರಿಣಾಮ ದೂಳು ತಿನ್ನುತ್ತಿರುವ ಜಿಮ್ ಸಾಮಗ್ರಿಗಳು
Last Updated 2 ಜೂನ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಲಾಕ್‌ಡೌನ್ ಸಡಿಲಿಕೆಯಿಂದ ಉಳಿದೆಲ್ಲ ಉದ್ಯಮಗಳು ನಿಧಾನಕ್ಕೆ ಚೇತರಿಕೆ ಕಾಣುತ್ತಿವೆ. ಆದರೆ, ಎರಡೂವರೆ ತಿಂಗಳುಗಳಿಂದ ಬಾಗಿಲು ಮುಚ್ಚಿರುವ ಜಿಮ್‌ಗಳನ್ನು ತೆರೆಯಲು ಅನುಮತಿ ಸಿಗದಿರುವುದು, ಮಾಲೀಕರನ್ನು ಚಿಂತೆಗೀಡುಮಾಡಿದೆ.

ದೇಹ ದಾರ್ಢ್ಯತೆ, ಫಿಟ್‌ನೆಸ್‌ಗೆ ಒಲವು ತೋರುವ ಯುವಕರ ಆಸಕ್ತಿಯಿಂದ ಜಿಮ್ ಉದ್ಯಮ ಹೆಚ್ಚು ಮುನ್ನಲೆಗೆ ಬಂದಿದೆ. ಬಹುಬೇಡಿಕೆಯ ಉದ್ಯಮಕ್ಕೆ ಲಕ್ಷಾಂತರ ರೂಪಾಯಿ ತೊಡಗಿಸಿರುವ ಮಾಲೀಕರು, ಕೊರೊನಾ ಸೋಂಕು ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಹೊಡೆತಕ್ಕೆ ನಲುಗಿದ್ದಾರೆ.

ಜಿಲ್ಲೆಯಲ್ಲಿ 30ರಷ್ಟು ಜಿಮ್ ಸೆಂಟರ್‌ಗಳಿವೆ. ಸುಮಾರು 70–80 ಜಿಮ್ ತರಬೇತುದಾರರಿದ್ದಾರೆ. ಉನ್ನತ ಶಿಕ್ಷಣ ಪಡೆದು, ಉದ್ಯೋಗಕ್ಕಾಗಿ ಪರದಾಡಿ ನಂತರ ಜಿಮ್ ತರಬೇತುದಾರರಾಗಿ ಬದುಕಿನ ನೆಲೆಕಂಡುಕೊಂಡವರೂ ಇದ್ದಾರೆ. ಕೊರೊನಾ ಸೋಂಕು ನಿಯಂತ್ರಿಸಲು ಲಾಕ್‌ಡೌನ್ ಹೇರಿದ ಮೇಲೆ ಅವರ ಜೀವನ ಈಗ ಅತಂತ್ರವಾಗಿದೆ.

‘ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸರ್ಕಾರ ಹಲವಾರು ಉದ್ಯಮಗಳಿಗೆ ವಿನಾಯಿತಿ ನೀಡಿದೆ. ವ್ಯಾಪಾರಕ್ಕೂ ಅನುವು ಮಾಡಿಕೊಟ್ಟಿದೆ. ಆದರೆ, ಜಿಮ್ ತೆರೆಯಲು ಅನುಮತಿ ಸಿಕ್ಕಿಲ್ಲ. ಈಗ 5.0 ಹಂತದ ಲಾಕ್‌ಡೌನ್‌ನಲ್ಲಾದರೂ ಜಿಮ್ ತೆರೆಯಲು ಅವಕಾಶ ನೀಡಿದರೆ, ಎಲ್ಲ ನಿಯಮಗಳನ್ನು ಪಾಲಿಸಿ, ಉದ್ಯಮ ನಡೆಸುತ್ತೇವೆ’ ಎಂದು ಜಿಮ್ ಮಾಲೀಕರೊಬ್ಬರು ಹೇಳಿದರು.

‘ಜನೆವರಿಯಲ್ಲಿ ಜಿಮ್ ಉದ್ಘಾಟನೆಯಾಗಿತ್ತು. ಖಾಸಗಿಯಾಗಿ, ಬ್ಯಾಂಕ್‌ನಲ್ಲಿ ಸಾಲ ಮಾಡಿ ₹ 16 ಲಕ್ಷ ಬಂಡವಾಳ ತೊಡಗಿಸಿ ಜಿಮ್ ಆರಂಭಿಸಿದ್ದೆ. ಮಾರ್ಚ್‌ 16ಕ್ಕೆ ಬಾಗಿಲು ಮುಚ್ಚಿದ ಮೇಲೆ ಮತ್ತೆ ತೆರೆಯಲು ಇನ್ನೂ ಅನುಮತಿ ಸಿಕ್ಕಿಲ್ಲ. ಪ್ರತಿ ತಿಂಗಳು ಸಾಲದ ಕಂತು, ಕಟ್ಟಡ ಬಾಡಿಗೆ, ಕೆಲಸಗಾರರ ಸಂಬಳ ಸೇರಿ ಸುಮಾರು ₹ 35ಸಾವಿರ ಖರ್ಚು ಬರುತ್ತದೆ’ ಎಂದು ಜಿಮ್ ಮಾಲೀಕ ಲಕ್ಷ್ಮಣ ನಾಯ್ಕ ಅಲವತ್ತುಕೊಂಡರು.

‘ಮೂರು ತಿಂಗಳಿನಿಂದ ಜಿಮ್ ಬಂದಾಗಿರುವುದರಿಂದ ಕಾಯಂ ಬರುವವರಿಗೆ ಫಿಟ್‌ನೆಸ್ ಸಮಸ್ಯೆ ಎದುರಾಗಿದೆ. ಲಕ್ಷಾಂತರ ರೂಪಾಯಿ ತೊಡಗಿಸಿರುವ ಜಿಮ್ ಸಾಮಗ್ರಿಗಳು ಬಳಕೆಯಿಲ್ಲದೇ ದೂಳು ತಿನ್ನುತ್ತಿವೆ. ಸರ್ಕಾರ ಆದಷ್ಟು ಶೀಘ್ರ ಜಿಮ್ ತೆರೆಯಲು ಅವಕಾಶ ಮಾಡಿಕೊಡಬೇಕು’ ಎಂದು ಅವರು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT