ಶನಿವಾರ, ಡಿಸೆಂಬರ್ 7, 2019
25 °C
ತಾರಾ ಪ್ರಚಾರಕರ ಕಾರ್ಯಕ್ರಮಕ್ಕೆ ಸಿದ್ಧತೆ

ಯಲ್ಲಾಪುರ ಉಪಚುನಾವಣೆ | ಜಾತಿ ಲೆಕ್ಕಾಚಾರದಲ್ಲಿ ಮತ ಹೊಂಚು

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಯಲ್ಲಾಪುರ ಕ್ಷೇತ್ರದ ಉಪಚುನಾವಣೆಯ ಗೆಲುವಿಗಾಗಿ ತಂತ್ರ ಹೆಣೆಯುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು, ಜಾತಿವಾರು ಮತ ಲೆಕ್ಕಾಚಾರ ಆರಂಭಿಸಿವೆ.

ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳು ಹಾಗೂ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಒಳಗೊಂಡ ಕ್ಷೇತ್ರದಲ್ಲಿ 1.72 ಲಕ್ಷ ಮತದಾರರಿದ್ದಾರೆ. ಯಲ್ಲಾಪುರದಲ್ಲಿ ಹವ್ಯಕ ಸಮುದಾಯದ ಮತಗಳು ಹೆಚ್ಚಿದ್ದರೆ, ಮುಂಡಗೋಡಿನಲ್ಲಿ ಪರಿಶಿಷ್ಟ ಜಾತಿ, ಲಿಂಗಾಯತರು, ಮರಾಠರ ಮತಗಳು ಹೆಚ್ಚಿವೆ. ಬನವಾಸಿ ಹೋಬಳಿಯಲ್ಲಿ ನಾಮಧಾರಿಗಳು, ಪರಿಶಿಷ್ಟರ ಮತಗಳು ನಿರ್ಣಾಯಕವಾಗಿವೆ.

ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಬ್ರಾಹ್ಮಣರು, ಮರಾಠರು ಅಧಿಕವಿದ್ದರೆ, ಪರಿಶಿಷ್ಟರು, ಲಿಂಗಾಯತರು, ನಾಮಧಾರಿಗಳು, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೌಳಿಗರು, ಪರಿಶಿಷ್ಟ ಪಂಗಡದವರು, ಕ್ರಿಶ್ಚಿಯನ್ನರು, ಗಂಗಾಮತಸ್ಥರು, ಒಕ್ಕಲಿಗರ ಮತಗಳನ್ನು ಸಹ ನಿರ್ಲಕ್ಷಿಸುವಂತಿಲ್ಲ. ಹೀಗಾಗಿ, ಜಾತಿವಾರು ಮತದಾರರ ಪಟ್ಟಿ ಸಿದ್ಧಪಡಿಸಿಕೊಂಡಿರುವ ರಾಜಕೀಯ ಪಕ್ಷಗಳು, ಮತದಾರರ ಒಲವನ್ನು ತಾಳೆ ಹಾಕಿ ಅವರನ್ನು ಸಂಪರ್ಕಿಸುತ್ತಿವೆ.

2018ರ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಅವರಿಗೆ ಗೆಲುವು ತಂದುಕೊಟ್ಟಿದ್ದು ಬನವಾಸಿ ಹೋಬಳಿಯ ಮತಗಳು. ಯಲ್ಲಾಪುರದ ಮತಗಟ್ಟೆಗಳ ಮತ ಎಣಿಕೆಯ ವೇಳೆ ಹಿನ್ನಡೆ ಸಾಧಿಸಿದ್ದ ಹೆಬ್ಬಾರ್, ಬನವಾಸಿ ಭಾಗದ ಮತ ಎಣಿಕೆಯ ಸಂದರ್ಭದಲ್ಲಿ ಮುನ್ನಡೆ ಸಾಧಿಸಿ, ಕೇವಲ 1483 ಮತಗಳಿಂದ ಗೆಲುವು ಸಾಧಿಸಿದ್ದರು. ಹೀಗಾಗಿ, ಬನವಾಸಿ ಭಾಗದ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಬಿಜೆಪಿ ಅಭ್ಯರ್ಥಿ ಹೆಬ್ಬಾರ್ ಅವರು, ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಸೋದರಳಿಯ ಕುಮಾರ್ ಬಂಗಾರಪ್ಪ ಅವರನ್ನು ಪ್ರಚಾರಕ್ಕೆ ಕರೆಯಿಸಿಕೊಳ್ಳಲಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ನ.24ರಂದು ಬನವಾಸಿಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.

ಹಿಂದುಳಿದ ವರ್ಗಗಳ ಮತ ಹೆಚ್ಚಿರುವಲ್ಲಿ ಕಾಂಗ್ರೆಸ್‌ ದೃಷ್ಟಿ ನೆಟ್ಟಿದೆ. ಪಕ್ಷದ ತಾರಾ ಪ್ರಚಾರಕರನ್ನು ಅಂತಹ ಸ್ಥಳಗಳಿಗೆ ಆಹ್ವಾನಿಸಲು ಯೋಜನೆ ರೂಪಿಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 25ಕ್ಕೆ ಕಿರವತ್ತಿ, ಇಂದೂರು, ಪಾಳಾ, ಬನವಾಸಿಗೆ, ಕಾಂಗ್ರೆಸ್‌ ಮುಖಂಡ ರಮೇಶ ಕುಮಾರ್ 23ಕ್ಕೆ ಭೇಟಿ ನೀಡಲಿದ್ದಾರೆ. ಪಕ್ಷದ ಪ್ರಮುಖರಾದ ವಿನಯಕುಮಾರ ಸೊರಕೆ, ರಮೇಶಕುಮಾರ್, ನಜೀರ್ ಅಹಮ್ಮದ್, ಜಯಮಾಲಾ ಅವರ ಕಾರ್ಯಕ್ರಮಗಳು ನಿಗದಿಯಾಗಿವೆ. ಶಾಸಕ ಆರ್.ವಿ.ದೇಶಪಾಂಡೆ ಒಂದು ವಾರ ಕಾಲ ಕ್ಷೇತ್ರ ಪ್ರವಾಸ ಮಾಡಲಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಪರ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು