ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಸಿಬ್ಬಂದಿ ಕೊರತೆಯಿಂದ ನಲುಗಿದ ಆಸ್ಪತ್ರೆ

ಗುತ್ತಿಗೆ ನೌಕರರಿಗೆ ಸಿಗದ ವೇತನ, ಉತ್ತಮ ಸೇವೆಗೆ ಹಿನ್ನಡೆಯ ಆತಂಕ
Last Updated 4 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕುಮಟಾ: ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಇಲ್ಲಿಯ100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಒಳ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ.

ಈ ಹಿಂದೆ ಆಸ್ಪತ್ರೆಯಲ್ಲಿ 20 ಜನ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಸರ್ಕಾರವು ಹಣಕಾಸು ಕೊರತೆಯಿದೆ ಎಂದು ಹೇಳಿ ಆರು ತಿಂಗಳ ಹಿಂದೆ ಎಂಟು ಜನರನ್ನು ಕೆಲಸದಿಂದ ಬಿಡುಗಡೆ ಮಾಡಿತು. ಈಗ ಇರುವ12 ಜನರಿಗೂ ಕಾಲಕಾಲಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ. ಬಾಣಂತಿಯರು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಹಾಗೂ ಹಿರಿಯರನ್ನು ಹಾಸಿಗೆಗೆ ವರ್ಗಾಯಿಸುವುದಕ್ಕೆ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಹಾಗಾಗಿ ಕಚೇರಿ ಕೆಲಸ ಮಾಡುವ ಸಿಬ್ಬಂದಿಯನ್ನೇಕರೆಸುವಂತಾಗಿದೆ.

ವೈದ್ಯರಿಂದ ಹಣಕಾಸು ವ್ಯವಸ್ಥೆ:‘ರಾತ್ರಿ ಪಾಳಿಯಲ್ಲಿ ಮೂವರು ಮಹಿಳಾ ಸಿಬ್ಬಂದಿಯಿದ್ದರೆ, ಕನಿಷ್ಠ ಒಬ್ಬರಾದರೂ ಪುರುಷ ಸಿಬ್ಬಂದಿ ಇರಬೇಕು. ಇಲ್ಲದಿದ್ದರೆ ತುರ್ತು ಚಿಕಿತ್ಸೆ ನೀಡುವುದು ಕಷ್ಟ. ಚೌತಿ ಹಬ್ಬದ ಸಂದರ್ಭದಲ್ಲೂ12 ಜನ ಗುತ್ತಿಗೆ ಕಾರ್ಮಿಕರಿಗೆ ವೇತನ ಸಿಕ್ಕಿರಲಿಲ್ಲ. ಆಸ್ಪತ್ರೆಯ ವೈದ್ಯರೆಲ್ಲ ಸೇರಿ ಅವರಿಗೆ ಹಣಕಾಸು ವ್ಯವಸ್ಥೆ ಮಾಡಿದರು’ ಎನ್ನುತ್ತಾರೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ.

‘ಆಸ್ಪತ್ರೆಗೆ ಸರ್ಕಾರದಿಂದ ಮಂಜೂರಾದ ಗ್ರೂಪ್ ‘ಡಿ’ ಹುದ್ದೆಗಳ ಸಂಖ್ಯೆ 32. ಅವರಲ್ಲಿ ನೇಮಕಾತಿ ಆಗಿರುವವರುಏಳುಜನ ಮಾತ್ರ. ಅವರಲ್ಲೂ ಒಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇಬ್ಬರು ಹೆರಿಗೆ ರಜೆ ಪಡೆದಿದ್ದಾರೆ. ಇನ್ನೊಬ್ಬರಿಗೆ ವಯಸ್ಸಾಗಿದ್ದರಿಂದ ರೋಗಿಗಳನ್ನು ಹಾಸಿಗೆ ವರ್ಗಾಯಿಸುವಂಥ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸರಿಯಾಗಿ ಕೆಲಸಕ್ಕೆ ಸಿಗುವವರು ಮೂವರು ಮಾತ್ರ. ಅವರನ್ನೇ ರೋಗಿಗಳ ನೋಂದಣಿ, ಡಾಟಾ ಎಂಟ್ರಿ ಮುಂತಾದ ಕೆಲಸಕ್ಕೂ ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗಿದೆ’ ಅಸಹಾಯಕತೆ ವ್ಯಕ್ತಪಡಿಸಿದರು.

ಆಸ್ಪತ್ರೆಯಫಿಸಿಶಿಯನ್ ಡಾ.ಶ್ರೀನಿವಾಸ ನಾಯಕ ಅವರ ಬಳಿ ನೆಗಡಿ, ಜ್ವರ, ತಲೆನೋವು ಮುಂತಾದ ಸಾಮಾನ್ಯ ತೊಂದರೆಯುಳ್ಳ ರೋಗಿಗಳೂ ಚಿಕಿತ್ಸೆ ಬಯಸುತ್ತಾರೆ. ಮಧ್ಯಾಹ್ನ ಎರಡರಿಂದ ಊಟದ ಸಮಯದಲ್ಲೂ ಅವರ ಕೋಣೆಯ ಎದುರು ಕನಿಷ್ಠ30ರೋಗಿಗಳು ಕಾಯುತ್ತಿರುತ್ತಾರೆ. ಇದರಿಂದತುರ್ತುರೋಗಿಗಳಿಗೆ ತೊಂದರೆಯಾಗುತ್ತಿದೆ.

ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ, ‘ಆರೋಗ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಗುತ್ತಿಗೆ ಕಾರ್ಮಿಕರಿಗೆ ಆರು ತಿಂಗಳ ವೇತನ ಬಿಡುಗಡೆ ಮಾಡಿಸಿದ್ದೇನೆ. ಹೊಸ ಗುತ್ತಿಗೆ ಕಾರ್ಮಿಕರ ನೇಮಕಾತಿ ಟೆಂಡರ್ ಪ್ರಕ್ರಿಯೆ ಜಿಲ್ಲಾಧಿಕಾರಿ ಹಂತದಲ್ಲಿದೆ’ ಎಂದರು.

ಪ್ರತಿಭಟನೆ; ಮನವೊಲಿಕೆ: ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರು ತಮಗೆ ವೇತನ ಬಿಡುಗಡೆಯಾಗದ ಹೊರತು ಕೆಲಸ ಮಾಡುವುದಿಲ್ಲ ಎಂದು ಗುರುವಾರ ಪ್ರತಿಭಟಿಸಿದರು. ಆಗ ಸ್ಥಳಕ್ಕೆ ಬಂದ ಗುತ್ತಿಗೆ ಕಾರ್ಮಿಕರ ಪೂರೈಕೆದಾರ ದಿಲೀಪ್ ನಾಯಕ, ‘ಸದ್ಯ ಎರಡು ತಿಂಗಳ ಸಂಬಳ ಕೊಡುತ್ತೇನೆ, ಕೆಲಸಕ್ಕೆ ಹಾಜರಾಗಿ’ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಗುತ್ತಿಗೆ ಕಾರ್ಮಿಕರು ಒಪ್ಪಲಿಲ್ಲ.

‘ನನಗೆ ಸರ್ಕಾರದಿಂದ ಏಳು ತಿಂಗಳಿಂದ ಹಣ ಪಾವತಿಯಾಗಿಲ್ಲ. ಉಳಿದ ಮೊತ್ತ ಆದಷ್ಟು ಬೇಗ ಪಾವತಿಸುತ್ತೇನೆ’ ಎಂದು ಮನವೊಲಿಸಿದರು. ಸ್ಥಳದಲ್ಲಿದ್ದ ರಾಜ್ಯ ಕಬಡ್ಡಿ ಸಂಸ್ಥೆ ಉಪಾಧ್ಯಕ್ಷ ಸೂರಜ್ ನಾಯ್ಕ ಸೋನಿ, ಜಿಲ್ಲಾಧಿಕಾರಿ ಜೊತೆ ಮೊಬೈಲ್ ಮೂಲಕ ಮಾತನಾಡಿದರು. ಗುತ್ತಿಗೆ ಕಾರ್ಮಿಕರ ಸಂಬಳದ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಸಂಬಳದ ನಿರೀಕ್ಷೆಯ ಮೇರೆಗೆ ಗುತ್ತಿಗೆ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಒಪ್ಪಿದರು.

*
ಇನ್ನು ಮುಂದೆ ರೋಗಿಗಳ ಹೆಸರು ನೋಂದಾಯಿಸುವ ಕೌಂಟರ್ ಬಳಿಯೇ ಯಾವ ರೋಗಿಗಳು, ಯಾವ ವೈದ್ಯರ ಬಳಿ ಹೋಗಬೇಕು ಎಂದುಸೂಚಿಸಲಾಗುವುದು.
-ಡಾ.ಗಣೇಶ ನಾಯ್ಕ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ

*
ಫಿಸಿಶಿಯನ್ ಡಾ.ಶ್ರೀನಿವಾಸ ನಾಯಕ ಅವರ ಸೇವೆ ತುರ್ತು ಅಗತ್ಯವುಳ್ಳವರಿಗೆ ಸಿಗುವಂತೆ ಮಾಡುವ ಕುರಿತು ಕುಮಟಾಕ್ಕೆ ಬಂದಾಗ ಸಭೆ ಕರೆದು ಚರ್ಚಿಸುತ್ತೇನೆ.
-ಡಾ.ಅಶೋಕ ಕುಮಾರ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT