ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್ರದಾಯದಂತೆ ನೆರವೇರಿದ ‘ಕೋಡಿ’ ತೆರವು

ಹಳ್ಳದ ನೀರು ಸಮುದ್ರ ಸೇರುವಂತೆ ಕಾರ್ಯ
Last Updated 13 ಜೂನ್ 2021, 12:45 IST
ಅಕ್ಷರ ಗಾತ್ರ

ಅಂಕೋಲಾ: ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಪೂಜಗೇರಿ ಹಳ್ಳದ ನೀರಿನ ಮಟ್ಟ ಹೆಚ್ಚಿದ ಪರಿಣಾಮ ತಾಲ್ಲೂಕಿನ ಬೊಬ್ರುವಾಡದ ನದಿಭಾಗ ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ರವಿವಾರ ಪೂಜಗೇರಿ ಹಳ್ಳದ ಕೋಡಿ ಕಡಿದು ಸಂಪ್ರದಾಯ ಮುಂದುವರಿಸಿದರು.

ಪ್ರತಿವರ್ಷ ಮಳೆಗಾಲದ ಆರಂಭದಲ್ಲಿ ಹಳ್ಳದ ನೀರು ಅರಬ್ಬಿ ಸಮುದ್ರ ಸೇರುವಂತೆ ‘ಕೋಡಿ ಕಡಿಯುವ’ ಪದ್ಧತಿ ತಾಲ್ಲೂಕಿನ ವಿಶಿಷ್ಟತೆಗಳಲ್ಲಿ ಒಂದಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ 100ಕ್ಕೂ ಹೆಚ್ಚು ಸ್ಥಳೀಯ ಯುವಕರು ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಡಿಸೆಂಬರ್‌ನಿಂದ ಉಬ್ಬರದ ಸಮಯದಲ್ಲಿ ಜೋರಾದ ಅಲೆಗಳು ನದಿಭಾಗ ಸಮುದ್ರದ ದಡಕ್ಕೆ ಅಪ್ಪಳಿಸುತ್ತವೆ. ಈ ಅವಧಿಯಲ್ಲಿ ಹಳ್ಳದ ನೀರಿನ ಮಟ್ಟ ಹಾಗೂ ಹರಿವು ಕಡಿಮೆ ಇರುತ್ತದೆ. ರಭಸದ ಅಲೆಗಳು ಮೇ ಅಂತ್ಯದ ವೇಳೆಗೆ, ಅಲ್ಲಿ ಮರಳು ದಿಬ್ಬವನ್ನು ಸೃಷ್ಟಿಸುತ್ತದೆ. ಹಳ್ಳ ಮತ್ತು ಸಮುದ್ರ ಬೇರ್ಪಟ್ಟು ಕೋಡಿ ನಿರ್ಮಾಣವಾಗುತ್ತದೆ.

ಮುಂಗಾರು ಆರಂಭಗೊಂಡಾಗ ಹಳ್ಳದ ನೀರಿನ ಮಟ್ಟ ಏರಿಕೆಯಾಗುತ್ತದೆ. ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳ ಗದ್ದೆಗಳು ಜಲಾವೃತಗೊಳ್ಳುತ್ತವೆ. ಬೊಬ್ರುವಾಡದ ಬೊಬ್ರುದೇವರ ಕೆರೆ ಭರ್ತಿಯಾದರೆ ಮನೆಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗುತ್ತದೆ.

ಬೊಬ್ರುದೇವರ ಕೆರೆ ತುಂಬಿದ ನಂತರ ನದಿಭಾಗ ಗ್ರಾಮಸ್ಥರ ನೇತೃತ್ವದಲ್ಲಿ ಸುತ್ತಲಿನ ಜನರು ಕೋಡಿ ಕಡಿಯುವ ಕಾರ್ಯಕ್ಕೆ ಮುಂದಾಗುತ್ತಾರೆ. ಇಲ್ಲವಾದಲ್ಲಿ ಸುತ್ತಲಿನ ಮನೆಗಳಿಗೆ ನೀರು ನುಗ್ಗಿ ಅಪಾಯ ಸೃಷ್ಟಿಸುವ ಆತಂಕ ಎದುರಾಗುತ್ತದೆ. ಕೋಡಿ ಕಡಿದ ನಂತರ, ಇಲ್ಲಿನ ಕೃಷಿ ಚಟುವಟಿಕೆ ಆರಂಭವಾಗುತ್ತದೆ. ಹಳ್ಳದ ನೀರು ಸರಾಗವಾಗಿ ಸಮುದ್ರವನ್ನು ತಲುಪುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಕಾಂತ ನಾಯ್ಕ, ನಾಗೇಂದ್ರ ನಾಯ್ಕ, ದೀಪಾ ಸೋಮಶೇಖರ ನಾಯ್ಕ, ಶಾರದಾ ಲೋಹಿತ ಬಂಟ ಮುಂದಾಳತ್ವದಲ್ಲಿ ಸುಮಾರು 70 ಯುವಕರು ಕೋಡಿ ಕಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡರು.

*
ಕೋಡಿ ಕಡಿಯುವುದು ಇಲ್ಲಿನವರಿಗೆ ಹೊಸ ಹುರುಪು ನೀಡುತ್ತದೆ. ಕೆಲವೊಮ್ಮೆ ಅಪಾಯಗಳು ಸಂಭವಿಸಿವೆ. ಅಲೆಗಳಿಂದಾಗಿ ಮರಳಿನ ದಿಬ್ಬ ಉಂಟಾಗಿ ಮತ್ತೊಮ್ಮೆ ಕೋಡಿ ಕಡೆದಿದ್ದೂ ಇದೆ.
- ಲೋಹಿತ ಬಂಟ, ಸ್ಥಳೀಯ.

*
ಕೋಡಿ ಕಡಿಯುವವರಿಗೆ ಕೇವಲ ₹ 5,000 ಗೌರವಧನ ನೀಡಲಾಗುತ್ತದೆ. ಇದನ್ನು ಹೆಚ್ಚಿಸುವುದಾಗಿ ಹೇಳಿದ್ದ ಜಿಲ್ಲಾಡಳಿತದ ಭರವಸೆ ಈಡೇರಿಲ್ಲ.
- ಅರುಣ್ ನಾಯ್ಕ, ಗ್ರಾಂ.ಪಂ. ಮಾಜಿ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT