ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಪ್ಲಾಸ್ಟಿಕ್ ಕವರ್‌ಗೆ ಇಲ್ಲ ಪ್ರವೇಶ: ಶಿರಸಿ ಯುವಕನ ಜಾಗೃತಿ ಕಾರ್ಯ

ಬಳಕೆ ನಿಷೇಧ; ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿರುವ ಯುವಕ
Last Updated 28 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ಚಾಟ್ಸ್‌ ಅಂಗಡಿಯ ಉತ್ಸಾಹಿಯೊಬ್ಬರು ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ಜತೆಗೆ ಗ್ರಾಹಕರಲ್ಲಿ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಈ ಪ್ರಯತ್ನ ಗ್ರಾಹಕರಲ್ಲಿ ಪರಿವರ್ತನೆ ತಂದಿದೆ.

ಇಲ್ಲಿನ ದೇವಿಕೆರೆಯಲ್ಲಿ ನಾರ್ತ್ ಇಂಡಿಯನ್ ಫಾಸ್ಟ್‌ಫುಡ್ ಅಂಗಡಿ ನಡೆಸುವ ಹರೀಶ ಮೋದಿ ಅವರು ‘ನಮ್ಮ ಅಂಗಡಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ’ ಎಂಬ ಫಲಕ ಹಾಕಿದ್ದಾರೆ. ಇದು ಚಾಟ್ಸ್ ತಿನ್ನಲು ಬರುವ ವಿದ್ಯಾರ್ಥಿಗಳು, ಯುವಜನರ ಗಮನಸೆಳೆಯುತ್ತಿದೆ. ‘ನಮ್ಮ ಅಂಗಡಿಗೆ ಬರುವವರು ಪ್ಲಾಸ್ಟಿಕ್ ಕವರ್ ಕೇಳುವುದಿಲ್ಲ. ಪ್ಲಾಸ್ಟಿಕ್ ನಿಷೇಧದ ಫಲಕ ಕಂಡಿರುವ ಅನೇಕರು ಎರಡನೇ ಬಾರಿ ಅಂಗಡಿಗೆ ಬರುವಾಗ ಸ್ವಯಂ ಪ್ರೇರಣೆಯಿಂದ ಬಟ್ಟೆ ಕವರ್, ಸ್ಟೀಲ್‌ ಡಬ್ಬಗಳನ್ನು ತರುತ್ತಾರೆ. ಗ್ರಾಹಕರಲ್ಲಿ ಆ ಮಟ್ಟಿನ ಜಾಗೃತಿ ಮೂಡಿರುವುದು ಸಂತಸದ ಸಂಗತಿ’ ಎನ್ನುತ್ತಾರೆ ರಾಜಸ್ಥಾನದಿಂದ ಬಂದು ಇಲ್ಲಿ ಉದ್ಯಮ ನಡೆಸುತ್ತಿರುವ ಹರೀಶ.

‘ವಿದೇಶಿಗರು ಪರಿಸರ, ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ. ನಾವು ನಮ್ಮ ದೇಶದಲ್ಲೂ ಯಾಕೆ ಇದನ್ನು ಮಾಡಬಾರದು ಎಂದು ಯೋಚಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿರುವ ನಾನು, ಅವರು ಪ್ಲಾಸ್ಟಿಕ್ ವಿರುದ್ಧ ಕೈಗೆತ್ತಿಕೊಂಡಿರುವ ಅಭಿಯಾನಕ್ಕೆ ಕೈಜೋಡಿಸಬೇಕೆಂದುಕೊಂಡೆ’ ಎಂದು ಅವರು ಹೇಳಿದರು.

ಪ್ಲಾಸ್ಟಿಕ್ ಬಳಕೆಗಿಲ್ಲ ತಡೆ: ನಗರಸಭೆ 2017ರಲ್ಲೇ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಜನಜಾಗೃತಿಗಾಗಿ ಅಲ್ಲಲ್ಲಿ ಫಲಕಗಳನ್ನು ಹಾಕಲಾಗಿದೆ. ಆದರೆ, ಬಳಸಿ ಬೀಸಾಡುವ, ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿ ನಡೆಯುತ್ತಿದೆ. ಸಂತೆ ಮಾರ್ಕೆಟ್, ಅಂಗಡಿಗಳಲ್ಲಿ ಸಿಗುವ ಕ್ಯಾರಿಬ್ಯಾಗ್‌ಗಳು ಪರಿಸರ ಮಾಲಿನ್ಯ ಸೃಷ್ಟಿಸುತ್ತಿವೆ.

‘ಕರಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಅಂಗಡಿಗಳ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ. ಆದರೂ, ಕೆಲವು ಕಡೆಗಳಲ್ಲಿ ಕ್ಯಾರಿಬ್ಯಾಗ್ ಬಳಕೆ ನಿಂತಿಲ್ಲ. ಹೊಸ ಅಂಗಡಿಗಳ ಪರವಾನಗಿ ಹಾಗೂ ಪರವಾನಗಿ ನವೀಕರಣದ ವೇಳೆ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲವೆಂದು ಮಾಲೀಕರಿಂದ ದೃಢೀಕರಣಪತ್ರ ಪಡೆದುಕೊಳ್ಳುತ್ತಿದ್ದೇವೆ. 2018ರಲ್ಲಿ ನಡೆಸಿದ ದಾಳಿಯಲ್ಲಿ ಒಟ್ಟು ₹ 84700 ದಂಡ ಹಾಗೂ 2019ರ ಜನೆವರಿಯಿಂದ ಇಲ್ಲಿಯವರೆಗೆ ₹ 1.19 ಲಕ್ಷ ದಂಡ ವಿಧಿಸಲಾಗಿದೆ’ ಎನ್ನುತ್ತಾರೆ ನಗರಸಭೆ ಆರೋಗ್ಯ ನಿರೀಕ್ಷಕ ಆರ್.ಎಂ.ವೆರ್ಣೇಕರ್.

‘ಈವರೆಗೆ ದಂಡದ ಮೊತ್ತ ಕಡಿಮೆಯಿತ್ತು. ಇನ್ನು ದಂಡದ ಮೊತ್ತವನ್ನು ₹25ಸಾವಿರದವರೆಗೆ ಏರಿಸಲು ಯೋಚಿಸಲಾಗಿದೆ. ಪದೇ ಪದೇ ತಪ್ಪು ಮಾಡಿದರೆ, ಅಂಗಡಿಯನ್ನೇ ವಶಪಡಿಸಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT