ಸೋಮವಾರ, ಮೇ 23, 2022
28 °C
ನಾನಾ ಕಾರಣಗಳಿಂದ ಹಿನ್ನಡೆ ಅನುಭವಿಸುತ್ತಿರುವ ಜಿಲ್ಲೆಯ ಸಹಕಾರ ಸಂಸ್ಥೆಗಳು

ಉತ್ತರ ಕನ್ನಡ | ಸಹಕಾರ ಸಂಸ್ಥೆಗಳು: 74 ಸಂಸ್ಥೆ ಕಾರ್ಯ ಸ್ಥಗಿತ, 21 ನಿಷ್ಕ್ರಿಯ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಕಾರವಾರ: ಸಹಕಾರ ಚಳವಳಿಯಲ್ಲಿ ಅಗ್ರಪಂಕ್ತಿಯಲ್ಲಿದ್ದ ಉತ್ತರ ಕನ್ನಡದ ಸಹಕಾರ ಸಂಸ್ಥೆಗಳು ಕೆಲವು ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಿವೆ. ಸುಮಾರು ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ 74 ಸಹಕಾರ ಸಂಸ್ಥೆಗಳು ಮುಚ್ಚಿದ್ದರೆ, 21 ಸಂಸ್ಥೆಗಳು ನಿಷ್ಕ್ರಿಯವಾಗಿವೆ.

ನಷ್ಟದಲ್ಲಿರುವ ಸಹಕಾರ ಸಂಘಗಳ ಮಾಹಿತಿಯನ್ನು ನೀಡುವಂತೆ ಸಹಕಾರ ಇಲಾಖೆಯು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯು ಈಗಾಗಲೇ ವರದಿ ಸಲ್ಲಿಸಿದೆ. ಜಿಲ್ಲೆಯಲ್ಲಿ 27 ಸಂಘಗಳು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿವೆ. ಕಾರ್ಯ ಸ್ಥಗಿತಗೊಳಿಸಿದ ಸಂಸ್ಥೆಗಳಲ್ಲಿ ಹೆಚ್ಚಿನವು ಕೈಗಾರಿಕಾ ಸಹಕಾರ ಸಂಸ್ಥೆಗಳಾಗಿವೆ ಎಂದೂ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ 2020ರ ಮಾರ್ಚ್ 21ರ ವೇಳೆಗೆ 2,521 ಸಹಕಾರ ಸಂಘಗಳು ನಿಷ್ಕ್ರಿಯವಾಗಿದ್ದವು. ಮಾರ್ಚ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಈ ಸಂಖ್ಯೆಯು 3 ಸಾವಿರದಷ್ಟಾಗಿತ್ತು ಎಂದು ಸಹಕಾರ ಇಲಾಖೆಯ ಮೂಲಗಳಿಂದ ತಿಳಿದುಬರುತ್ತದೆ.

ಮುಚ್ಚಲು ಕಾರಣವೇನು?:

ಕೆಲವು ಸಂಸ್ಥೆಗಳಿಗೆ ಸಾಲ ವಸೂಲಾತಿ, ಆದಾಯ ವೃದ್ಧಿ ಸಾಧ್ಯವಾಗದೇ ಸಮಸ್ಯೆಗೀಡಾಗಿವೆ. ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಕಾರ್ಯ ನಿಲ್ಲಿಸಿದ ಅಥವಾ ತೀರಾ ನಷ್ಟದಲ್ಲಿರುವ ಸಂಸ್ಥೆಗಳು ಸಿಬ್ಬಂದಿಯ ವೇತನಕ್ಕೂ ಪರದಾಡುವ ಸ್ಥಿತಿಯಲ್ಲಿವೆ. ಆದರೆ, ಮತ್ತೆ ಕೆಲವನ್ನು ಕೇವಲ ಸಹಕಾರ ಕ್ಷೇತ್ರದ ಚುನಾವಣೆಗಾಗಿ ನೋಂದಣಿ ಮಾಡಿಸಿ, ಬಳಿಕ ಮುಚ್ಚಿದ್ದೂ ಉದಾಹರಣೆಗಳಿವೆ.

ಲಾಭಾಂಶ ಹಂಚಿಕೆಯಲ್ಲಿ ವ್ಯತ್ಯಾಸ, ಲೆಕ್ಕಪತ್ರಗಳ ಅಸಮರ್ಪಕ ನಿರ್ವಹಣೆ, ಬೇರೆ ಹಣಕಾಸು ಸಂಸ್ಥೆಗಳಲ್ಲಿ ನಿಯಮ ಬಾಹಿರವಾಗಿ ಠೇವಣಿ ಇಡುವುಡು, ಸಾಲ ಮರುಪಾವತಿಯಲ್ಲಿ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಕೆಲವು ಸಂಸ್ಥೆಗಳಲ್ಲಿ ಹಣಕಾಸು ಅವ್ಯವಹಾರ ನಡೆದು ಒಂದಿಬ್ಬರ ಬಂಧನವೂ ಆಗಿದೆ. ಅದರ ಹೊರತಾಗಿಯೂ ಮತ್ತೊಂದೆರಡು ಸಂಸ್ಥೆಗಳಲ್ಲಿ ಅವ್ಯವಹಾರದ ಆರೋಪ ಪದೇಪದೇ ಕೇಳಿಬರುತ್ತಿದೆ. 

ಪ್ರತಿ ವರ್ಷವೂ ಸಹಕಾರ ಸಂಸ್ಥೆಗಳು ಇಲಾಖೆಯ ನಿಯಮದಂತೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಆದರೆ, ಹಲವು ಸಂಸ್ಥೆಗಳು ನವೀಕರಣ ಮಾಡಿಕೊಂಡಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಸಾಕಷ್ಟು ನಷ್ಟವಾಗಿದೆ. ಆದ್ದರಿಂದ ನವೀಕರಣಗೊಳ್ಳದೇ ಕಾರ್ಯ ನಿರ್ವಹಿಸುತ್ತಿರುವ ಸಂಘಗಳ ವಿರುದ್ಧ ಕ್ರಮಕ್ಕೂ ಸರ್ಕಾರ ಚಿಂತನೆ ನಡೆಸಿದೆ.

‘ಮುನ್ನಡೆಸುವ ಇಚ್ಛಾಶಕ್ತಿ ಅಗತ್ಯ’:

‘ಸಹಕಾರ ಸಂಸ್ಥೆಗಳನ್ನು ನಡೆಸುವವರಿಗೆ ಹಾಗೂ ಆಡಳಿತದಲ್ಲಿ ಇರುವವರಿಗೆ ಈ ಚಳವಳಿಯನ್ನು ಮುನ್ನಡೆಸುವ ಇಚ್ಛಾಶಕ್ತಿ ಬೇಕು. ಸಾಲಗಾರರ ಆರ್ಥಿಕ ಸ್ಥಿತಿ ಉತ್ತಮವಾದರೆ ಸಂಸ್ಥೆ ಉಳಿಯುತ್ತದೆ. ಸಂಸ್ಥೆ ಉಳಿದರೆ ಸಾಲಗಾರರೂ ಬಚಾವಾಗುತ್ತಾರೆ. ಹಾಗಾಗಿ, ಇಬ್ಬರಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಡಬೇಕು’ ಎನ್ನುತ್ತಾರೆ ಶಿರಸಿಯ ಟಿ.ಆರ್‌.ಸಿ ಪ್ರಾಥಮಿಕ ಸಹಕಾರ ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣ ಕಡವೆ.

‘ಹಲವು ಸಲ ಸರ್ಕಾರ ವಿಧಿಸುವ ಷರತ್ತುಗಳನ್ನು ಪಾಲಿಸಲು ಕಷ್ಟವಾಗುತ್ತದೆ. ಕೊರೊನಾದಿಂದಾಗಿ ಸಂಕಷ್ಟಕ್ಕೀಡಾದ ಹಲವು ವಿಭಾಗಗಳಿಗೆ ಸರ್ಕಾರ ಸಹಾಯ ನೀಡಿದೆ. ಅದೇ ಮಾದರಿಯನ್ನು ಸಹಕಾರ ಇಲಾಖೆಗೂ ಅನ್ವಯಿಸಬೇಕು’ ಎಂದು ಅವರು ಮನವಿ ಮಾಡುತ್ತಾರೆ.

––––––

* ಸಹಕಾರ ಇಲಾಖೆಯ ನಿಯಮಗಳನ್ನು ಪಾಲಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಪ್ರಾಥಮಿಕ ಸಹಕಾರ ಸಂಸ್ಥೆಗಳು ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿವೆ.

– ರಾಮಕೃಷ್ಣ ಕಡವೆ, ಟಿ.ಆರ್‌.ಸಿ ಪ್ರಾಥಮಿಕ ಸಹಕಾರ ಸಂಸ್ಥೆಯ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು