ಸೋಮವಾರ, ಸೆಪ್ಟೆಂಬರ್ 27, 2021
21 °C
ಉತ್ತಮ ವರ್ಷಧಾರೆಗೆ ಮುಂಡಗೋಡ ತಾಲ್ಲೂಕಿನ ರೈತರ ಸಂತಸ

ಮುಂಡಗೋಡ: ಉತ್ತಮ ಮಳೆ, ಭತ್ತದ ನಾಟಿ ಕೆಲಸ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ತಾಲ್ಲೂಕಿನಲ್ಲಿ ಮಳೆ ಚುರುಕುಗೊಂಡಿದ್ದು, ಭತ್ತ ಹಾಗೂ ಮೆಕ್ಕೆಜೋಳ ಬಿತ್ತನೆ ಬಿರುಸಿನಿಂದ ಸಾಗಿದೆ. 

ಕೆಲವು ದಿನಗಳ ಹಿಂದೆ ಮರೆಯಾಗಿದ್ದ ಮಳೆಯು, ಒಂದು ವಾರದಿಂದ ಚೆನ್ನಾಗಿ ಸುರಿದಿದೆ. ಈಗಾಗಲೇ ಬೆಳೆದ ಬೆಳೆಗೆ, ಮಳೆ ಉತ್ತಮವಾಗಿದ್ದರೆ, ನಾಟಿ ಕೆಲಸಕ್ಕೆ ಮಳೆಯ ವೇಗ ಹೆಚ್ಚಾಗಬೇಕಿದೆ. ಕೊಳವೆ ಬಾವಿಯ ಸೌಲಭ್ಯ ಇರುವ ರೈತರು, ಗದ್ದೆಗಳಲ್ಲಿ ನೀರು ತುಂಬಿಸಿ, ನಾಟಿ ಕೆಲಸ ಮಾಡಲು ತಯಾರಿ ನಡೆಸಿದ್ದಾರೆ. ಇನ್ನೂ ಕೆಲವರು ಈಗಾಗಲೇ ಭತ್ತದ ಸಸಿಗಳನ್ನು ನಾಟಿ ಮಾಡಿದ್ದಾರೆ.

'ತಾಲ್ಲೂಕಿನಲ್ಲಿ 1,200 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ನಡೆಯುತ್ತದೆ. ಆದರೆ ಈ ವರ್ಷ ನಾಟಿ ಮಾಡಲು ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಕೊಳವೆಬಾವಿ ಸೌಲಭ್ಯ ಇರುವ ರೈತರು ಸದ್ಯ ನಾಟಿ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಶೇ 40ರಷ್ಟು ರೈತರು ಭತ್ತ ನಾಟಿ ಮಾಡಿದ್ದು, ಮಳೆಯ ಪ್ರಮಾಣ ಹೆಚ್ಚಾದಂತೆ ಉಳಿದ ರೈತರೂ ನಾಟಿ ಕೆಲಸ ಮಾಡಲಿದ್ದು, ನಿಗದಿತ ಗುರಿ ಮುಟ್ಟಲು ಸಾಧ್ಯವಾಗಬಹುದು' ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ.

'ಮಳೆಯ ಕೊರತೆ ಎದುರಿಸುತ್ತಿರುವ ರೈತರು, ನಾಟಿ ಮಾಡುವ ಗದ್ದೆಗಳನ್ನು ಹಾಗೆ ಬಿಟ್ಟಿರುವುದನ್ನು ಕೆಲವೆಡೆ ಕಾಣಬಹುದಾಗಿದೆ. ಹಿರೇಹಳ್ಳಿಯಿಂದ ಕಾತೂರವರೆಗಿನ ಕೆಲವು ಗದ್ದೆಗಳು ಇನ್ನೂ ನಾಟಿ ಕೆಲಸಕ್ಕೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿಲ್ಲ' ಎಂದರು.

ಹೊಸ ತಳಿ ಪರಿಚಯ: ಅಭಿಲಾಷ್ ಹಾಗೂ ಇಂಟಾನ ಭತ್ತದ ತಳಿಗೆ ಪರ್ಯಾಯವಾಗಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಎಂಜಿಡಿ03 ಎಂಬ ಹೊಸ ತಳಿಯನ್ನು ಪರಿಚಯಿಸಿದೆ. ಇದು ಹೆಚ್ಚು ಇಳುವರಿ ನೀಡುವ ತಳಿಯಾಗಿದ್ದು, ಬೆಂಕಿರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ಹೊಸ ತಳಿಯನ್ನು ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಿದ್ದು, 25 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆಯಲು ಮುಂದಾಗಿದ್ದಾರೆ.

'ತಾಲ್ಲೂಕಿನ ಸಾಲಗಾಂವ, ಹಿರೇಹಳ್ಳಿ, ಪಾಳಾ ಸೇರಿದಂತೆ ಕೆಲವೆಡೆ 35ಕ್ಕೂ ಹೆಚ್ಚು ರೈತರು ಎಂಜಿಡಿ 03 ಹೊಸ ಭತ್ತದ ತಳಿಯನ್ನು ನಾಟಿ ಮಾಡಲು ಮುಂದಾಗಿದ್ದಾರೆ. ಅವರಿಗೆ ಎನ್.ಎಫ್.ಎಸ್.ಎಂ ಯೋಜನೆಯಡಿ ರೈತರಿಗೆ ಹೊಸ ತಳಿಯ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಲಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಈ ತಳಿಯನ್ನು ಬೆಳೆಯಲಾಗುತ್ತಿದ್ದು, ಉತ್ತಮ ಫಲಿತಾಂಶ ಬಂದಿದೆ. ಭತ್ತದಲ್ಲಿ ಇಳುವರಿ ಕಡಿಮೆ, ಲಾಭ ಕಡಿಮೆ ಎನ್ನುವ ಬದಲು ಹೊಸ ತಳಿಯನ್ನು ಬೆಳೆದರೆ ಖಂಡಿತ ರೈತರ ಕೈಹಿಡಿಯಲಿದೆ' ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಹೇಳಿದರು.

ಹೊಸ ತಳಿಯ ಪ್ರಾತ್ಯಕ್ಷಿಕೆ ನೀಡಲು ಹೋಗಿದ್ದ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಅವರು, ತಾಲ್ಲೂಕಿನ ಸಾಲಗಾಂವ ಗ್ರಾಮದ ನಾಗರಾಜ ಗವಾಣಿಕರ್ ಎಂಬುವರ ನಾಟಿ ಗದ್ದೆಯಲ್ಲಿ ಸ್ವತಃ ಗದ್ದೆಗೆ
ಇಳಿದು ಕೊರಡು ಹೊಡೆದು ಗಮನ ಸೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು