ಸೋಮವಾರ, ಏಪ್ರಿಲ್ 6, 2020
19 °C
ನಸುಕಿನಲ್ಲಿ ಕಲಶಪೂಝೆ, ರಾತ್ರಿ ಸಭಾ ಮಂಟಪದಲ್ಲಿ ಮದುವೆ

ಮಾರಿಕಾಂಬೆಯ ಕಲ್ಯಾಣ ಮಹೋತ್ಸವ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನಗರದ ಬಿಡಕಿಬೈಲ್ ಹಾಗೂ ಸುತ್ತಲಿನ ಪ್ರದೇಶಗಳು ಜನಾಕರ್ಷಣೆಯ ಕೇಂದ್ರಬಿಂದು ಆಗಿವೆ. ತರಕಾರಿ, ಗೂಡಂಗಡಿಗಳು ಇದ್ದಲ್ಲೆಲ್ಲ ರಾಕ್ಷಸ ಚಕ್ರಗಳು, ಗಜಗಾತ್ರದ ಮೀನುಗಳು, ತಿರುಗುವ ಗೊಂಬೆಗಳು ಮೇಲೆದ್ದಿವೆ. ಜಾತ್ರೆಯ ಸಂಭ್ರಮ ಗರಿಬಿಚ್ಚಿಕೊಳ್ಳುತ್ತಿದೆ.

ಬಿಡಕಿಬೈಲಿನ ಗದ್ದುಗೆಯ ಸುತ್ತ ಬೃಹದಾಕಾರ ಚಪ್ಪರ ಮೈದಳೆದಿದೆ. ಭಕ್ತರು ತಿಂಗಳಿನಿಂದ ಕಾಯುತ್ತಿರುವ ಮಾರಿಕಾಂಬಾ ದೇವಿಯ ಕಲ್ಯಾಣ ಮಹೋತ್ಸವ ಇಂದು (ಮಾ.3) ದೇವಾಲಯದ ಸಭಾಮಂಟಪದಲ್ಲಿ ನಡೆಯಲಿದೆ. ನಸುಕಿನಲ್ಲಿ ಕಲಶಪೂಜೆ ಮತ್ತು ಮಧ್ಯಾಹ್ನ ರಥದ ಕಲಶ ಪ್ರತಿಷ್ಠೆ ನಡೆಯಲಿದೆ.

ದೇವಾಲಯದ ಸಭಾಮಂಟಪದಲ್ಲಿ ರಾತ್ರಿ 11.11ರಿಂದ 11.18ರ ಅವಧಿಯಲ್ಲಿ ಸರ್ವಾಲಂಕಾರ ಭೂಷಿತೆ ಮಾರಿಕಾಂಬೆಯ ಕಲ್ಯಾಣ ಪ್ರತಿಷ್ಠೆ ನೆರವೇರಲಿದೆ. ರಾಜೋಪಚಾರ ಪೂಜಾ ವಿಧಾನಗಳು, ದೇವಿಗೆ ದೃಷ್ಟಿಬೊಟ್ಟು ಇಡುವ ಕೈಂಕರ್ಯಗಳು ನಡೆಯುತ್ತವೆ. ಕಲ್ಯಾಣ ಮಹೋತ್ಸವದ ಭಾಗವಾಗಿ ಮೆರವಣಿಗೆಯಲ್ಲಿ ತರುವ ದೇವಿಯ ಮಂಗಳಸೂತ್ರವನ್ನು ಮಾರಿಕಾಂಬಾ ದೇವಿಯ ತವರು ಮನೆಯಾದ ನಾಡಿಗ ಮನೆತನದವರು ದೇವಿಗೆ ಧಾರಣೆ ಮಾಡುತ್ತಾರೆ.

ಮಾರಿಕಾಂಬೆ ಹಾಗೂ ಮರ್ಕಿ–ದುರ್ಗಿಯರಿಗೆ ಮಾಂಗಲ್ಯ ಧಾರಣೆ ಮಾಡುತ್ತಿದ್ದಂತೆ, ಭಕ್ತರು ಚಪ್ಪಾಳೆ ತಟ್ಟಿ, ಜೈಕಾರ ಹಾಕಿ ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಬೂದುಗುಂಬಳ ಕಾಯಿಯ ಸಾತ್ವಿಕ ಬಲಿ ನೀಡಲಾಗುತ್ತದೆ. ಮಂಗಲ ಕಾರ್ಯದ ಅಂಗವಾಗಿ ನಾಡಿಗರ ಮನೆಯಲ್ಲಿ ಹೋಳಿಗೆ ಅಥವಾ ಸಿಹಿ ಊಟ ಬಡಿಸುವ ಕ್ರಮವಿದೆ.

ನಾಡಿಗ ಮನೆತನದಿಂದ ನವವಧುವಿಗೆ ಮೊದಲ ಮಂಗಳಾರತಿ, ನಂತರ ಬಾಬುದಾರ ಕುಟುಂಬದವರು ಪೂಜೆ ಸಲ್ಲಿಸುತ್ತಾರೆ. ಚಕ್ರಸಾಲಿ, ಕಸಬೆ ಗೌಡರು, ಪೂಜಾರಿ, ಕುಂಬಾರ, ಕೇದಾರಿ, ಕಟ್ಟೇರ, ಉಪ್ಪಾರ, ಕುರುಬರು. ಮೇಟಿ, ಮೇತ್ರಿ, ಮೇದಾರ, ಜೋಗತಿಯರು, ಆಸಾದಿ ಹಾಗೂ ಉಗ್ರಾಣಿ ಕುಟುಂಬದವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.

ಬೆಳಕು ಹರಿಯುವ ತನಕ ಪೂಜೆ ಸ್ವೀಕರಿಸುವ ದೇವಿ ಮಾ.4 ಬೆಳಿಗ್ಗೆ ರಥವನ್ನೇರುತ್ತಾಳೆ. 7.05ಕ್ಕೆ ಪ್ರಾರಂಭವಾಗುವ ಮೆರವಣಿಗೆ ಬಿಡಕಿಬೈಲು ತಲುಪಿದ ನಂತರ, 12.43ರ ಒಳಗಾಗಿ ಜಾತ್ರಾ ಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾಪನೆ ನೆರವೇರುತ್ತದೆ.

ಹಂಗಾಮಿ ಅಂಗಡಿ ಗುತ್ತಿಗೆದಾರರು ಭರದಲ್ಲಿ ಅಂಗಡಿ ಚೌಕಟ್ಟು ನಿರ್ಮಿಸುತ್ತಿದ್ದಾರೆ. ಮನರಂಜನೆ ಆಟಿಕೆಗಳು ಮೇಲೆದ್ದಿವೆ. ನಾಟಕದ ಕಂಪನಿಗಳು ಟೆಂಟ್ ಕಟ್ಟಿವೆ. ದೇವಿಕೆರೆ, ಕೋಟೆಕೆರೆ ಸುತ್ತಮುತ್ತ ನಗರಸಭೆ ಹರಾಜು ನಡೆಸಿರುವ ಸ್ಥಳಗಳಲ್ಲಿ ಹೊರ ಊರುಗಳಿಂದ ಬಂದಿರುವ ವ್ಯಾಪಾರಸ್ಥರು ಅಂಗಡಿ ಕಟ್ಟುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು