ಮಂಗಳವಾರ, ಏಪ್ರಿಲ್ 20, 2021
31 °C
157 ವರ್ಷಗಳ ಹಿಂದೆ ಸಮುದ್ರ ಮಧ್ಯದಲ್ಲಿ ನಿರ್ಮಾಣವಾದ ದೀಪಸ್ತಂಭ

ಇತಿಹಾಸಕ್ಕೆ ಬೆಳಕು ಬೀರುವ ‘ಲೈಟ್ ಹೌಸ್’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಈ ನಡುಗಡ್ಡೆಯು ನಿತ್ಯವೂ ನೂರಾರು ದೋಣಿಗಳು, ಹಡಗುಗಳಿಗೆ ದಾರಿ ತೋರುತ್ತಿತ್ತು. ಆದರೆ, ಕಾಲಕ್ರಮೇಣ ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ಅವಲಂಬನೆ ಕಡಿಮೆಯಾಯಿತು. ಈಗ ಪ್ರವಾಸಿ ತಾಣವಾಗಿ ಜನರನ್ನು ಆಕರ್ಷಿಸುತ್ತಿದೆ.

ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ದೇವಗಡ ನಡುಗಡ್ಡೆಯೇ ‘ಲೈಟ್ ಹೌಸ್ ದ್ವೀಪ’ ಎಂದು ಪ್ರಸಿದ್ಧವಾಗಿದೆ. 20 ಎಕರೆಗೂ ಅಧಿಕ ವಿಸ್ತೀರ್ಣವಾಗಿರುವ ಈ ನಡುಗಡ್ಡೆಯು ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಮುದ ನೀಡುತ್ತದೆ.

ಬ್ರಿಟಿಷರು ನಿರ್ಮಿಸಿದ ಈ ದೀಪಸ್ತಂಭದ ತುದಿಯಲ್ಲಿ ಆಗಿನ ಕಾಲದಲ್ಲಿ ಸೀಮೆಎಣ್ಣೆ ದೀಪ ಉರಿಸಲಾಗುತ್ತಿತ್ತು. ಈಗ ಸೌರ ವಿದ್ಯುತ್ ಬಳಕೆ ಮಾಡಿಕೊಂಡು, ಪ್ರಖರವಾದ ಬೆಳಕು ಸೂಸುವ ಬಲ್ಬ್‌ಗಳ ಬಳಕೆಯಾಗುತ್ತಿದೆ. ಸ್ಫಟಿಕದ ಫಲಕಗಳ ಮೂಲಕ ಬೆಳಕು ಹೊರ ಬಂದು 20 ನಾಟಿಕಲ್ ಮೈಲು ದೂರದವರೆಗೆ ಕಾಣಿಸುತ್ತದೆ.

ವಿವಿಧ ಮಾಪಕಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧವಾಗಿದ್ದ ಬ್ರಿಟಿಷ್ ಕಂಪನಿ ‘ಲಾರೆನ್ಸ್ ಆ್ಯಂಡ್ ಮಾಯೋ’ ನಿರ್ಮಾಣದ ‘ಬ್ಯಾರೋ ಮೀಟರ್’ (ಗಾಳಿಯ ಒತ್ತಡದ ಮಾಪಕ), ದುರ್ಬೀನು ಈಗಲೂ ಇಲ್ಲಿವೆ. ಅಲ್ಲದೇ ತಂತ್ರಜ್ಞಾನದ ಬಳಕೆಗೂ ಮೊದಲು ನಿಶಾನೆ ತೋರಲು ಬಳಸುತ್ತಿದ್ದ ಸೀಮೆಎಣ್ಣೆ ದೀಪಗಳನ್ನೂ ಇಲ್ಲಿ ಜತನದಿಂದ ಕಾಪಿಡಲಾಗಿದೆ. ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ಫಿರಂಗಿಯೊಂದನ್ನು ದೀಪಸ್ತಂಭದ ಆವರಣದಲ್ಲಿ ಸ್ಥಾಪಿಸಲಾಗಿದೆ.

ಸ್ತಂಭವು ಗೋಲಾಕಾರದಲ್ಲಿದ್ದು, ಮೆಟ್ಟಿಲುಗಳನ್ನೇರಿ ಮೇಲೆ ಸಾಗಬೇಕು. ಅದರ ತುದಿಗೆ ತಲುಪಿದಾಗ ವಿಶಾಲವಾಗಿ ಕಾಣುವ, ನೀಲಿ ಬಣ್ಣದ ಸಮುದ್ರ ಮಂತ್ರಮುಗ್ಧಗೊಳಿಸುತ್ತದೆ. ದೀಪಸ್ತಂಭದ ನಿರ್ವಹಣೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ‘ಲೈಟ್‌ಶಿಪ್‌ಗಳು ಮತ್ತು ಲೈಟ್‌ಹೌಸ್‌ಗಳ ನಿರ್ದೇಶನಾಲಯ’ದಿಂದಲೇ ಆಗುತ್ತದೆ. ಅದರ ಕೇಂದ್ರ ಕಚೇರಿ ಉತ್ತರ ಪ್ರದೇಶದ ನೊಯಿಡಾದಲ್ಲಿದೆ. ದೇವಗಡದಲ್ಲಿ ಸದ್ಯಕ್ಕೆ ಒಬ್ಬರು ಕಾಯಂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೇವಗಡಕ್ಕೆ ಕಾರವಾರದಿಂದ ದೋಣಿಯಲ್ಲಿ ಸಾಗಿ ತಲುಪಬಹುದು. ನಡುಗಡ್ಡೆಯ ತಳಭಾಗದಿಂದ ಸುಮಾರು 20 ನಿಮಿಷಗಳ ಕಾಲ ಏರುದಾರಿಯಲ್ಲಿ ಸಾಗಬೇಕು. ಬಿಸಿಲು ಹೆಚ್ಚಾದಂತೆ ವಾತಾವರಣದ ತೇವಾಂಶವೂ ಹೆಚ್ಚಿದಂತೆ ಭಾಸವಾಗುತ್ತದೆ. ಹಾಗಾಗಿ ದಾಹ ನಿವಾರಣೆಗೆ ಜೊತೆಯಲ್ಲೊಂದು ಬಾಟಲಿ ನೀರು ಇರುವುದು ಉತ್ತಮ.

ಕಲ್ಲಿನ ವಿಶಿಷ್ಟ ಪಟ್ಟಿ!: ನಡುಗಡ್ಡೆಯ ಮತ್ತೊಂದು ಭಾಗವನ್ನು ಕಲ್ಲಿನ ರಾಶಿ ಆವರಿಸಿದೆ. ದೊಡ್ಡ ದೊಡ್ಡ ಬಂಡೆಗಳಿದ್ದು, ಸದಾ ಸಮುದ್ರದ ಅಲೆಗಳು ಅಪ್ಪಳಿಸಿ ವಿವಿಧ ಆಕಾರಗಳನ್ನು ತಾಳಿವೆ. ಇವುಗಳ ಮಧ್ಯೆ ಹಾದುಹೋಗಿರುವ ಕಡುಕಪ್ಪು ಬಣ್ಣದ ಕಲ್ಲಿನ ವಿಶಿಷ್ಟ ಪಟ್ಟಿಯೊಂದು ಗಮನ ಸೆಳೆಯುತ್ತದೆ.

ಸಿಮೆಂಟ್ ಕಾಮಗಾರಿ ಮಾಡುವಾಗ ಎರಡು ಭಾಗಗಳನ್ನು ಪ್ರತ್ಯೇಕಿಸಲು ಇಡುವ ಪಟ್ಟಿಯಂತೆ ಇದು ಗೋಚರಿಸುತ್ತದೆ. ಸುಮಾರು 50 ಮೀಟರ್ ಉದ್ದಕ್ಕೆ ನೇರವಾದ ಗೆರೆಯಂತೆ ಹಾಗೂ ಒಂದೇ ಅಳತೆಯಲ್ಲಿ ಇದು ಸಾಗಿದೆ. ಕಲ್ಲುಗಳ ರಾಶಿಯಿಂದಾಗಿ ನೈಸರ್ಗಿಕವಾಗಿ ಕೊಳದಂತೆ ನಿರ್ಮಾಣವಾಗಿದ್ದು, ಈಜಲು ಪ್ರಶಸ್ತವಾಗಿದೆ. ಸಮುದ್ರದ ಮಧ್ಯದಲ್ಲಿ ಇದ್ದರೂ ನಡುಗಡ್ಡೆಯಲ್ಲಿ ಸಿಹಿನೀರಿನ ಎರಡು ಬಾವಿಗಳಿವೆ.

ದೀಪಸ್ತಂಭ ಅಂಕಿ ಅಂಶ
1860: 
ಬ್ರಿಟಿಷರಿಂದ ನಿರ್ಮಾಣ ಆರಂಭ
1864 ಮಾರ್ಚ್ 25: ದೀಪಸ್ಥಂಭದ ಕಾರ್ಯಾರಂಭ
20 ಮೀಟರ್: ದೀಪ ಸ್ತಂಭದ ಎತ್ತರ
37 ಕಿ.ಮೀ: ಸ್ತಂಭದ ಬೆಳಕಿನ ವ್ಯಾಪ್ತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು