ಗುರುವಾರ , ಮಾರ್ಚ್ 23, 2023
28 °C
ಒಂದು ತಿಂಗಳ ಭತ್ತ, ಮೆಕ್ಕೆಜೋಳದ ಬೆಳೆಗೆ ನೀರಿನ ಕೊರತೆ

ಮುಂಡಗೋಡ: ಮರೆಯಾದ ಮಳೆ, ಸೊರಗುತ್ತಿದೆ ಬೆಳೆ

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಒಣಗಿದ ಭೂಮಿಯಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಎಲೆಗಳು, ಹಸಿರಿನಿಂದ ಕಂಗೊಳಿಸುವ ಗದ್ದೆಗಳಲ್ಲಿ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಬೆಳೆಯ ಬಣ್ಣ. ಆಗಸದತ್ತ ಮುಖ ಮಾಡಿರುವ ಅನ್ನದಾತನ ಕೈ ಹಿಡಿಯದ ವರುಣ.

ತಾಲ್ಲೂಕಿನಲ್ಲಿ ಎರಡು ವಾರಗಳಿಂದ ಮಳೆ ಮರೆಯಾಗಿದೆ. ಈ ಸಲ ಬಿತ್ತನೆಯ ಸಮಯದಿಂದ ಹಿಡಿದು, ಮೊಳಕೆಯೊಡೆದು ಬೆಳೆ ಹುಟ್ಟುವರೆಗೂ ಮಳೆಯ ಅನಿಶ್ಚಿತತೆ ರೈತರನ್ನು ಕಾಡಿದೆ. ಸದ್ಯ ಒಂದು ತಿಂಗಳ ಆಸುಪಾಸಿನ ಭತ್ತ ಹಾಗೂ ಮೆಕ್ಕೆಜೋಳ ಬೆಳೆದು ನಿಂತಿದೆ. ಮಳೆಯ ನಂಬಿ ರೈತರು ಗೊಬ್ಬರ ಸಹ ಹಾಕಿದ್ದಾರೆ. ಆದರೆ, ಸರಿಯಾದ ಸಮಯದಲ್ಲಿಯೇ ಮಳೆ ಕೈಕೊಟ್ಟಿದ್ದು, ಅಲ್ಲಲ್ಲಿ ಬೆಳೆ ಒಣಗಿದಂತೆ ಕಂಡುಬರುತ್ತಿದೆ.

ತಾಲ್ಲೂಕಿನಲ್ಲಿ 14,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಶೇ 90ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಇನ್ನೂ ಕೆಲವು ರೈತರು ಭತ್ತ ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಳೆ ಬೇಡುವ ಭತ್ತದ ಬೆಳೆ ಕುಂಠಿತಗೊಂಡರೂ ಅಲ್ಪ ಮಳೆಯಲ್ಲಿ ಲಾಭ ನೀಡುತ್ತದೆ ಎಂದುಕೊಂಡು, ಮೆಕ್ಕೆಜೋಳ ಬೆಳೆಯುವ ರೈತರ ಸಂಖ್ಯೆ ಈ ವರ್ಷವೂ ಜಾಸ್ತಿಯಾಗಿದೆ. ಆದರೆ, ಮೆಕ್ಕೆಜೋಳಕ್ಕೂ ನೀರಿನ ಬರ ಎದುರಾಗಿದೆ.

‘ತಿಂಗಳ ಒಪ್ಪತ್ತಿನ ಬೆಳೆ ಬಂದಿದೆ. ಬರೋಬ್ಬರಿ 15 ದಿನಗಳಿಂದ ಮಳೆ ದೂರವಾಗಿದೆ. ಮಳೆ ಆಗುತ್ತದೆ ಎಂದು ನಂಬಿ ಗೊಬ್ಬರ ಹರಡಿದ್ದೇವೆ. ಆದರೆ, ಸುಡುಬಿಸಿಲು ಹಾಗೂ ಗೊಬ್ಬರದ ಉಷ್ಣಾಂಶ ಜಾಸ್ತಿಯಾಗಿ, ಬೆಳೆ ಒಣಗುತ್ತಿದೆ. ಕಳೆ (ಹುಲ್ಲು) ಬೆಳೆದಿದೆ. ಕಳೆನಾಶಕ ಸಿಂಪಡಿಸಿದ ಗದ್ದೆಗಳಿಗೆ ತುರ್ತಾಗಿ ಮಳೆ ಬೇಕಾಗಿದೆ’ ಎನ್ನುತ್ತಾರೆ ರೈತ ಪಸರಪ್ಪ ಶಿಂಗನಳ್ಳಿ.

‘ಭತ್ತದ ಗದ್ದೆಗಳಲ್ಲಿ ಬರವು ಹೊಡೆಯುವ ಕೆಲಸ ನಡೆದಿದೆ. ಸ್ವಲ್ಪ ಮಟ್ಟಿಗಾದರೂ ಗದ್ದೆಯಲ್ಲಿ ಹಸಿ ಇರಬೇಕಿತ್ತು. ಆದರೆ, ದೂಳು ಹಾರುತ್ತಿದೆ. ಇದೇ ರೀತಿ ವಾತಾವರಣ ಮುಂದುವರಿದರೆ, ಭತ್ತದ ಬೆಳವಣಿಗೆಯಲ್ಲಿ ಕುಂಠಿತಗೊಳ್ಳಲಿದೆ’ ಎಂದು ರೈತ ಪರುಶುರಾಮ ದೊಡ್ಮನಿ ಆತಂಕ ವ್ಯಕ್ತಪಡಿಸಿದರು.

‘40 ದಿನಗಳ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದೇ ಸಮಯದಲ್ಲಿ ಬೆಳೆಗೆ ನೀರಿನ ಅಗತ್ಯ ಹೆಚ್ಚಿರುತ್ತದೆ. ಇದಕ್ಕಿಂತ ಮುಂಚಿನ ದಿನಗಳಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿತ್ತು. ಸದ್ಯ ಭತ್ತ ಹಾಗೂ ಮೆಕ್ಕೆಜೋಳ ಎರಡೂ ಬೆಳೆಗಳಿಗೆ ಮಳೆಯ ಅಗತ್ಯವಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಒಂದೆರೆಡು ದಿನಗಳಲ್ಲಿ ಮಳೆಯಾಗುವ ಆಶಾಭಾವನೆ ಇದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಹೇಳಿದರು.

ಆಸರೆಯಾದ ಕೊಳವೆಬಾವಿ:

ಕೊಳವೆ ಬಾವಿ ಸೌಲಭ್ಯ ಹೊಂದಿರುವ ರೈತರು, ಬೆಳೆಯ ರಕ್ಷಣೆಗೆ ಮುಂದಾಗಿದ್ದಾರೆ. ಮೆಕ್ಕೆಜೋಳ ಹಾಗೂ ಭತ್ತಕ್ಕೆ ಕೊಳವೆಬಾವಿಯ ನೀರನ್ನು ಹರಿಸುತ್ತಿದ್ದಾರೆ.

‘ಮೇ ತಿಂಗಳ ಅಂತ್ಯದಲ್ಲಿ ಹಾಗೂ ಜೂನ್‌ ಆರಂಭದಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಕಂಡುಬಂದಿಲ್ಲ. ಸದ್ಯ ಬೆಳೆಗೆ ನೀರಿನ ಅಗತ್ಯವಿದ್ದು, ಕೊಳವೆಬಾವಿ ಮೂಲಕ ನೀರು ಹರಿಸಲಾಗುತ್ತಿದೆ’ ಎಂದು ಪಾಳಾ ಭಾಗದ ರೈತ ಶಿವಕುಮಾರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು