ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ತಾರತಮ್ಯದ ಗುರುತಿಗೆ ಆಕ್ಷೇಪ

ರಸ್ತೆ ಅಗಲೀಕರಣ:ಲೋಕೋಪಯೋಗಿ ಇಲಾಖೆಯಿಂದ ಗಡಿ ನಿಗದಿ
Last Updated 17 ಆಗಸ್ಟ್ 2021, 16:37 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ಹಾದುಹೋಗುವ ಖಾನಾಪುರ–ತಾಳಗುಪ್ಪ ರಾಜ್ಯ ಹೆದ್ದಾರಿಯನ್ನು ದ್ವಿಪಥಗೊಳಿಸುವ ಸಂಬಂಧ ರಸ್ತೆ ವಿಸ್ತರಣೆ ಮಾಡಲು ಪಿಡಬ್ಲುಡಿ ಗಡಿ ಗುರುತು ಹಾಕುತ್ತಿದೆ. ಏಕರೂಪದ ಬದಲು ಭಿನ್ನ ಅಳತೆ ಮಾಡಿ ಗುರುತು ಹಾಕಲಾಗುತ್ತಿದೆ ಎಂಬುದು ಆಸ್ತಿ ಮಾಲೀಕರ ಆರೋಪವಾಗಿದೆ.

‘ರಸ್ತೆ ವಿಸ್ತರಣೆಗೆ ಕೆಲ ದಿನದ ಹಿಂದೆ ಒಮ್ಮೆ ಗುರುತು ಹಾಕಲಾಗಿತ್ತು. ಈಗ ಇನ್ನೊಂದು ಗುರುತು ಹಾಕಲಾಗುತ್ತಿದೆ. ಕಟ್ಟಡದ ಇದ್ದಲ್ಲಿ ಹೆಚ್ಚು ಭಾಗ ತೆರವುಗೊಳಿಸುವ ಸಂಬಂಧ ಗುರುತು ಹಾಕಿದ್ದರೆ, ಅದರ ಪಕ್ಕ ಕಡಿಮೆ ಜಾಗ ಪಡೆಯಲು ಗುರುತು ಹಾಕಿದ್ದಾರೆ’ ಎಂದು ಕೆಲ ಭೂಮಾಲೀಕರು ಆರೋಪಿಸಿದ್ದಾರೆ.

‘ವಿಧಾನಸಭಾ ಅಧ್ಯಕ್ಷರ ಸಮ್ಮುಖದಲ್ಲಿ ನಡೆದಿದ್ದ ಸಭೆಯಲ್ಲಿ ಸರ್ಕಾರಿ ಭೂಮಿ ಇದ್ದ ಕಡೆ ಹೆಚ್ಚು ವಿಸ್ತರಣೆಗೊಳಿಸುವ ಭರವಸೆ ನೀಡಲಾಗಿತ್ತು. ಈಗ ನೋಡಿದರೆ ಖಾಸಗಿ ಜಮೀನು ಸ್ವಾಧೀನ ಪ್ರಮಾಣವೇ ಅಧಿಕ ಎಂಬುದು ಅರಿಕೆಯಾಗುತ್ತಿದೆ’ ಎಂದು ದೂರಿದರು.

‘ಪಿಡಬ್ಲುಡಿ ವ್ಯಾಪ್ತಿಗೆ ಸೇರಬೇಕಾದ ಜಾಗಕ್ಕಷ್ಟೇ ಗುರುತು ಹಾಕಿದ್ದೇವೆ. ಈ ಮೊದಲು ಜನರಿಗೆ ಮನವರಿಕೆ ಮಾಡಿಕೊಡಲು ಮೊದಲ ಹಂತದ ಸಮೀಕ್ಷೆ ನಡೆಯಿತು. ಈ ಬಾರಿ ಸರ್ವೆ, ಕಂದಾಯ ಇಲಾಖೆ ಜತೆಗೂಡಿ ಜಂಟಿ ಸಮೀಕ್ಷೆ ನಡೆಸಿದ್ದೇವೆ. ನಿಯಮ ಪ್ರಕಾರವೇ ಅಳತೆ ಮಾಡಿ ಗುರುತು ಹಾಕಿದ್ದೇವೆ. ತಾರತಮ್ಯದ ಪ್ರಶ್ನೆಯೇ ಇಲ್ಲ’ ಎಂದು ಪಿಡಬ್ಲುಡಿ ಎಂಜಿನಿಯರ್ ಹನುಮಂತ ನಾಯ್ಕ ಪ್ರತಿಕ್ರಿಯಿಸಿದರು.

ಯಲ್ಲಾಪುರ ನಾಕಾದಿಂದ ಪಂಡಿತ ಸಾರ್ವಜನಿಕ ಆಸ್ಪತ್ರೆ ವರೆಗಿನ ನಾಲ್ಕು ಕಿ.ಮೀ. ಉದ್ದದ ರಸ್ತೆ ದ್ವಿಪಥಕ್ಕೆ ಭೂಸ್ವಾಧೀನ ಆಗಬೇಕಿದೆ. ರಸ್ತೆ ಮಧ್ಯದಿಂದ ಎರಡೂ ಬದಿಗೆ ತಲಾ 11.50 ಮೀ. ಮತ್ತು ಮುಖ್ಯ ವೃತ್ತದಲ್ಲಿ 18.50 ಮೀ. ವಿಸ್ತರಣೆ ಮಾಡಲು ಯೋಜನೆ ರೂಪಿಸಿ, ನೀಲನಕ್ಷೆ ಸಿದ್ಧಗೊಂಡಿದೆ. ರಸ್ತೆ ಸುಧಾರಣೆಗೆ ₹15 ಕೋಟಿ ಮೊತ್ತ ಮಂಜೂರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT