ಶನಿವಾರ, ಫೆಬ್ರವರಿ 22, 2020
19 °C
ಕ್ಷೇತ್ರದಲ್ಲಿ ಎಲ್ಲೂ ಕಾಣಿಸಿಕೊಳ್ಳದ ಕಾರ್ಯಕರ್ತರ ಪಡೆ

ಯಲ್ಲಾಪುರ ಉಪಚುನಾವಣೆ | ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಜೆಡಿಎಸ್

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ಶಿರಸಿ: ಚುನಾವಣೆಯಿಂದ ಚುನಾವಣೆಗೆ ಬಲ ಕಳೆದುಕೊಳ್ಳುತ್ತಿರುವ ಜೆಡಿಎಸ್, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.

ಬಿಜೆಪಿ–ಕಾಂಗ್ರೆಸ್ ಪಕ್ಷಗಳು ಪೈಪೋಟಿಯಲ್ಲಿ ಪ್ರಚಾರ ನಡೆಸುತ್ತಿದ್ದರೆ ಜೆಡಿಎಸ್‌ನ ರಾಜ್ಯ ನಾಯಕರ ಭೇಟಿ, ಪ್ರಚಾರ ಸಭೆ ಕ್ಷೇತ್ರದಲ್ಲಿ ನಡೆದಿಲ್ಲ. ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಬನವಾಸಿಗೆ ಬಂದು ಹೋಗಿದ್ದು, ನ.28ರಂದು ಮುಂಡಗೋಡದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಪಕ್ಷದ ಹಿರಿ–ಕಿರಿಯ 75ಕ್ಕೂ ಹೆಚ್ಚು ಪ್ರಮುಖರು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಬುಧವಾರ ಕ್ಷೇತ್ರದಾದ್ಯಂತ ನೂರಾರು ಕಾರ್ಯಕರ್ತರು ಮಹಾಸಂಪರ್ಕ ಅಭಿಯಾನ ನಡೆಸಿದರು.

ಕಾಂಗ್ರೆಸ್‌ನ ಹಲವಾರು ನಾಯಕರು ಕ್ಷೇತ್ರದಲ್ಲೇ ವಾಸ್ತವ್ಯ ಮಾಡಿ ಪ್ರಚಾರ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖಂಡರಾದ ರಮೇಶಕುಮಾರ್, ಯು.ಟಿ.ಖಾದರ್ ಪ್ರಚಾರ ನಡೆಸಿಹೋಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರನ್ನು ಗೆಲ್ಲಿಸಬೇಕೆಂದು ಹಟ ತೊಟ್ಟಿರುವ ಶಾಸಕ ಆರ್.ವಿ.ದೇಶಪಾಂಡೆ ಹಗಲು–ರಾತ್ರಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಮುಖಂಡರಾದ ವಿನಯಕುಮಾರ್ ಸೊರಕೆ, ಜಯಮಾಲಾ ಕೂಡ ಜನರ ಮನೆಗಳಿಗೆ ಭೇಟಿ ನೀಡಿ, ಮತ ಕೇಳುತ್ತಿದ್ದಾರೆ.

ಆದರೆ, ಜೆಡಿಎಸ್ ಪ್ರಚಾರದ ಭರಾಟೆ ಕಾಣುತ್ತಿಲ್ಲ ಎಂದು ಮತದಾರರು ಹೇಳುತ್ತಿದ್ದಾರೆ. ‘ನಾವು ಬಡವರು, ಮಣ್ಣಿನ ಮಕ್ಕಳ ನಾಯಕರು ಎನ್ನುವ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಚುನಾವಣೆ ಘೋಷಣೆಯಾದ ಮೇಲೆ ಒಮ್ಮೆಯೂ ಕ್ಷೇತ್ರಕ್ಕೆ ಬಂದಿಲ್ಲ. ಅವರ ರೈತಪರ ಮಾತುಗಳು ಬರೀ ಹೇಳಿಕೆಗಳಾಗಿವೆ’ ಎಂದು ಬನವಾಸಿಯ ದೇವೇಂದ್ರ ನಾಯ್ಕ ದೂರಿದರು.

ಇದ್ದವರೂ ಖಾಲಿ:

2018 ವಿಧಾನಸಭಾ ಚುನಾವಣೆಯ ವೇಳೆಗೆ ಜೆಡಿಎಸ್‌ಗೆ ಬಂದು, ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಅವರು ಪುನಃ ಕಾಂಗ್ರೆಸ್‌ಗೆ ಸೇರಿದ್ದಾರೆ. ಅವರೊಂದಿಗೆ ಜೆಡಿಎಸ್ ಬನವಾಸಿ ಹೋಬಳಿಯ ವಿವಿಧ ಘಟಕಗಳ ಅಧ್ಯಕ್ಷರೂ ಕಾಂಗ್ರೆಸ್‌ಗೆ ಹೋಗಿದ್ದಾರೆ.

‘ಚುನಾವಣೆ ಬಂದಾಗ ಮಾತ್ರ ಸಕ್ರಿಯವಾಗುವ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಚುನಾವಣೆಯಲ್ಲೂ ಹೆಚ್ಚು ಉತ್ಸಾಹ ತೋರುತ್ತಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಭಾವ ಕುಸಿಯುತ್ತಿದೆ. ಕಳೆದ ಚುನಾವಣೆಯಲ್ಲಿ ರವೀಂದ್ರ ನಾಯ್ಕ ಕ್ಷೇತ್ರದಲ್ಲಿ ಸಾಕಷ್ಟು ಸಿದ್ಧತೆ ನಡೆಸಿದ್ದರೂ ಗಳಿಸಿದ್ದು 6263 ಮತಗಳು ಮಾತ್ರ. ಗೆದ್ದ ಅಭ್ಯರ್ಥಿ ಪಡೆದಿದ್ದು 66,290 ಮತಗಳು. ನಾಯಕತ್ವ ಕೊರತೆಯಿಂದ ಪಕ್ಷವನ್ನು ಮೇಲಕ್ಕೆತ್ತಲು ಸಾಧ್ಯವಾಗುತ್ತಿಲ್ಲ’ ಎಂದು ಬನವಾಸಿ ಭಾಗದ ಜೆಡಿಎಸ್ ಮುಖಂಡರೊಬ್ಬರು ಬೇಸರಿಸಿಕೊಂಡರು.

ಜೆಡಿಎಸ್ ರಾಜ್ಯ ರೈತ ದಳದ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಚೈತ್ರಾ ಗೌಡ ಅವರು ಪಕ್ಷದ ಟಿಕೆಟ್ ಪಡೆದಿದ್ದಾರೆ. ‘ರೋಡ್ ಶೋ ಮಾಡುವುದರಿಂದ ಮತಗಳು ಬರುವುದಿಲ್ಲ. ಜನರಿಗೆ ನಮ್ಮವರು ಎಂಬ ಭಾವನೆ ಬಂದಾಗ ಮತ ಹಾಕುತ್ತಾರೆ. ಹೀಗಾಗಿ ಬೂತ್ ಮಟ್ಟಕ್ಕೆ ಭೇಟಿ ನೀಡಿ, ಅಲ್ಲಿನ ಜನರು, ಕಾರ್ಯಕರ್ತರ ಜೊತೆ ಚರ್ಚಿಸುತ್ತಿದ್ದೇನೆ. ಆಯಾ ಬೂತ್‌ನಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ’ ಎಂದು ಚೈತ್ರಾ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು