ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಲಾಕ್‌ಡೌನ್ ಪರಿಣಾಮ ಶೇ 50ರಷ್ಟು ವಿದ್ಯುತ್ ಉಳಿತಾಯ

ಸ್ಥಗಿತಗೊಂಡಿದ್ದ ಕೈಗಾರಿಕಾ ಘಟಕಗಳು; ಮನೆ ಬಳಕೆ ವಿದ್ಯುತ್ ಬಿಲ್ ಹೆಚ್ಚಳ
Last Updated 12 ಮೇ 2020, 19:30 IST
ಅಕ್ಷರ ಗಾತ್ರ

ಶಿರಸಿ: ಲಾಕ್‌ಡೌನ್ ಅವಧಿಯಲ್ಲಿ ದೊಡ್ಡ ಕೈಗಾರಿಕಾ ಘಟಕಗಳು ಸ್ಥಗಿತಗೊಂಡಿದ್ದ ಕಾರಣ ಶಿರಸಿ ವಿಭಾಗದಲ್ಲಿ ವಿದ್ಯುತ್ ಬಳಕೆಯಲ್ಲಿ ಶೇ 50ರಷ್ಟು ಉಳಿತಾಯವಾಗಿದೆ. ಫೆಬ್ರುವರಿಯಲ್ಲಿ ಸರಾಸರಿ 7.62 ಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿದ್ದರೆ, ಏಪ್ರಿಲ್‌ನಲ್ಲಿ 3.85 ಲಕ್ಷ ಯುನಿಟ್‌ನಷ್ಟು ವಿದ್ಯುತ್ ಮಾತ್ರ ಬಳಕೆಯಾಗಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳನ್ನೊಳಗೊಂಡ ಹೆಸ್ಕಾಂ ಶಿರಸಿ ವಿಭಾಗದಲ್ಲಿ 40 ಎಚ್‌.ಪಿ (ಎಲ್‌.ಟಿ 5) ಮೇಲಿನ ಹಾಗೂ 11 ಕೆ.ವಿ (ಎಚ್‌.ಟಿ) ಸಂಪರ್ಕ ಪಡೆದಿರುವ 103 ಕೈಗಾರಿಕೆಗಳಿವೆ. ಇವುಗಳಿಂದ ಫೆಬ್ರುವರಿಯಲ್ಲಿ 7,62,180 ಯುನಿಟ್ ವಿದ್ಯುತ್ ಬಳಕೆಯಾಗಿದ್ದರೆ, ಮಾರ್ಚ್‌ನಲ್ಲಿ 7,32,089 ಯುನಿಟ್ ಬಳಕೆಯಾಗಿದ್ದರೆ, ಏಪ್ರಿಲ್‌ನಲ್ಲಿ 3,85,097 ಯುನಿಟ್ ವಿದ್ಯುತ್ ಮಾತ್ರ ಖರ್ಚಾಗಿದೆ.

‘ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಸರಾಸರಿ ಬಿಲ್ ತುಂಬಲು ತಿಳಿಸಲಾಗಿದೆ. ಮೀಟರ್ ರೀಡಿಂಗ್ ನಡೆಸಲಾಗಿಲ್ಲ. ಉದ್ದಿಮೆಗಳ ವಿದ್ಯುತ್ ಬಳಕೆಯನ್ನು ಮಾತ್ರ ಲೆಕ್ಕ ಹಾಕಲಾಗಿದೆ. ಒಂದೂವರೆ ತಿಂಗಳು ಉದ್ದಿಮೆಗಳು ಬಂದಾಗಿದ್ದ ಕಾರಣ ವಿದ್ಯುತ್ ಬಳಕೆಯಲ್ಲೂ ಕಡಿತವಾಗಿದೆ’ ಎಂದು ಹೆಸ್ಕಾಂ ಶಿರಸಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ ಕಾಮತ್ ತಿಳಿಸಿದರು.

‘ಮನೆ ಬಳಕೆ ಹಾಗೂ ಸಣ್ಣ ಕೈಗಾರಿಕೆಗಳ ವಿದ್ಯುತ್ ಮೀಟರ್ ರೀಡಿಂಗ್ ಇನ್ನಷ್ಟೇ ನಡೆಯಬೇಕಾಗಿದೆ. ಅನೇಕ ಗ್ರಾಹಕರು ಮನೆ ಬಳಕೆಯ ಬಿಲ್ ಹೆಚ್ಚು ಬಂದಿರುವ ಕುರಿತು ಹೆಸ್ಕಾಂಗೆ ದೂರು ನೀಡಿದ್ದಾರೆ. ಎರಡು ತಿಂಗಳ ಸರಾಸರಿ ಬಿಲ್ ಒಟ್ಟಿಗೆ ನೀಡಿರುವುದರಿಂದ ‌ಗ್ರಾಹಕರಿಗೆ ಹೆಚ್ಚಿನ ಮೊತ್ತ ಬಂದಿದೆಯೆಂಬ ತಪ್ಪು ತಿಳಿವಳಿಕೆಯಾಗಿದೆ. ಪ್ರತಿವರ್ಷವೂ ಮಾರ್ಚ್‌ನಿಂದ ಮೇ ತನಕ ಬೇಸಿಗೆಯ ಅವಧಿಯಲ್ಲಿ ಫ್ಯಾನ್, ಎಸಿ ಬಳಕೆ ಹೆಚ್ಚಿರುವುದರಿಂದ ಮನೆಗಳ (ಎಲ್‌.ಟಿ 2) ವಿದ್ಯುತ್ ಬಿಲ್ ಅಧಿಕವಾಗಿರುತ್ತದೆ. ಈ ಬಾರಿ ಲಾಕ್‌ಡೌನ್ ಇದ್ದ ಕಾರಣಕ್ಕೆ ಇನ್ನೂ ತುಸು ಹೆಚ್ಚಾಗಿರಬಹುದು. ಮೀಟರ್ ರೀಡಿಂಗ್ ಆದ ಮೇಲೆ ಸ್ಪಷ್ಟ ಚಿತ್ರಣ ಸಿಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT