ಸೋಮವಾರ, ಆಗಸ್ಟ್ 2, 2021
26 °C

ಕಾರವಾರ | ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಮನೆಯೇ ಸೀಲ್‌ಡೌನ್: ಡಿ.ಸಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುವವರು ಪಾರದರ್ಶಕವಾಗಿ ತಮ್ಮ ಮಾಹಿತಿ ನೀಡಬೇಕು. ಒಂದುವೇಳೆ, ಹೋಂ ಕ್ವಾರಂಟೈನ್ ನಿಯಮವನ್ನು ಪಾಲಿಸದಿದ್ದರೆ ಮನೆಯನ್ನೇ ಸೀಲ್‌ಡೌನ್ ಮಾಡಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡದಂತೆ ತಡೆಯಲು ಸರ್ಕಾರದ ನಿರ್ದೇಶನಗಳ ಪಾಲನೆ ಅತ್ಯಗತ್ಯ. ಈವರೆಗೆ ದೃಢಪಟ್ಟಿರುವ ಎಲ್ಲ ಪ್ರಕರಣಗಳಲ್ಲೂ ಸೋಂಕಿತರು ರೋಗ ಲಕ್ಷಣ ರಹಿತರಾಗಿರುವ ಕಾರಣ ಚಿಕಿತ್ಸೆಗೆ ಸುಲಭವಾಗಿ ಸ್ಪಂದಿಸಿದ್ದಾರೆ. ಮುಂದೆಯೂ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಪ್ರಾಮಾಣಿಕವಾಗಿ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

‘ಸದ್ಯಕ್ಕೆ ಜಿಲ್ಲೆಯಲ್ಲಿ 200 ಜನರಿಗೆ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಸಾಧ್ಯವಿದೆ. ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಮನೆಯಲ್ಲೇ ಇರುವಂತೆ ನೋಡಿಕೊಳ್ಳಲು ಪ್ರತಿ ಮನೆಗೆ ಪೊಲೀಸರನ್ನು ನಿಯೋಜಿಸಲು ಸಾಧ್ಯವಿಲ್ಲ. ಅಂತೆಯೇ ಬೇರೆ ಊರುಗಳಿಂದ ಬರುವವರನ್ನು ತಡೆಯಲೂ ಆಗದು. ಆದ್ದರಿಂದ ಬಂದವರು ತಮ್ಮ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಸ್ತುತ 26 ಕಂಟೈನ್‌ಮೆಂಟ್ ಪ್ರದೇಶಗಳಿವೆ. ಅವುಗಳಲ್ಲಿ 1,663 ಮನೆಗಳಿದ್ದು, 379 ಅಂಗಡಿಗಳು ಹಾಗೂ ವಿವಿಧ ಕಚೇರಿಗಳಿವೆ. ಒಟ್ಟು 7,176 ಜನರು ವಾಸಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು