ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ | ನಿಲ್ದಾಣವೂ ಇಲ್ಲ, ಬಸ್ ಸಂಚಾರವೂ ಇಲ್ಲ!

ಅರ್ಧಂಬರ್ಧ ಕೆಡವಿದ ಸ್ಥಿತಿಯಲ್ಲಿರುವ ಪಟ್ಟಣದ ಬಸ್ ನಿಲ್ದಾಣ
Last Updated 9 ಜೂನ್ 2020, 19:30 IST
ಅಕ್ಷರ ಗಾತ್ರ

ಹೊನ್ನಾವರ: ಲಾಕ್‌ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಬಸ್ ಸಂಚಾರಕ್ಕೆಅನುಮತಿ ದೊರೆತು ಕೆಲವು ದಿನ ಕಳೆದಿದ್ದರೂ ತಾಲ್ಲೂಕಿನಲ್ಲಿಬಸ್ ಸದ್ದು ಕೇಳುತ್ತಿಲ್ಲ. ಇತ್ತ ಬಸ್ ನಿಲ್ದಾಣದ ಹಳೆಯ ಕಟ್ಟಡವನ್ನು ಅರ್ಧಂಬರ್ಧ ತೆರವುಗೊಳಿಸಿದ ಕಾರಣ ಪ್ರಯಾಣಿಕರು, ಸಿಬ್ಬಂದಿಗೆ ತೊಂದರೆಯಾಗಿದೆ.

ಹೊನ್ನಾವರ– ಕುಮಟಾ ಹಾಗೂ ಹೊನ್ನಾವರ– ಭಟ್ಕಳ ನಡುವೆ ಮಾತ್ರ ಸದ್ಯ ಬೆರಳೆಣಿಕೆಯಷ್ಟು ಬಸ್‌ಗಳ ಸಂಚಾರವಿದೆ. ಲಾಕ್‌ಡೌನ್ ಸಡಿಲಿಕೆಯ ನಂತರ ತಾಲ್ಲೂಕಿನ ಕೆಲವು ಭಾಗಗಳಿಗೆ ಬಸ್ ಸೇವೆ ಆರಂಭಿವಾಗಿದ್ದರೂ ಪ್ರಯಾಣಿಕರ ಕೊರತೆಯಿಂದ ಒಂದೇ ದಿನದಲ್ಲಿ ಇವುಗಳನ್ನು ನಿಲ್ಲಿಸಲಾಗಿದೆ.

‘ಸಾಮಾನ್ಯವಾಗಿ ಹೆಚ್ಚು ಪ್ರಯಾಣಿಕರು ಇರುತ್ತಿದ್ದ ಗೇರುಸೊಪ್ಪ, ಮಾವಿನಕುರ್ವ, ಗುಂಡಬಾಳ ಹಾಗೂ ಇಡಗುಂಜಿ ಮಾರ್ಗಗಳಿಗೆ ಬಸ್ ಬಿಡಲಾಗಿತ್ತು. ಇದರ ಹಿಂದೆ ಲಾಭದ ಲೆಕ್ಕಾಚಾರ ಇರಲಿಲ್ಲ. ಪ್ರಯಾಣಿಕರು ಬಸ್ ಹತ್ತಲು ಮುಂದೆ ಬಾರದ ಕಾರಣಖಾಲಿ ಬಸ್ ಓಡಿಸುವ ಬದಲು ಅದನ್ನು ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಬಸ್‌ಗಳು ಸುಸ್ಥಿತಿಯಲ್ಲಿವೆ ಹಾಗೂ ಚಾಲಕ– ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ’ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕುಮಟಾ ಡಿಪೊದ ಸಹಾಯಕ ಸಂಚಾರ ಅಧಿಕಾರಿ ಶಿವಾನಂದ ತಿಳಿಸಿದರು.

‘ನಿಗದಿತ ಸಮಯಕ್ಕೆ ಹಾಗೂ ಪ್ರತಿನಿತ್ಯ ಬಸ್ ಸಂಚಾರವಿದ್ದರೆ ಜನರು ಬರುತ್ತಾರೆ. ಬಸ್ ಬರುವುದು ಅನಿಶ್ಚಿತವಾದರೆ ಪ್ರಯಾಣಿಕರು ಹೇಗೆ ಅದನ್ನು ಅವಲಂಬಿಸಲು ಸಾಧ್ಯ? ಬಸ್ ಓಡಾಟ ಇಲ್ಲದೆ ನಿತ್ಯ ಕಚೇರಿಗೆ ಬರಬೇಕಾದ ನನಗೆ ತೀರ ಅನನುಕೂಲವಾಗಿದೆ’ ಎಂದು ಮಂಕಿ ಗ್ರಾಮದ ರಕ್ಷಿತಾ ನಾಯ್ಕ ಅಸಹಾಯಕತೆ ವ್ಯಕ್ತಪಡಿಸಿದರು.

ಅಪಾಯದ ಆತಂಕ:ಇಲ್ಲಿನ ಬಸ್ ನಿಲ್ದಾಣದ ಸ್ಥಿತಿ ಇನ್ನೂ ಗಂಭೀರವಾಗಿದೆ. ಹೊಸ ಬಸ್ ನಿರ್ಮಾಣಕ್ಕೆಂದು ಹಳೆಯ ಕಟ್ಟಡವನ್ನು ಅರ್ಧಂಬರ್ಧ ಕೆಡವಲಾಗಿದೆ. ಇದರಿಂದ ನಿಲ್ದಾಣದಲ್ಲಿ ನಿಲ್ಲಲೇಬೇಕಾದ ಅನಿವಾರ್ಯತೆ ಇರುವ ಪ್ರಯಾಣಿಕರಿಗೆ ಅಪಾಯ ಎದುರಾಗಿದೆ. ಮಳೆಗಾಲದಲ್ಲಿ ಈ ಪ್ರಕ್ರಿಯೆ ಆರಂಭಿಸಿರುವ ಕಾರಣ ಪ್ರಯಾಣಿಕರ ಜೊತೆಗೆ ನಿಲ್ದಾಣದ ಅಧಿಕಾರಿಗಳೂ ಮಳೆಯಲ್ಲಿ ನೆನೆಯುವ ಸ್ಥಿತಿಯಿದೆ.

‘ಬಸ್ ಸೇವೆ ಹಾಗೂ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಪ್ರಯಾಣಿಕರ ಪ್ರಶ್ನೆಗಳಿಗೆ ಉತ್ತರಿಸುವುದು ತುಂಬಾ ಕಷ್ಟಕರವಾಗಿದೆ. ನಿಲ್ದಾಣದಲ್ಲಿ ನಮಗೆ ಊಟ– ತಿಂಡಿಗೂ ಪರದಾಡಬೇಕಾಗಿದೆ’ ಎಂದು ಸಂಸ್ಥೆಯ ಸಿಬ್ಬಂದಿ ಎಂ.ಎಲ್.ನಾಯ್ಕ ಅಳಲು ತೋಡಿಕೊಂಡರು.

‘ತಾತ್ಕಾಲಿಕ ವ್ಯವಸ್ಥೆಗೆ ಪ್ರಯತ್ನ’:ಬಸ್ ನಿಲ್ದಾಣದ ಹಳೆಯ ಕಟ್ಟಡ ಕೆಡವುವ ಹಾಗೂ ಅದರ ಪುನರ್ ನಿರ್ಮಾಣ ಕಾಮಗಾರಿಯನ್ನು ಸಂಸ್ಥೆಯು ಪ್ರತ್ಯೇಕ ವ್ಯಕ್ತಿಗಳಿಗೆ ಹೊರಗುತ್ತಿಗೆ ನೀಡಿದೆ.ಈ ಕುರಿತಂತೆ ಸ್ಥಳೀಯ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲ.

‘ಹಳೆಯ ಬಸ್ ನಿಲ್ದಾಣ ನೆಲಸಮ ಮಾಡುವಕಾಮಗಾರಿಯನ್ನು ಹುಬ್ಬಳ್ಳಿಯ ಗುತ್ತಿಗೆದಾರರಿಗೆ ನೀಡಲಾಗಿದೆ. ಬೆಳಗಾವಿ ಮೂಲದ ಕಂಪನಿ ₹ 5 ಕೋಟಿ ವೆಚ್ಚದ ಹೊಸ ಕಟ್ಟಡ ನಿರ್ಮಾಣಕಾಮಗಾರಿ ಟೆಂಡರ್ ಪಡೆದಿದೆ. 15 ತಿಂಗಳುಗಳಲ್ಲಿ ಕಾಮಗಾರಿ ಮುಗಿಸಬೇಕಿದೆ. ನಿಲ್ದಾಣಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆದಿದೆ’ ಎಂದು ಸಂಸ್ಥೆಯ ಸಿವಿಲ್ ವಿಭಾಗದ ಎಂಜಿನಿಯರ್ ರಾಮದಾಸ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT