ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್ ಚುನಾವಣೆ: ಇನ್ನೂ ಬಯಲಾಗದ ಅಭ್ಯರ್ಥಿ ಹೆಸರು

ವಿಧಾನಪರಿಷತ್ ಚುನಾವಣೆಗೆ ಏರುತ್ತಿದೆ ಕಾವು: ಆಕಾಂಕ್ಷಿಗಳಿಗೆ ಕುತೂಹಲ
Last Updated 17 ನವೆಂಬರ್ 2021, 14:13 IST
ಅಕ್ಷರ ಗಾತ್ರ

ಕಾರವಾರ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಎದುರಾಳಿಗಳಾಗಿರುವ ಬಿ.ಜೆ.ಪಿ ಮತ್ತು ಕಾಂಗ್ರೆಸ್, ತಮ್ಮ ಅಭ್ಯರ್ಥಿಗಳು ಯಾರು ಎಂಬ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.

ಬಿ.ಜೆ.ಪಿ.ಯಿಂದ ಸ್ಪರ್ಧೆಗೆ ಆಕಾಂಕ್ಷಿಗಳ ದಂಡೇ ಸಿದ್ಧವಿದ್ದು, 21 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅವರ ಪೈಕಿ ಸಮುದಾಯ, ಕರಾವಳಿ, ಮಲೆನಾಡು, ಪ್ರಸಿದ್ಧಿ ಮುಂತಾದ ಹಲವು ಮಾನದಂಡಗಳನ್ನು ಅಳೆದು ತೂಗಿ ಅಭ್ಯರ್ಥಿಯ ಆಯ್ಕೆಯಾಗಲಿದೆ. ಮುಂದಿನ ಒಂದೂವರೆ ವರ್ಷದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಯ ಆಯ್ಕೆ ಮಾಡುವುದು ನಿಚ್ಚಳವಾಗಿದೆ. ಈ ಪೈಕಿ ಕರಾವಳಿ ಭಾಗದಿಂದಲೇ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಯಾರಿಗೇ ಟಿಕೆಟ್ ನೀಡಿದರೂ ಅವರಿಗೆ ಎಲ್ಲ ಆಕಾಂಕ್ಷಿಗಳೂ ಬೆಂಬಲ ನೀಡಲಿದ್ದಾರೆ. ‍ಪಕ್ಷದ ಮುಖಂಡರು ಸಮರ್ಥ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಲಿದ್ದೇವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ವಕ್ತಾರ ನಾಗರಾಜ ನಾಯಕ ಸೇರಿದಂತೆ ಪ್ರಮುಖರೆಲ್ಲರೂ ಹೇಳುತ್ತಿದ್ದಾರೆ.

ಪಕ್ಷದ ಕಾರ್ಯಕರ್ತರ ಸಮಾವೇಶವು ನ.18ರಂದು ಯಲ್ಲಾಪುರದಲ್ಲಿ ಆಯೋಜನೆಯಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸಂಪುಟದ ಸಚಿವರು ಭಾಗವಹಿಸಲಿದ್ದಾರೆ. ರಾಜ್ಯದಾದ್ಯಂತ ನಾಲ್ಕು ತಂಡಗಳಲ್ಲಿ ಈ ರೀತಿ ಸಮಾವೇಶಗಳನ್ನು ಮಾಡಲಾಗುತ್ತಿದೆ. ಕಾರ್ಯಕರ್ತರನ್ನು ಮುಂದಿನ ಚುನಾವಣೆಗೆ ಅಣಿಗೊಳಿಸಲು ಚೈತನ್ಯ ತುಂಬುವುದೇ ಇದರ ಉದ್ದೇಶವಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.

ಇತ್ತ ಕಾಂಗ್ರೆಸ್ ಇನ್ನೂ ಚುನಾವಣೆಗೆ ಸಿದ್ಧತೆಯಲ್ಲೇ ತೊಡಗಿದೆ. ಜಿಲ್ಲೆಯ ಮಟ್ಟಿಗೆ ನಿರ್ಣಾಯಕ ಪಾತ್ರ ವಹಿಸುವ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ವಿದೇಶ ‍ಪ್ರವಾಸದಲ್ಲಿದ್ದಾರೆ. ಅವರು ನ.19ರ ವೇಳೆಗೆ ವಾಪಸ್ ಬರಲಿದ್ದಾರೆ. ಬಳಿಕ ಅಭ್ಯರ್ಥಿಯ ಆಯ್ಕೆಯಾಗಲಿದೆ ಎಂದು ಪ್ರಮುಖರು ಹೇಳಿದ್ದಾರೆ.

‘ಅಭ್ಯರ್ಥಿಯ ಆಯ್ಕೆ ತಡವಾದಷ್ಟೂ ಬಿ.ಜೆ.ಪಿ.ಯನ್ನು ಎದುರಿಸುವುದು ಕಷ್ಟವಾಗಲಿದೆ. ಆಡಳಿತಾರೂಢ ಪಕ್ಷವು ಜಿಲ್ಲೆಯ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಪಡೆದುಕೊಂಡಿದೆ. ಹಾಗಾಗಿ ಆ ‍ಪ್ರಭಾವಳಿಯನ್ನು ಮೀರಿ ಕೆಲಸ ಮಾಡಲು ಅಭ್ಯರ್ಥಿಯ ಹೆಸರು ಪ್ರಕಟಿಸುವುದು ಮುಖ್ಯವಾಗುತ್ತದೆ. ಜಿಲ್ಲೆಯವರಿಗೇ ಟಿಕೆಟ್ ನೀಡುತ್ತಾರೋ ಅಥವಾ ಹೊರಗಿನಿಂದ ಕರೆಸಿಕೊಳ್ಳುತ್ತಾರೋ ಗೊತ್ತಿಲ್ಲ’ ಎಂದು ಟಿಕೆಟ್ ಆಕಾಂಕ್ಷಿಯೊಬ್ಬರು ಅಭಿಪ್ರಾಯ ಪಟ್ಟರು.

ಮೂವರಿಗೆ ಮಾತ್ರ ಪ್ರವೇಶ:

ಕಾರವಾರ: ವಿಧಾನ ಪರಿಷತ್ ಚುನಾವಣೆಗೆ ನ.23ರವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ಕೋವಿಡ್ ಕಾರಣದಿಂದ ಅಭ್ಯರ್ಥಿಯ ಸಹಿತ ಮೂವರಿಗೆ ಮಾತ್ರ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿ ಕೊಠಡಿಗೆ ಪ್ರವೇಶಿಸಲು ಅವಕಾಶವಿದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಬರುವಾಗ ಮೂರು ವಾಹನಗಳನ್ನು ಮಾತ್ರ ತರಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT