ಬುಧವಾರ, ಸೆಪ್ಟೆಂಬರ್ 22, 2021
27 °C
ಒಳಹರಿವು ಹೆಚ್ಚಾದರೆ ನದಿಗೆ ನೀರು: ಎಚ್ಚರಿಕೆ ವಹಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಸೂಚನೆ

ಮತ್ತೆ ಭರ್ತಿಯಾಗುವತ್ತ ಕದ್ರಾ ಜಲಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಆಗಸ್ಟ್ ತಿಂಗಳಿನಲ್ಲಿ ಪ್ರವಾಹಕ್ಕೆ ತತ್ತರಿಸಿದ್ದ ಕಾಳಿ ನದಿಪಾತ್ರದ ಗ್ರಾಮಸ್ಥರಿಗೆ ಮತ್ತೆ ಆತಂಕ ಎದುರಾಗಿದೆ. ಕದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಿದೆ.

34.50 ಮೀಟರ್ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ಶುಕ್ರವಾರ 32.20 ಮೀಟರ್ ನೀರು ಸಂಗ್ರಹವಾಗಿತ್ತು. 17,222 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. ಇದೇ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೆ ಜಲಾಶಯವು ಪುನಃ ತನ್ನ ಗರಿಷ್ಠ ಮಟ್ಟ ತಲುಪಲಿದೆ. ಆಗ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುವುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಸೂಚನೆ ನೀಡಿದೆ. 

ಜಲಾಶಯದ ಕೆಳಭಾಗದಲ್ಲಿ ವಾಸವಿರುವ ಸಾರ್ವಜನಿಕರು ತಮ್ಮ ಜಾನುವಾರು, ಸಾಮಗ್ರಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು. ಅಲ್ಲದೇ ಈ ಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮುಂತಾದ ಚಟುವಟಿಕೆ ಮಾಡಬಾರದು ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

ಜಲಾಶಯದಿಂದ ಶುಕ್ರವಾರ ಒಟ್ಟು 31 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದ್ದು, ಕಾಳಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಮೀನುಗಾರರಿಗೆ ತೊಂದರೆ: ನಗರದಲ್ಲಿ ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಗಾಳಿಯಿಂದ ಮೀನುಗಾರರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ. ದೋಣಿಗಳನ್ನು ಬೈತಖೋಲ ಬಂದರಿನಲ್ಲಿ ಲಂಗರು ಹಾಕಿದ್ದರೂ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ ಕಂಡು ಕಂಗಾಲಾದರು.

ಸಾಮಾನ್ಯವಾಗಿ ಬಂದರಿನಲ್ಲಿ ಐದಾರು ಅಡಿಗಳಷ್ಟು ಕೆಳಗೆ ನೀರಿರುತ್ತದೆ. ಆದರೆ, ಶುಕ್ರವಾರ ನೀರು ಏರಿಕೆ ಕಂಡು ದಕ್ಕೆಯ ಮಟ್ಟಕ್ಕೆ ತಲುಪಿತ್ತು. ಇದರಿಂದ ದೋಣಿಗಳೂ ಮೇಲೆ ಬಂದು ಹಾನಿಗೀಡಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಹಾಗಾಗದೇ ನೀರು ಇಳಿದಾಗ ಮೀನುಗಾರರು ನಿಟ್ಟುಸಿರುಬಿಟ್ಟರು. 

ಬೈತಖೋಲ ಬಂದರಿನಿಂದ ಮೀನು ತುಂಬಿಕೊಂಡು ಬೇರೆ ಬೇರೆ ನಗರಗಳಿಗೆ ಸಾಗುವ ನೂರಾರು ಲಾರಿಗಳು ಸಾಲಾಗಿ ನಿಂತಿದ್ದುದು ಕಂಡುಬಂತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು