ಭಾನುವಾರ, ಜನವರಿ 19, 2020
28 °C
ಅವಧಿ ಮುಗಿದರೂ ಹಸ್ತಾಂತರಗೊಳ್ಳದ ಕಟ್ಟಡ ಸಮುಚ್ಚಯ

ಪೊಲೀಸ್ ವಸತಿ ಗೃಹ ನಿರ್ಮಾಣ ವಿಳಂಬ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಇಲ್ಲಿನ ಝೂ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಪೊಲೀಸ್ ಕಾನಸ್ಟೇಬಲ್‌ಗಳ ವಸತಿ ಗೃಹ ಸಮುಚ್ಚಯದ ಕಾಮಗಾರಿ ವಿಳಂಬಗತಿಯಲ್ಲಿ ಸಾಗಿದ್ದು, ಹೊಸ ಮನೆಗಳ ನಿರೀಕ್ಷೆಯಲ್ಲಿದ್ದ ಕಾನಸ್ಟೇಬಲ್‌ಗಳಲ್ಲಿ ನಿರಾಸೆ ಮೂಡಿಸಿದೆ. 

ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮಂಡಳಿಯು ₹ 5.06 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಸುತ್ತಿದೆ. ಶಿಥಿಲಗೊಂಡಿದ್ದ ವಸತಿ ಗೃಹವನ್ನು ಕೆಡವಿ, ಅದೇ ಸ್ಥಳದಲ್ಲಿ ಹೊಸ ವಸತಿ ಸಮುಚ್ಚಯ ನಿರ್ಮಾಣಕ್ಕೆ ಒಂದೂವರೆ ವರ್ಷದ ಹಿಂದೆ ಗುದ್ದಲಿಪೂಜೆ ನಡೆಸಲಾಗಿತ್ತು. ನಿಗದಿಯಂತೆ ಕಳೆದ ಮೇನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಮಳೆಗಾಲ ಶುರುವಾದ ಕಾರಣ ಎರಡು ತಿಂಗಳು ಹೆಚ್ಚುವರಿ ಕಾಲಾವಕಾಶ ಪಡೆಯಲಾಗಿತ್ತು. ಆದರೆ, ಈ ಅವಧಿ ಪೂರ್ಣಗೊಂಡರೂ, ವಸತಿ ಗೃಹಗಳ ಕಾಮಗಾರಿ ಪೂರ್ಣಗೊಂಡಿಲ್ಲ.

ಪೊಲೀಸ್ ಇಲಾಖೆಗೆ ಸೇರಿದ 1.13 ಎಕರೆ ಜಾಗದಲ್ಲಿ ಮೂರು ಪ್ರತ್ಯೇಕ ಕಟ್ಟಡಗಳು ತಲೆಯೆತ್ತಿವೆ. 24 ಪೊಲೀಸ್ ಕಾನಸ್ಟೇಬಲ್ ವಸತಿ ಗೃಹ, ಎರಡು ಪಿಎಸ್‌ಐ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಹಾಲ್, ಅಡುಗೆ ಮನೆ, ಎರಡು ಕೊಠಡಿ, ಶೌಚಾಲಯ, ಬಾಲ್ಕನಿ ಒಳಗೊಂಡ 700 ಚದರ ಅಡಿ ವಿಸ್ತೀರ್ಣದ ಪ್ರತಿ ಮನೆ ಸುಸಜ್ಜಿತವಾಗಿದೆ.

’ಜ್ಯೇಷ್ಥತೆ ಆಧಾರದಲ್ಲಿ ವಸತಿ ಗೃಹಗಳ ಹಂಚಿಕೆಯಾಗಲಿದೆ. ಸಣ್ಣಪುಟ್ಟ ಕೆಲಸಗಳು ಮಾತ್ರ ಉಳಿದಿವೆ. ಇನ್ನು 15 ದಿನಗಳಲ್ಲಿ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ. ಒಂದು ತಿಂಗಳಲ್ಲಿ ವಸತಿ ಗೃಹಗಳನ್ನು ಹಸ್ತಾಂತರಿಸಿಕೊಂಡು, ಹಂಚಿಕೆ ಮಾಡಲಾಗುವುದು’ ಎಂದು ಡಿವೈಎಸ್ಪಿ ಜಿ.ಟಿ.ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಡಿಗೆ ದುಬಾರಿ:

‘ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿರುವ ವಸತಿ ಗೃಹಗಳ ಕಟ್ಟಡಗಳು ಹಳೆಯದಾಗಿದ್ದು, ಶಿಥಿಲಗೊಂಡಿವೆ. ಇಲ್ಲಿ ಸಹ ಹೊಸ ಕಟ್ಟಡ ನಿರ್ಮಿಸಬೇಕಾಗಿದೆ. ಪ್ರತಿ ವರ್ಷ ದುರಸ್ತಿ ಮಾಡಿದರೂ, ಮಳೆಗಾಲದಲ್ಲಿ ಸೋರುತ್ತದೆ. ಅಲ್ಲದೇ ಎಲ್ಲ ಸಿಬ್ಬಂದಿಗೆ ವಸತಿ ಗೃಹಗಳು ಸಿಕ್ಕಿಲ್ಲ. ಸರ್ಕಾರ ನೀಡುವ ಬಾಡಿಗೆ ಭತ್ಯೆ ಹಣ ಬಾಡಿಗೆ ಮನೆಗೆ ನೀಡಲು ಸಾಲದು. ಹೀಗಾಗಿ ಎಲ್ಲ ಸಿಬ್ಬಂದಿಗೂ ವಸತಿ ಗೃಹ ದೊರೆಯುವಂತಾಗಬೇಕು’ ಎಂಬುದು ಸಿಬ್ಬಂದಿ ಒತ್ತಾಯ.

‘ನಗರದಲ್ಲಿ ಇನ್ನೂ 50ಕ್ಕೂ ಹೆಚ್ಚು ಪೊಲೀಸರಿಗೆ ವಸತಿಗೃಹಗಳ ಅಗತ್ಯವಿದೆ. ಡಿವೈಎಸ್ಪಿ, ಸಿಪಿಐ ವಾಸಿಸುವ ಕಟ್ಟಡಗಳು ಸಹ ಜೀರ್ಣಾವಸ್ಥೆಯಲ್ಲಿವೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು