ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಟ್ ಫಿಶಿಂಗ್: ಗೋವಾದ ದೋಣಿಗಳ ಜಪ್ತಿ

ಕಾರವಾರದಲ್ಲಿ ಕೋಸ್ಟ್‌ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ
Last Updated 1 ಮೇ 2020, 14:49 IST
ಅಕ್ಷರ ಗಾತ್ರ

ಕಾರವಾರ: ನಿಷೇಧಿತ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ಮಾಡುತ್ತಿದ್ದ ಗೋವಾದ ಎರಡು ದೋಣಿಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಶುಕ್ರವಾರ ಪತ್ತೆ ಹಚ್ಚಿದ್ದಾರೆ. ಅವುಗಳನ್ನು ಕರಾವಳಿ ಕಾವಲು ಪೊಲೀಸರ ಜೊತೆಗೂಡಿ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಗೋವಾದಬೇತುಲ್ ಬಂದರಿನ ‘ಸೀ ಹಾಕ್’ ಮತ್ತು ‘ಡ್ರ್ಯಾಗನ್ ಸೀ’ ಹೆಸರಿನ ದೋಣಿಗಳು ಕಾರವಾರ ಕರಾವಳಿ ತೀರದಿಂದ ಅನತಿ ದೂರದಲ್ಲಿ ರಾತ್ರಿ ವೇಳೆಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದವು. ಅವುಗಳನ್ನು ವಶಕ್ಕೆ ಪಡೆದುಬೈತಖೋಲ್ ಮೀನುಗಾರಿಕಾ ಬಂದರಿಗೆ ತಂದಿದ್ದಾರೆ.

ದೋಣಿಗಳಲ್ಲಿ ಅಂಕೋಲಾದ ಕೇಣಿಯ ಮೂವರು, ಒಡಿಶಾದ 26 ಮಂದಿ ಸೇರಿದಂತೆ ಒಟ್ಟು 29 ಮೀನುಗಾರರಿದ್ದರು. ಎಲ್ಲರ ವೈದ್ಯಕೀಯತಪಾಸಣೆ ಮಾಡಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ತಿಳಿಸಿದ್ದಾರೆ.

‘ಎರಡೂ ದೋಣಿಗಳು ಗೋವಾದ ಸಾಲ್ಸೆಟ್‌ನ ಉಮೇಶ ಲಕ್ಷ್ಮಣ ಸಾಳಗಾಂವ್ಕರ್ ಎಂಬುವವರಿಗೆ ಸೇರಿವೆ. ಒಂದರಲ್ಲಿ ಮೀನುಗಾರಿಕೆ ಮಾಡುತ್ತಿದ್ದರೆ, ಮತ್ತೊಂದರಲ್ಲಿ 20 ಕೆ.ವಿ.ಎ ಸಾಮರ್ಥ್ಯದ ಬೃಹತ್ ಜನರೇಟರ್ ಮತ್ತು ಎಲ್.ಇ.ಡಿ ಬಲ್ಬ್‌ಗಳನ್ನು ಅಳವಡಿಸಲಾಗಿತ್ತು.ದೋಣಿಯಲ್ಲಿ ಸುಮಾರು 500 ಕೆ.ಜಿ.ಗಳಷ್ಟು ಮೀನನ್ನು ಮಂಜುಗಡ್ಡೆಯಲ್ಲಿ ಶೇಖರಿಸಿಡಲಾಗಿತ್ತು’ ಎಂದು ಮಾಹಿತಿ ನೀಡಿದರು.

‘ದೋಣಿಗಳಲ್ಲಿ ಮೀನುಗಾರರಿಗೆ ಅಗತ್ಯ ಆಹಾರ ಸಾಮಗ್ರಿ ಸಂಗ್ರಹವಿದೆ. 29 ಮೀನುಗಾರರ ಪೈಕಿ ಕೇವಲ 12 ಮಂದಿಯ ಬಳಿ ಮಾತ್ರ ಗುರುತಿನ ಚೀಟಿಗಳಿದ್ದವು. ಆ ದೋಣಿಗಳಿಗೆ ಸಂಬಂಧಿಸಿದಂತೆ ದಾಖಲೆಗಳೂ ಸಮರ್ಪಕವಾಗಿಲ್ಲ. ಸುಮಾರು 40 ದೋಣಿಗಳು ಲೈಟ್ ಫಿಶಿಂಗ್ ಮಾಡುತ್ತಿದ್ದ ಮಾಹಿತಿಯಿತ್ತು.ಪೊಲೀಸರು ದಾಳಿ ಮಾಡಿದಾಗ ಉಳಿದ ದೋಣಿಗಳು ತಪ್ಪಿಸಿಕೊಂಡಿವೆ’ ಎಂದು ತಿಳಿಸಿದರು.

‘ಲೈಟ್‌ಫಿಶಿಂಗ್ ನಿಷೇಧಾಜ್ಞೆ ಉಲ್ಲಂಘನೆಮಾಡಿದ್ದಕ್ಕೆದಂಡ ನಿಗದಿ ಮಾಡಲಾಗುತ್ತದೆ. ಮೀನುಗಾರರಿಗೆ ದಡಕ್ಕೆ ಬಾರದೇ ದೋಣಿಯಲ್ಲೇ ಇರುವಂತೆ ಸೂಚಿಸಲಾಗಿದೆ. ಜನರೇಟರ್ ಅನ್ನು ಕರಾವಳಿ ಕಾವಲು ಪೊಲೀಸ್ ಠಾಣೆಯ ಜಟ್ಟಿಯಲ್ಲಿ ಇಡಲಾಗಿದೆ. ಮುಂದಿನ ಕ್ರಮಗಳನ್ನು ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ಲಾಕ್‌ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಮೀನುಗಾರಿಕೆ ನಿಷೇಧವಿದ್ದರೂ ಗೋವಾದ ದೋಣಿ ಮಾಲೀಕರು ಲೈಟ್ ಫಿಶಿಂಗ್ ಮುಂದುವರಿಸಿದ್ದಾರೆ. ಇದಕ್ಕೆ ಸ್ಥಳೀಯ ಮೀನುಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಏ.26ರಂದು ‘ಗೋವಾ ದೋಣಿಗಳಿಗೆ ಲಾಕ್‌ಡೌನ್ ಇಲ್ಲ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT