ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹ

ಲಾಕ್‌ಡೌನ್ ಪರಿಣಾಮ ಕಡು ಬೇಸಿಗೆಯಲ್ಲೂ ವಿದ್ಯುತ್‌ಗೆ ಕುಸಿದ ಬೇಡಿಕೆ
Last Updated 16 ಜೂನ್ 2021, 15:28 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮತ್ತು ಬೇಸಿಗೆಯಲ್ಲೂ ಜೋರಾಗಿ ಮಳೆಯಾದ ಪರಿಣಾಮ, ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ. ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ವರ್ಷಧಾರೆಯಾಗುತ್ತಿದ್ದು, ಒಳಹರಿವು ಏರಿಕೆಯಾಗುತ್ತಿದೆ.

ಜಿಲ್ಲೆಯಲ್ಲಿ ಆರು ಪ್ರಮುಖ ಜಲಾಶಯಗಳಲ್ಲಿ ಕಾಳಿ ನದಿಗೆ ಅಡ್ಡಲಾಗಿ ಐದನ್ನು ನಿರ್ಮಿಸಲಾಗಿದೆ. ಜೊಯಿಡಾ ತಾಲ್ಲೂಕಿನ ಸೂಪಾ ಹಾಗೂ ಕಾರವಾರ ತಾಲ್ಲೂಕಿನ ಕದ್ರಾ, ಹೊನ್ನಾವರ ತಾಲ್ಲೂಕಿನಲ್ಲಿ ಶರಾವತಿ ನದಿಗೆ ನಿರ್ಮಿಸಲಾದ ಗೇರುಸೊಪ್ಪ ಜಲಾಶಯಗಳು ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ರಾಜ್ಯದ ಬೃಹತ್ ಜಲಾಶಯಗಳಲ್ಲಿ ಒಂದಾಗಿರುವ ಸೂಪಾ, 564 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿದೆ. ಅದರಲ್ಲಿ ಈ ವರ್ಷ ಜೂನ್ 16ರಂದು ಕಳೆದ ವರ್ಷಕ್ಕಿಂತ 5.75 ಮೀಟರ್‌ಗಳಷ್ಟು ಹೆಚ್ಚು ನೀರು ತುಂಬಿಕೊಂಡಿದೆ.

ಜಿಲ್ಲೆಯ ಎಲ್ಲ ಜಲಾಶಯಗಳೂ ವಿದ್ಯುತ್ ಉತ್ಪಾದನೆಗೆಂದೇ ನಿರ್ಮಾಣವಾಗಿವೆ. ಕೋವಿಡ್ ಕಾರಣದಿಂದ ಈ ವರ್ಷವೂ ದೇಶದಾದ್ಯಂತ ಲಾಕ್‌ಡೌನ್ ಹಾಗೂ ಸೆಮಿ ಲಾಕ್‌ಡೌನ್ ಮುಂದುವರಿಯಿತು. ಕೈಗಾರಿಕೆಗಳು, ವಿವಿಧ ವಾಣಿಜ್ಯೋದ್ಯಮಗಳು ಕಾರ್ಯನಿರ್ವಹಿಸಲಿಲ್ಲ. ಹಾಗಾಗಿ, ಕಡು ಬೇಸಿಗೆಯಲ್ಲೂ ವಿದ್ಯುತ್‌ಗೆ ಬೇಡಿಕೆ ಕುಸಿದಿತ್ತು. ಇದರಿಂದ ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದಿಸುವಂತೆ ಕೇಂದ್ರ ಗ್ರಿಡ್‌ನಿಂದ ಸೂಚನೆ ಬರಲಿಲ್ಲ. ಹೀಗಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಖರ್ಚಾಗಲಿಲ್ಲ ಎನ್ನುತ್ತಾರೆ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು.

‘200 ಎಂ.ಯು.ಗೂ ಕಡಿಮೆ’:

‘ಸಾಮಾನ್ಯವಾಗಿ ಪ್ರತಿವರ್ಷ ಮೇ ಮತ್ತು ಏಪ್ರಿಲ್ ತಿಂಗಳಲ್ಲಿ 250ರಿಂದ 260 ಮಿಲಿಯನ್ ಯೂನಿಟ್‌ಗಳಷ್ಟು (ಎಂ.ಯು) ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಈ ವರ್ಷ ಬೇಡಿಕೆಯು 200 ಮಿಲಿಯನ್ ಯೂನಿಟ್‌ಗಿಂತಲೂ ಕಡಿಮೆಯಾಗಿತ್ತು’ ಎಂದು ಕಾಳಿ ಜಲ ವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್ ಟಿ.ಆರ್.ನಿಂಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ನದಿಪಾತ್ರದ ಜನರಿಗೆ ಸೂಚನೆ:

ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಬುಧವಾರ ಬೆಳಿಗ್ಗೆ 8ಗಂಟೆಗೆ 10,317 ಕ್ಯುಸೆಕ್ ನೀರಿನ ಒಳಹರಿವು ಇತ್ತು. 30.60ಮೀಟರ್ ನೀರು ಸಂಗ್ರಹವಾಗಿತ್ತು. 34.50 ಮೀಟರ್ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಗರಿಷ್ಠ 32.50 ಮೀಟರ್ ನೀರು ಸಂಗ್ರಹವಾದ ಬಳಿಕ ಹೆಚ್ಚುವರಿ ನೀರನ್ನು ಕಾಳಿ ನದಿಗೆ ಹರಿಸಲಾಗುವುದು.

ಜಲಾಶಯದ ಕೆಳಭಾಗದಲ್ಲಿರುವ ಜನ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಅಲ್ಲದೇ ಜಾನುವಾರನ್ನು ಕೂಡ ತೆರವು ಮಾಡಲು ಕ್ರಮ ಕೈಗೊಳ್ಳಬೇಕು. ನದಿಯಲ್ಲಿ ದೋಣಿ ಸಂಚಾರ, ಮೀನುಗಾರಿಕೆಯಂಥ ಚಟುವಟಿಕೆ ನಡೆಸಬಾರದು ಎಂದು ಕರ್ನಾಟಕ ವಿದ್ಯುತ್ ನಿಗಮ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT