ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ: ಭತ್ತದ ಬೇಸಾಯದತ್ತ ರೈತರ ಚಿತ್ತ

ಉತ್ತಮ ಮಳೆಯ ನಿರೀಕ್ಷೆಯಲ್ಲಿ ಭೂಮಿ ಹದಗೊಳಿಸುವ ಕಾರ್ಯ
Last Updated 27 ಮೇ 2022, 7:00 IST
ಅಕ್ಷರ ಗಾತ್ರ

ಗೋಕರ್ಣ: ಈರುಳ್ಳಿ, ಕಲ್ಲಂಗಡಿ, ಗೆಣಸು ಬೆಳೆಗೆ ಸರಿಯಾದ ಆದಾಯ ಸಿಗದೇ ನಷ್ಟ ಅನುಭವಿಸಿದ್ದ ರೈತರು, ಈಗ ಭತ್ತದ ಬೀಜ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಉತ್ತಮ ಮಳೆಯೂ ಬೀಳುವ ಆಶಾಭಾವದೊಂದಿಗೆ ಕೃಷಿ ಚಟುವಟಿಕೆಗೆ ಭೂಮಿ ಹದ ಮಾಡುತ್ತಿದ್ದಾರೆ.

ಗೋಕರ್ಣ ಹೋಬಳಿಯಲ್ಲಿ ಹೆಚ್ಚಿನ ರೈತರು ಅತಿ ಸಣ್ಣ ಹಿಡುವಳಿದಾರರಾಗಿದ್ದಾರೆ. ಈ ಭಾಗದಲ್ಲಿ ಒಟ್ಟು 830 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ಬೆಳೆ ಮಾಡಲಾಗುತ್ತಿದೆ. ಬೀಜ ವಿತರಣೆ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ 46 ಕ್ವಿಂಟಲ್ ವಿತರಿಸಲಾಗಿದೆ. ಒಮ್ಮೆ ಮಳೆ ಪ್ರಾರಂಭವಾದರೆ ಬೀಜ ವಿತರಣೆಯಲ್ಲಿಯೂ ವೇಗ ಪಡೆಯುತ್ತದೆ.

‘ಈ ಭಾಗದಲ್ಲಿ ಪ್ರತಿ ವರ್ಷ ಸುಮಾರು 400 ಕ್ವಿಂಟಲ್ ಬೀಜ ವಿತರಿಸಲಾಗುತ್ತಿದ್ದು, ಅದರಲ್ಲಿ ಜಯಾ ಬೀಜಕ್ಕೆ ಹೆಚ್ಚಿನ ಬೇಡಿಕೆಯಿದೆ. ಸುಮಾರು 350 ಕ್ವಿಂಟಲ್ ಬೀಜ ವಿತರಿಸಲಾಗುತ್ತದೆ. 1,001 ಎಂ.ಟಿ.ಯು ಜಾತಿಯ ಬೀಜ 40 ಕ್ವಿಂಟಲ್ ಹಾಗೂ ಉಳಿದಿದ್ದು ಹೈಬ್ರೀಡ್ ಬೀಜ ನೀಡಲಾಗುತ್ತಿದೆ’ ಎಂದು ಕೃಷಿ ಅಧಿಕಾರಿ ಚಿದಾನಂದ ತಿಳಿಸಿದ್ದಾರೆ.

‘ವರ್ಷದಿಂದ ವರ್ಷಕ್ಕೆ ಹೈಬ್ರೀಡ್ ಬೀಜಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕೆಲಸವೂ ಬೇಗ ಮುಗಿಯುತ್ತದೆ. ಖರ್ಚೂ ಕಡಿಮೆ ಆದ್ದರಿಂದ ಕೆಲವು ರೈತರು ಹೈಬ್ರೀಡ್ ಬೀಜವನ್ನೇ ಬಿತ್ತುತ್ತಿದ್ದಾರೆ’ ಎಂದು ಹೇಳುತ್ತಾರೆ.

‘ಕೆ– ಕಿಸಾನ್ ಪೋರ್ಟಲ್ ಮುಖಾಂತರ ರೈತರಿಗೆ ಬೀಜ ವಿತರಿಸಲಾಗುತ್ತಿದೆ. ಆಧಾರ್ ಕಾರ್ಡ್ ಸಂಖ್ಯೆ ನೋಂದಣಿ ಮಾಡಿ ಬೀಜ ನೀಡಲಾಗುತ್ತಿದೆ. ಆದ್ದರಿಂದ ರೈತರು ಆಧಾರ್ ಕಾರ್ಡ್‌ಅನ್ನು ಅವಶ್ಯವಾಗಿ ತರಬೇಕು’ ಎಂದು ಸೂಚಿಸಿದ್ದಾರೆ. ಚಂಡ ಮಾರುತದ ಪರಿಣಾಮದಿಂದ ಮಳೆ ಜೂನ್ ಮೊದಲ ವಾರದ ನಂತರ ಬರಬಹುದು ಎಂದು ನಿರೀಕ್ಷಿಸಿದ್ದಾರೆ.‌

ಈ ಭಾಗದಲ್ಲಿ ಯಾಂತ್ರೀಕೃತ ನಾಟಿಗೆ ರೈತರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಕೆಲವೇ ಕೆಲವು ರೈತರು ಸಸಿ ನಾಟಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಯಂತ್ರಗಳ ಮೂಲಕ ನಾಟಿಯಲ್ಲಿ ಕೆಲಸವೂ ಕಡಿಮೆ, ಖರ್ಚು ಕಡಿಮೆ. ಕಳೆಯೂ ಕಡಿಮೆಯಾಗಿ ಭತ್ತದ ಇಳುವರಿ ಜಾಸ್ತಿ ದೊರಕುತ್ತಿದೆ. ಹಾಗಾಗಿ ಬಹು ಭಾಗದ ಜನ ಯಂತ್ರಗಳ ಮೂಲಕ ನಾಟಿಯನ್ನೇ ಬಳಸುತ್ತಿದ್ದಾರೆ. ಭತ್ತದ ಕೃಷಿ ಇಲ್ಲಿಯ ರೈತರಿಗೆ ಕೇವಲ ಆದಾಯವಾಗಿದೆ. ಇದನ್ನೇ ನಂಬಿಕೊಂಡು ಜೀವನ ಸಾಗಿಸುವುದು ಬಲು ಕಷ್ಟ.

ಸಿಬ್ಬಂದಿ, ಗೋದಾಮು ಕೊರತೆ
ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದೆ. ಕುಮಟಾ, ಕೂಜಳ್ಳಿ, ಮಿರ್ಜಾನ್ ಮತ್ತು ಗೋಕರ್ಣ ಹೋಬಳಿ ಸೇರಿ ಕೇವಲ ಇಬ್ಬರೇ ಕೃಷಿ ಅಧಿಕಾರಿ ಇದ್ದಾರೆ. ಉಳಿದವರು ಹೊರ ಗುತ್ತಿಗೆ ನೌಕರರಾಗಿದ್ದಾರೆ. ಇದರಿಂದ ರೈತರು ಅವಶ್ಯಕ ಮಾಹಿತಿಯಿಂದ ವಂಚಿತರಾಗುತ್ತಿದ್ದಾರೆ.

ಗೋಕರ್ಣದಲ್ಲಿ ಗೋದಾಮಿನ ಕೊರತೆಯೂ ಇದೆ. ಬೀಜ, ರಸಗೊಬ್ಬರ ಸಂಗ್ರಹಿಸಿಡಲು ಸೂಕ್ತವಾದ ಸ್ಥಳದ ಅಭಾವವಿದ್ದು, ಕೃಷಿ ಯಂತ್ರಗಳನ್ನು ಇಡಲಂತೂ ಸ್ಥಳವೇ ಇಲ್ಲದಾಗಿದೆ.

*
ಗೆಣಸು, ಈರುಳ್ಳಿ, ಕಲ್ಲಂಗಡಿ ಬೆಳೆಯಿಂದ ನಷ್ಟ ಅನುಭವಿಸಿದ್ದೇವೆ. ಈಗ ಭತ್ತದ ಬೆಳೆಯಾದರೂ ಹೆಚ್ಚಿನ ಲಾಭ ತರಬಹುದು ಎಂಬ ಆಶಯ ಇದೆ
-ನಾಗಪ್ಪ ವೆಂಕ್ಟ ಗೌಡ ರೈತ, ಬಿಜ್ಜೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT