ಶನಿವಾರ, ಜುಲೈ 31, 2021
27 °C
974 ಸಿಬ್ಬಂದಿಯಿಂದ ಮುಂಗಾರು ಗಸ್ತು

ಕಾರವಾರ | ಮುಂಗಾರಿಗೆ ಸಿದ್ಧವಾದ ಕೊಂಕಣ ರೈಲ್ವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕರಾವಳಿಯ ಜನರ ಜೀವನಾಡಿಯಾಗಿರುವ ಕೊಂಕಣ ರೈಲ್ವೆಯು, ಲಾಕ್‌ಡೌನ್ ಅವಧಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಪೂರ್ಣಗೊಳಿಸಿದೆ. ರೈಲು ಹಳಿಯಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುವಂತಾಗಲು ಆದ್ಯತೆ ನೀಡಲಾಗಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ.ವರ್ಮಾ ತಿಳಿಸಿದ್ದಾರೆ.

ಗುಡ್ಡಗಳನ್ನು ಕತ್ತರಿಸಿದ ಪ್ರದೇಶದಲ್ಲೂ ಹೆಚ್ಚಿನ ಗಮನ ಹರಿಸಲಾಗಿದೆ. ಹಳಿಯ ಮೇಲೆ ಮಣ್ಣು ಕುಸಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಮುಂಗಾರು ಅವಧಿಯಲ್ಲಿ ಕೊಂಕಣ ರೈಲ್ವೆಯ 974 ಸಿಬ್ಬಂದಿ ಹಳಿ ಸುರಕ್ಷತೆಗಾಗಿ ಗಸ್ತು ಸಂಚರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ರೈಲುಗಳ ವೇಗವನ್ನು ನಿರ್ಬಂಧಿಸಲಾಗುವುದು. ಭಾರಿ ಮಳೆ ಬೀಳುವಾಗ ರೈಲಿನ ವೇಗವು ಗಂಟೆಗೆ 40 ಕಿಲೋಮೀಟರ್‌ ಮೀರದಂತೆ ಲೋಕೊ ಪೈಲಟ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಸುರಕ್ಷಾ ವಿಭಾಗದ ಸಿಬ್ಬಂದಿಗೆ ಮೊಬೈಲ್ ಫೋನ್‌ಗಳನ್ನು ಒದಗಿಸಲಾಗಿದೆ. ಲೋಕೊ ಪೈಲಟ್‌ಗಳು ಮತ್ತು ಭದ್ರತಾ ಸಿಬ್ಬಂದಿಗೆ ವಾಕಿಟಾಕಿಗಳನ್ನೂ ನೀಡಲಾಗಿದೆ. ರೈಲು ಹಳಿಯಲ್ಲಿ ಪ್ರತಿ ಒಂದು ಕಿಲೋಮೀಟರ್ ಅಂತರದಲ್ಲಿ ತುರ್ತು ಸಂವಹನಕ್ಕಾಗಿ ಸಾಕೆಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಂದುವೇಳೆ ಹಳಿಯ ಮೇಲೆ ಮಣ್ಣು, ಕಲ್ಲು ಬಿದ್ದರೆ ಕೂಡಲೇ ತೆರವು ಮಾಡಲು ಯಂತ್ರೋಪಕರಣಗಳನ್ನು ಸಿದ್ಧ ಪಡಿಸಿಕೊಳ್ಳಲಾಗಿದೆ. ತುರ್ತು ಸ್ಥಿತಿಯಲ್ಲಿ ಬಳಸಲು ವೈದ್ಯಕೀಯ ನೆರವಿನ ವಾಹನದಲ್ಲಿ ಸ್ಯಾಟಲೈಟ್ ಫೋನ್ ಸಂವಹನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಎಲ್ಲ ಪ್ರಮುಖ ಸಿಗ್ನಲ್‌ಗಳಿಗೆ ಎಲ್.ಇ.ಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಮಳೆಯ ಪ್ರಮಾಣವನ್ನು ಸ್ವಯಂ ಆಗಿ ದಾಖಲಿಸಿಕೊಳ್ಳುವ ಮಾಪಕಗಳನ್ನು ಕಾರವಾರ ಮತ್ತು ಭಟ್ಕಳ ಸೇರಿದಂತೆ ಒಂಬತ್ತು ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ. ಮೂರು ಸೇತುವೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡುವ ವ್ಯವಸ್ಥೆಯಿದೆ ಎಂದು ತಿಳಿಸಿದ್ದಾರೆ. 

ಮುಂಗಾರು ವೇಳಾಪಟ್ಟಿ: ಮುಂಗಾರು ಅವಧಿಯ ಕೊಂಕಣ ರೈಲ್ವೆ ವೇಳಾಪಟ್ಟಿಯು ಜೂನ್ 10ರಿಂದ, ಅ.31ರವರೆಗೆ ಜಾರಿಯಲ್ಲಿರಲಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ರೈಲಿನ ಮಾಹಿತಿಯನ್ನು www.konkanrailway.com, ‘KRCL App’ ಅಥವಾ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ಪಡೆದುಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು