ಶನಿವಾರ, ಏಪ್ರಿಲ್ 1, 2023
23 °C
ವಾಣಿಜ್ಯ ಬಂದರು ವಿಸ್ತರಣೆ ಯೋಜನೆ ಮಾರ್ಪಾಟು ಮಾಡಲು ಒತ್ತಾಯ

ಉತ್ತರ ಕನ್ನಡ: ಕಾರವಾರದ ಕಡಲತೀರ ಉಳಿಸಲು ಪತ್ರ ಚಳವಳಿ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ವಾಣಿಜ್ಯ ಬಂದರಿನ ವಿಸ್ತರಣೆ ಯೋಜನೆಯಲ್ಲಿ ಮಾರ್ಪಾಟು ಮಾಡುವಂತೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಪತ್ರ ಚಳವಳಿ ಶುರುವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳ ಸಚಿವರಿಗೆ, ಅಧಿಕಾರಿಗಳಿಗೆ ಪತ್ರ, ಆನ್‌ಲೈನ್ ಮನವಿಗಳನ್ನು ಸಲ್ಲಿಸಲಾಗುತ್ತಿದೆ.

ನಗರದ ಏಕೈಕ ಕಡಲತೀರವನ್ನು ಸಾರ್ವಜನಿಕರಿಗಾಗಿಯೇ ಉಳಿಸುವ ಉದ್ದೇಶದಿಂದ ಯುವಕ ಸಂಘ, ಮಹಿಳಾ ಸಂಘ ಮುಂತಾದ ಸಂಘಟನೆಗಳು, ಸಮಾಜದ ಎಲ್ಲ ನಾಗರಿಕರೂ ಈ ಬಗ್ಗೆ ಒತ್ತಾಯಿಸಬೇಕು. ಬಂದರು ಮತ್ತು ಸುಂದರ ಕಡಲತೀರ, ಎರಡೂ ಅಸ್ತಿತ್ವದಲ್ಲಿ ಇರುವಂತೆ ಯೋಜನೆಯಲ್ಲಿ ಬದಲಾವಣೆ ಆಗಬೇಕು ಎಂದು ಆಗ್ರಹಿಸುವುದು ಈ ಚಳವಳಿಯ ಉದ್ದೇಶವಾಗಿದೆ.

ಈ ಅಭಿಯಾನಕ್ಕೆ, ಪರಿಸರವಾದಿಯೂ ಆಗಿರುವ ನಿವೃತ್ತ ಉಪ ಕಮಾಂಡೆಂಟ್ ವಿದ್ಯಾಧರ ದುರ್ಗೇಕರ್ ಚಾಲನೆ ನೀಡಿದ್ದಾರೆ. ಪ್ರತಿಯೊಬ್ಬರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವರಿಗೆ, ಸಾಗರಮಾಲಾ ಯೋಜನೆಯ ಮುಖ್ಯಸ್ಥರಿಗೆ ಸೇರಿದಂತೆ ವಿವಿಧ ಇಲಾಖೆಗಳಿಗೆ, ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಸಲ್ಲಿಸುವಂತೆ ಅವರು ಸಾರ್ವಜನಿಕರನ್ನು ಕೋರಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ರವೀಂದ್ರನಾಥ ಟ್ಯಾಗೋರ್ ಕಡಲತೀರವನ್ನು ಉಳಿಸಿಕೊಂಡು, ವಾಣಿಜ್ಯ ಬಂದರಿನ ಅಭಿವೃದ್ಧಿ ಸಾಧ್ಯವಿದೆ. ಬಂದರಿನ ವಿಸ್ತರಣೆಯ ವೇಳೆ, ನಗರದ ಕಡೆಗೆ ಹೆಚ್ಚು ಒತ್ತು ಕೊಡದೇ ಬೈತಖೋಲ್‌ನ ಲೇಡೀಸ್ ಬೀಚ್‌ನತ್ತ ಯೋಜನೆ ರೂಪಿಸಬೇಕು. ಅಲ್ಲಿ ಅಲೆ ತಡೆಗೋಡೆ ನಿರ್ಮಿಸುವುದು ಈಗಿನ ತಂತ್ರಜ್ಞಾನದಲ್ಲಿ ಕಷ್ಟವೇ ಅಲ್ಲ. ಸೀಬರ್ಡ್‌ ನೌಕಾನೆಲೆಯಲ್ಲಿ ಅಂಜದೀವ್ ದ್ವೀಪದ ಬಳಿ ಇಂಥದ್ದೇ ದೊಡ್ಡ ಅಲೆ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗದು. ಅಲ್ಲದೇ ವಾಣಿಜ್ಯ ಬಂದರಿನ ಅಭಿವೃದ್ಧಿಯೂ ಸಾಧ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಯುವಕರಿಗೆ ಕೆಲಸ ಸಿಗಲು ಅಭಿವೃದ್ಧಿ ಆಗಬೇಕು. ಮುಂದಿನ ಪೀಳಿಗೆಯ ಸಲುವಾಗಿ ಪರಿಸರವನ್ನೂ ಉಳಿಸಬೇಕು. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಬೇಕು. ಸುಳ್ಳು ವರದಿ ಆಧರಿಸಿ ಅಭಿವೃದ್ಧಿ ಮಾಡುವುದು ವಿನಾಶಕ್ಕೆ ದಾರಿಯಾಗುತ್ತದೆ. ಬಂದರನ್ನು ಎಲ್ಲಾದರೂ ಹೇಗಾದರೂ ನಿರ್ಮಿಸಬಹುದು. ಆದರೆ, ಸಮುದ್ರ ದಂಡೆಯನ್ನು ಮನುಷ್ಯನಿಂದ ನಿರ್ಮಿಸಲಾಗದು. ಇರುವ ಒಂದು ಪ್ರಾಕೃತಿಕ ಸ್ವತ್ತನ್ನು ನಾಶ ಮಾಡಿ ನಾವು ಸಾಧಿಸುವುದೇನಿಲ್ಲ’ ಎಂದು ಅವರು ಹೇಳಿದರು.

11 ಸಾವಿರ ಸಹಿ: ‘ಕಾರವಾರದ ಕಡಲತೀರವನ್ನು ಕಾಂಕ್ರೀಟ್‌ನಿಂದ ರಕ್ಷಿಸಿ’ ಎಂಬ ಆನ್‌ಲೈನ್ ಸಹಿ ಅಭಿಯಾನವೂ ಆರಂಭವಾಗಿದೆ. ಗುರುವಾರದ ವೇಳೆಗೆ ದೇಶದ ವಿವಿಧೆಡೆಯ ಸುಮಾರು 11 ಸಾವಿರ ಮಂದಿ ಇದಕ್ಕೆ ಸಹಿ ಮಾಡಿದ್ದಾರೆ. ಕಾರವಾರದ ಸಮೀರ್ ಬಾಡ್ಕರ್ ಈ ಅಭಿಯಾನವನ್ನು ಶುರು ಮಾಡಿದ್ದಾರೆ. ಚೇಂಜ್.ಆರ್ಗ್ (change.org) ವೆಬ್‌ಸೈಟ್‌ನಲ್ಲಿ ಅತಿಹೆಚ್ಚು ಸಹಿ ಮಾಡಲಾದ ಅಭಿಯಾನಗಳಲ್ಲಿ ಇದೂ ಒಂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು