ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಕಿಸಾನ್ ಸಮ್ಮಾನ್: ಶೇ 89 ಸಾಧನೆ

ಶಿರಸಿ ಉಪವಿಭಾಗದಲ್ಲಿ ಗರಿಷ್ಠ ಸಾಧನೆ
Last Updated 3 ಜುಲೈ 2019, 19:45 IST
ಅಕ್ಷರ ಗಾತ್ರ

ಶಿರಸಿ: ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸುವ ಪ‍್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದಾಖಲೆಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಲ್ಲಿ ಶಿರಸಿ ಉಪವಿಭಾಗ ಮುಂಚೂಣಿಯಲ್ಲಿದೆ. ಈವರೆಗೆ ಶೇ 88.91 ರೈತರ ದಾಖಲೆಗಳು ಆನ್‌ಲೈನ್‌ಗೆ ಸೇರ್ಪಡೆಗೊಂಡಿವೆ.

ಉಪವಿಭಾಗ ವ್ಯಾಪ್ತಿಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳು ಸೇರಿ ಒಟ್ಟು 56,029 ರೈತರನ್ನು ಗುರುತಿಸಲಾಗಿದ್ದು, ಅವರಲ್ಲಿ 49,815 ರೈತರಿಂದ ದಾಖಲೆ ಸಂಗ್ರಹಿಸಲಾಗಿದೆ. ಈಗಾಗಲೇ 46,955 ರೈತರ ದಾಖಲೆಗಳನ್ನು ಆನ್‌ಲೈನ್‌ಗೆ ಹಾಕಲಾಗಿದೆ.

ದಾಖಲೆಗಳನ್ನು ಅಪ್‌ಲೋಡ್ ಮಾಡಲು ಜೂನ್ 30ರ ಗಡುವು ನೀಡಲಾಗಿತ್ತು. ತಂತ್ರಾಂಶದಲ್ಲಿ ಸಮಸ್ಯೆ ಎದುರಾದ ಕಾರಣ ಈ ದಿನಾಂಕವನ್ನು ಜುಲೈ 10ರವರೆಗೆ ವಿಸ್ತರಿಸಲಾಗಿದೆ. ಶಿರಸಿ ಉಪವಿಭಾಗವು ಪೂರ್ವನಿರ್ಧರಿತ ದಿನಾಂಕದ ವೇಳೆಗಾಗಲೇ ಗರಿಷ್ಠ ಸಾಧನೆ ಮಾಡಿತ್ತು.

‘ಇನ್ನು ಸುಮಾರು 9000 ರೈತರ ಹೆಸರು ಮತ್ತು ದಾಖಲೆ ಅಪ್‌ಲೋಡ್ ಮಾಡುವ ಕಾರ್ಯ ಕಾರಣಾಂತರಗಳಿಂದ ಉಳಿದಿದೆ. ಅವರಲ್ಲಿ ಕೆಲವರು ಆ ಜಾಗದಲ್ಲಿ ಈಗ ವಾಸವಾಗಿಲ್ಲ, ಮತ್ತೆ ಕೆಲವರು ಮೃತಪಟ್ಟವರಿದ್ದಾರೆ. ಕೆಲವು ಜಮೀನು ಕೃಷಿಯೇತರ ಭೂಮಿಯಾಗಿ ಮಾರ್ಪಟ್ಟಿದೆ. ಜಂಟಿ ಮಾಲೀಕತ್ವ, ಸರ್ಕಾರಿ ಜಮೀನು, ಸರ್ಕಾರಿ ನೌಕರರು, ಪಿಂಚಣಿದಾರರು, ತೆರಿಗೆ ಪಾವತಿಸುವವರ ಹೆಸರು ಸಹ ಪಟ್ಟಿಯಲ್ಲಿದೆ. ಇವರೆಲ್ಲ ಯೋಜನೆಯ ಪ್ರಯೋಜನ ಪಡೆಯಲು ಅನರ್ಹರಾಗಿದ್ದಾರೆ. ಫಲಾನುಭವಿ ರೈತರ ದಾಖಲೆ ಸಂಗ್ರಹಿಸುವ ಹಾಗೂ ಅಪ್‌ಲೋಡ್ ಮಾಡುವ ಕಾರ್ಯ ಬಹುತೇಕ ಮುಗಿದಿದೆ’ ಎನ್ನುತ್ತಾರೆ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ.

ಪಂಚಾಯತ್‌ರಾಜ್ ಇಲಾಖೆ ಸಿಬ್ಬಂದಿ, ಕೃಷಿ ಇಲಾಖೆ, ಕಂದಾಯ ಇಲಾಖೆಯಲ್ಲಿ ತಹಶೀಲ್ದಾರರಿಂದ ಕೆಳಹಂತದ ಎಲ್ಲ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯದಲ್ಲಿ ಭಾಗಿಯಾದರು. ಮನೆ–ಮನೆ ಪ್ರಚಾರದ ಜೊತೆಗೆ ಆಟೊರಿಕ್ಷಾದಲ್ಲಿ ಪ್ರಚಾರ ನಡೆಸಿದೆವು. ಹೀಗಾಗಿ ರೈತರು ಸರಿಯಾದ ಸಮಯದಲ್ಲಿ ದಾಖಲೆ ತಂದುಕೊಟ್ಟರು. ಬಿಟ್ಟು ಹೋದವರ ಮನೆಗೆ ನಮ್ಮ ಸಿಬ್ಬಂದಿ ತೆರಳಿ ಮಾಹಿತಿ ಸಂಗ್ರಹಿಸಿದರು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT