ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಮ್ಮನ ತೇರು ಎಳೆಯುವ ಸಂಭ್ರಮ

ದೇವಿಯ ಶೋಭಾಯಾತ್ರೆಗೆ ಹರಿದು ಬರುತ್ತಿರುವ ಜನಜಾತ್ರೆ
Last Updated 3 ಮಾರ್ಚ್ 2020, 12:40 IST
ಅಕ್ಷರ ಗಾತ್ರ

ಶಿರಸಿ: ದ್ವೈವಾರ್ಷಿಕವಾಗಿ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿಯ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರಮ್ಮನ ತೇರು ಎಳೆಯುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ.

ಬುಧವಾರ (ಮಾ.04) ನಸುಕಿನಲ್ಲಿ ರಥಾರೂಢಳಾಗುವ ಸರ್ವಾಲಂಕಾರಭೂಷಿತೆ ದೇವಿ, ಅಲಂಕೃತ ರಥದಲ್ಲಿ ಕುಳಿತು, ಹಾದಿ–ಬೀದಿಯಲ್ಲಿ ನಿಲ್ಲುವ ಜನರೆಡೆಗೆ ದೃಷ್ಟಿ ಬೀರುತ್ತ ಬಿಡಕಿಬೈಲಿನ ಜಾತ್ರಾ ಗದ್ದುಗೆಯೆಡೆಗೆ ಸಾಗಲಿದ್ದಾಳೆ.

ದೇವಾಲಯದ ಎದುರಿನಿಂದ ಬೆಳಿಗ್ಗೆ 8.19ರಿಂದ ಪ್ರಾರಂಭವಾಗುವ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಮಧ್ಯಾಹ್ನ 12.43ರ ಒಳಗಾಗಿ ದೇವಿಯ ಪ್ರತಿಷ್ಠಾಪನೆ ನೆರವೇರಲಿದೆ.

ಮಾರಿಕಾಂಬೆ ಹಾನಗಲ್‌ ಮೂಲದವಳು ಎಂಬ ಪ್ರತೀತಿ ಇದೆ. ಊರಿನ ಮಗಳ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಲು ಹಾನಗಲ್‌, ಹಾವೇರಿ ಭಾಗದ ಸಹಸ್ರಾರು ಲಂಬಾಣಿಗರು ನಗರದಲ್ಲಿ ಬೀಡುಬಿಟ್ಟಿದ್ದಾರೆ.

ಮಂಗಳವಾರ ಅಮ್ಮನ ಗುಡಿಯಲ್ಲಿ ಹಬ್ಬದ ವಾತಾವರಣ. ನಸುಕಿನಲ್ಲಿ ಕಲಶ ಪೂಜೆ, ಮಧ್ಯಾಹ್ನ ಮರ್ಕಿ–ದುರ್ಗಿ ದೇವಾಲಯಕ್ಕೆ ಪೂಜೆ ಸಲ್ಲಿಸಿದ ನಂತರ ಈ ಕಲಶವನ್ನು ತಂದು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಬಾಬುದಾರರು, ಆಡಳಿತ ಸಮಿತಿಯವರು ರಥಕ್ಕೆ ಪೂಜೆ ಸಲ್ಲಿಸಿದರು. ನಂತರ ಬಡಿಗೇರರು, ಉಪ್ಪಾರರು, ಮರಾಠಿಗರು, ಆಚಾರಿಗಳು ರಥಕ್ಕೆ ಪತಾಕೆ ಜೋಡಿಸಿದರು.

ನಡುರಾತ್ರಿ ದೇವಿಯ ಕಲ್ಯಾಣ ಪ್ರತಿಷ್ಠೆ, ಕಲ್ಯಾಣ ಮಹೋತ್ಸವ. ತವರು ಮನೆ ಕುಟುಂಬದ ನಾಡಿಗರು ವಧುವಿಗೆ ಮಾಂಗಲ್ಯ ಧಾರಣೆ ಮಾಡುತ್ತಾರೆ. ವಧುವನ್ನು ಗಂಡನ ಮನೆಗೆ ಕಳುಹಿಸುವ ಸಂಪ್ರದಾಯವೇ ರಥೋತ್ಸವ. ಅಚ್ಚಕೆಂಪು ಬಣ್ಣದ ಅಷ್ಟಭುಜಧಾರಿ, ಏಳು ಅಡಿ ಎತ್ತರದ ಮಾರಿಕಾಂಬೆ ಆಭರಣವತಿಯಾಗಿ, ಕಿಕ್ಕಿರಿದು ಸೇರುವ ಭಕ್ತರ ನಡುವೆ, ರಥದಲ್ಲಿ ಕುಳಿತು ಇಣುಕಿಣುಕಿ ಊರ ನೋಡುತ್ತ ಸಾಗುವ ಪರಿ, ಭಕ್ತರಿಗೆ ಅಪೂರ್ವ ಕ್ಷಣ.

ಮೆರವಣಿಗೆ ಸಾಗುವಾಗ ಜನರು ದುಡ್ಡು, ಬಾಳೆಹಣ್ಣನ್ನು ರಥಕ್ಕೆ ಎಸೆದು ಕೃತಾರ್ಥರಾದರೆ, ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತ ದೇವಿಗೆ ಸೇವೆ ಸಲ್ಲಿಸುವರು. ದೇವಿಯನ್ನು ಆವಾಹನೆ ಮಾಡಿಕೊಂಡ ಮಹಿಳೆಯರು ಆವೇಷಭರಿತರಾಗಿ ಕುಣಿಯುತ್ತಾರೆ.

ಮಾ.5ರ ಬೆಳಿಗ್ಗೆ 5 ಗಂಟೆಯಿಂದ ದೇವಿಗೆ ಸೇವೆಗಳು ಪ್ರಾರಂಭವಾಗಲಿವೆ. ಮರ್ಕಿ–ದುರ್ಗಿ ದೇವಾಲಯದಲ್ಲಿ ಬೆಳಿಗ್ಗೆ 6ರಿಂದ ಸಂಜೆ 5 ಗಂಟೆಯವರೆಗೆ ಬೇವಿನ ಉಡುಗೆ ಸೇವೆಗಳು ನಡೆಯುತ್ತವೆ.

ಸುರಕ್ಷತೆ ಹಿನ್ನೆಲೆಯಲ್ಲಿ ಈಗಾಗಲೇ ಬಾಂಬ್ ಸ್ಕ್ವಾಡ್, ಮೆಟಲ್ ಡಿಟೆಕ್ಟರ್, ಫೇಸ್ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ವಿವಿಧೆಡೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT