ಬುಧವಾರ, ಅಕ್ಟೋಬರ್ 28, 2020
24 °C
ರಸ್ತೆಯ ನಡುವೆ ಅಲ್ಲಲ್ಲಿ ದೊಡ್ಡ ಹೊಂಡಗಳು: ನಡುವೆಯೇ ಹರಿಯುವ ನೀರು

ಸಂಪೂರ್ಣ ಹದಗೆಟ್ಟ ಹಿಲ್ಲೂರು ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಂಕೋಲಾ ತಾಲ್ಲೂಕಿನ ಹಿಲ್ಲೂರಿನಿಂದ ಸಾಗಿ ಮಾದನಗೇರಿ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯು ಅಲ್ಲಲ್ಲಿ ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿದೆ. ರಸ್ತೆಯ ಮಧ್ಯೆ ದೊಡ್ಡ ಹೊಂಡಗಳಾಗಿದ್ದು, ವಾಹನ ಸವಾರರು ಕಷ್ಟಪಟ್ಟು ಸಾಗುವಂತಾಗಿದೆ.

ಯಲ್ಲಾಪುರದಿಂದ ಕುಮಟಾ ಕಡೆಗೆ ಸಾಗುವವರಿಗೆ ಈ ರಸ್ತೆಯು ಸಮೀಪವಾಗುತ್ತದೆ. ಅಂಕೋಲಾ ಮೂಲಕ ಬರುವ ಬದಲು ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಕೇವಲ 15 ಕಿಲೋಮೀಟರ್ ದೂರದಲ್ಲಿ ಮಾದನಗೇರಿ ಕ್ರಾಸ್ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 63 ಮತ್ತು 66ರ ನಡುವೆ ಒಟ್ಟು 28 ಕಿಲೋಮೀಟರ್ ಉಳಿತಾಯವಾಗುತ್ತದೆ. ಆದರೆ, ದಾರಿಯು ಹತ್ತಿರವಾಗುತ್ತದೆ ಎಂದು ಈ ಮಾರ್ಗದಲ್ಲಿ ಪ್ರಯಾಣಿಸಿದವರು ಪಶ್ಚಾತ್ತಾಪ ಪಡುವಂಥ ಸ್ಥಿತಿಯಿದೆ ಎಂದು ಕಾರು ಚಾಲಕ ರಮೇಶ ದೂರುತ್ತಾರೆ.

‘ಇದು ಪ್ರತಿ ಮಳೆಗಾಲದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಆಂದ್ಲೆ, ಮೊಗಟಾ, ಮಾರೊಳ್ಳಿ ಮುಂತಾದ ಕಡೆ ರಸ್ತೆ ಸಂಪೂರ್ಣ ಹಾಳಾಗಿದೆ. ಡಾಂಬರು ಕಿತ್ತು ಹೋಗಿದ್ದು, ಹೊಂಡಗಳು ನಿರ್ಮಾಣವಾಗಿವೆ’ ಎನ್ನುತ್ತಾರೆ ಮೊಗಟಾದ ವಿನಾಯಕ ನಾರಾಯಣ ನಾಯ್ಕ.

‘ಈ ರಸ್ತೆಯಲ್ಲಿ ವಾಹನಗಳ ಸಂಚಾರವೂ ಹೆಚ್ಚಿದೆ. ಆದರೆ, ಹದಗೆಟ್ಟಿರುವ ಕಾರಣ ವಾಹನ ಸವಾರರು ಬೇಸರಗೊಳ್ಳುತ್ತಾರೆ. ಅಲ್ಲಲ್ಲಿ ರಸ್ತೆಯ ಮಧ್ಯೆಯೇ ನೀರು ಹರಿಯುತ್ತದೆ. ದುರಸ್ತಿ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಅನುದಾನ ಮಂಜೂರಾಗಿದೆ ಎಂದು ಹೇಳುತ್ತಾರೆಯೇ ವಿನಃ ರಸ್ತೆ ಪರಿಸ್ಥಿತಿ ಸುಧಾರಿಸಿಲ್ಲ’ ಎನ್ನುವುದು ಅವರ ದೂರು.

ಕುಮಟಾ– ಶಿರಸಿ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭವಾದರೆ, ಹಿಲ್ಲೂರು ರಸ್ತೆಯಲ್ಲಿ ವಾಹನಗಳ ಸಂಚಾರ ಮತ್ತಷ್ಟು ಹೆಚ್ಚಾಗಲಿದೆ. ಶಿರಸಿಯಿಂದ ಯಾಣ, ವಡ್ಡಿ ಮೂಲಕ ಬಂದು ಹಿಲ್ಲೂರಿನಿಂದ ಅಂಕೋಲಾ ಅಥವಾ ಕುಮಟಾದತ್ತ ಪ್ರಯಾಣಿಸುವವರೂ ಈ ರಸ್ತೆಯನ್ನು ಬಳಸಬಹುದು. ಹೆದ್ದಾರಿ ಕಾಮಗಾರಿ ಆರಂಭವಾಗುವ ಮೊದಲು ಈ ರಸ್ತೆಯನ್ನು ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಸಮಸ್ಯೆ ಉಲ್ಬಣಿಸಲಿದೆ ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು