ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ಸೀಬರ್ಡ್ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆ ದಿನಾಚರಣೆ

ಸೀಬರ್ಡ್ ನೌಕಾನೆಲೆಯಲ್ಲಿ ‘ನೌಕಾಪಡೆ ದಿನಾಚರಣೆ’ ಕಾರ್ಯಕ್ರಮದಲ್ಲಿ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್
Last Updated 4 ಡಿಸೆಂಬರ್ 2019, 15:36 IST
ಅಕ್ಷರ ಗಾತ್ರ

ಕಾರವಾರ: ಭಾರತೀಯ ನೌಕಾಪಡೆದಿನಾಚರಣೆ ಅಂಗವಾಗಿ ಇಲ್ಲಿನ ಸೀಬರ್ಡ್ ನೌಕಾನೆಲೆಯಲ್ಲಿ ಬುಧವಾರ ‘ಬೀಟಿಂಗ್ ರಿಟ್ರೀಟ್’ ಕಾರ್ಯಕ್ರವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು. ಇದೇ ವೇಳೆ, ನೌಕಾಪಡೆಯ ಧ್ವಜ ಹಾಗೂ ರಾಷ್ಟ್ರಧ್ವಜ ವಂದನೆ ಮಾಡಲಾಯಿತು.

ನೌಕಾ ಪಡೆಯ ಕರ್ನಾಟಕ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರ ನಿವಾಸದ ಆವರಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನೌಕಾನೆಲೆಯ ಸಿಬ್ಬಂದಿ ವಿವಿಧ ವಾದ್ಯಗಳನ್ನು ಲಯಬದ್ಧವಾಗಿ ನುಡಿಸಿ ಸೇರಿದ್ದವರನ್ನು ಮಂತ್ರಮು‌ಗ್ಧರನ್ನಾಗಿಸಿದರು.

ಯುದ್ಧ ನೌಕೆಗಳಾದ ಐಎನ್‌ಎಸ್ ತಿಲಂಗ್‌ಚಾಂಗ್, ಐಎನ್ಎಸ್‌ ಮಕರ ಹಾಗೂ ಐಎನ್‌ಎಸ್ ಕೋಸ್ವಾರಿಗಳನ್ನು ಕಾರ್ಯಕ್ರಮದ ಅಂಗವಾಗಿವಿದ್ಯುತ್ ದೀಪಗಳಿಂದ ಅಲಂಕರಿಸಿ, ಬಣ್ಣಬಣ್ಣದ ಸಿಡಿಮದ್ದುಗಳನ್ನು ಸಿಡಿಸಲಾಯಿತು.

ಇದೇವೇಳೆ ಮಾತನಾಡಿದ ಮಹೇಶ್ ಸಿಂಗ್, ‘2019 ಭಾರತೀಯ ನೌಕಾಪಡೆಯ ಪಾಲಿಗೆ ಅತ್ಯಂತ ರಚನಾತ್ಮಕ ವರ್ಷವಾಗಿದೆ. ಬಾಲಕೋಟ್‌ನಲ್ಲಿ ಕಾರ್ಯಾಚರಣೆ, ದೇಶದ ವಿವಿಧೆಡೆ ಮಳೆ, ಪ್ರವಾಹದಿಂದ ಸಂಕಷ್ಟಕ್ಕೀಡಾದವರಿಗೆ ನೆರವು ನೀಡುವಲ್ಲಿ ನೌಕಾಪಡೆಯು ಮಹತ್ವದ ಪಾತ್ರ ವಹಿಸಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

‘ದೇಶದ ಭದ್ರತೆಗೆಸಮುದ್ರ ಮಾರ್ಗದಿಂದ ಇರುವತೊಂದರೆಯನ್ನುದೂರಮಾಡಲು ಭಾರತೀಯ ನೌಕಾಪಡೆಯುವ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರೊಂದಿಗೆ ಹತ್ತಾರು ಮಾನವೀಯ ಕಾರ್ಯಾಚರಣೆಗಳಲ್ಲೂ ಭಾಗವಹಿಸುತ್ತಿದೆ. ದೇಶದ ಅಭಿವೃದ್ಧಿಗೆಸಮುದ್ರ ಮಾರ್ಗದ ಮೂಲಕ ವ್ಯಾಪಾರ ವ್ಯವಹಾರ ನಡೆಯುವುದು ಮುಖ್ಯ. ಇದಕ್ಕಿರುವ ಆತಂಕಗಳನ್ನೂ ನೌಕಾಪಡೆ ನಿವಾರಿಸುತ್ತಿದೆ’ ಎಂದು ಹೇಳಿದರು.

ನೌಕಾಪಡೆಗೆ ಮತ್ತಷ್ಟು ಬಲ

‘ಭಾರತೀಯ ನೌಕಾಪಡೆಯನ್ನು ಆಧುನಿಕ ಹಾಗೂ ಮತ್ತಷ್ಟು ಸುಸಜ್ಜಿತವನ್ನಾಗಿಸುವ ಕಾರ್ಯ ಜಾರಿಯಲ್ಲಿದೆ. ಇದರ ಅಂಗವಾಗಿ ಮುಂಬರುವ ವರ್ಷಗಳಲ್ಲಿ ಹೊಸಹಡಗುಗಳು, ಸಬ್‌ಮರೀನ್‌ಗಳ ಸೇರ್ಪಡೆ ಆಗಲಿದೆ. ಜೊತೆಗೆಹಳೆಯ ಹಡಗುಗಳ ದುರಸ್ತಿ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲಾಗುತ್ತದೆ’ ಎಂದು ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ತಿಳಿಸಿದರು.

‘ಸೀಬರ್ಡ್ ನೌಕಾನೆಲೆಯ ಎರಡನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಇದು ದೇಶದ ಅತಿದೊಡ್ಡ ನೌಕಾನೆಲೆಯಾಗಿ ರೂಪುಗೊಳ್ಳಲಿದೆ. ಇದೆಲ್ಲವೂ ಕಾರವಾರದ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗಿದೆ’ ಎಂದು ಮೆಚ್ಚುಗೆಸೂಚಿಸಿದರು.

‘ಭಾರತೀಯ ನೌಕಾಪಡೆಯು ತನ್ನ ಕಾರ್ಯಾಚರಣೆಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಹಾಗಾಗಿ ಹಲವು ದೇಶಗಳು ನಮ್ಮೊಂದಿಗೆ ಜಂಟಿ ಸಮರಾಭ್ಯಾಸ ಮಾಡಲು ಮುಂದೆ ಬರುತ್ತಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಕರಾಚಿಯ ನೌಕಾನೆಲೆಯ ಮೇಲೆ ಭಾರತೀಯ ನೌಕಾಪಡೆಯ ಕ್ಷಿಪಣಿ ವಾಹಕ ನೌಕೆಗಳು ದಾಳಿ ಮಾಡಿದ್ದವು. ಇದರಿಂದಪಾಕಿಸ್ತಾನವು ಸೋಲು ಕಂಡಿತ್ತು. ಇದರ ನೆನಪಿಗಾಗಿ ಪ್ರತಿ ವರ್ಷ ಡಿ.4ರಂದು ‘ನೌಕಾಪಡೆ ದಿನಾಚರಣೆ’ ಹಮ್ಮಿಕೊಳ್ಳಲಾಗುತ್ತದೆ.

ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ, ಪ್ರಧಾನಜಿಲ್ಲಾ ಮತ್ತುಸೆಷನ್ಸ್ನ್ಯಾಯಾಧೀಶರಾದ ವಿಪುಲಾ ಪೂಜಾರಿ,ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ, ಕೈಗಾ ಅಣುವಿದ್ಯುತ್ ಸ್ಥಾವರದ ನಿರ್ದೇಶಕ ಸತ್ಯನಾರಾಯಣ, ಕೊಂಕಣ ರೈಲ್ವೆಯ ಪ್ರಾದೇಶಿಕ ನಿರ್ದೇಶಕಿ ಬಿ.ಬಿ.ನಿಕಂ, ನೌಕಾಪಡೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT