ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಾದರಿ ಕಸಿ ನರ್ಸರಿ ಅಭಿವೃದ್ಧಿಗೆ ಪ್ರಸ್ತಾವ

₹ 1ಕೋಟಿ ವೆಚ್ಚ ಯೋಜನೆಯ ಅನುಮತಿಗೆ ಕಾಯುತ್ತಿರುವ ವಿಜ್ಞಾನಿಳು
Last Updated 9 ಆಗಸ್ಟ್ 2020, 12:56 IST
ಅಕ್ಷರ ಗಾತ್ರ

ಶಿರಸಿ: ಕಾಡುಬದನೆ ಗಿಡದ ಮೇಲೆ ಚೆರ್ರಿ ಟೊಮೆಟೊ ಬೆಳೆಸಿ ಅಧಿಕ ಇಳುವರಿ ಪಡೆದಿದ್ದ ಇಲ್ಲಿನ ತೋಟಗಾರಿಕಾ ಕಾಲೇಜು, ರೋಗರಹಿತ ತಳಿಗಳ ಕಸಿ ನರ್ಸರಿಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಸಂಬಂಧ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(ಆರ್‌.ಕೆ.ವಿ.ವೈ)ಗೆ ಸಲ್ಲಿರುವ ಯೋಜನೆಯ ಅನುಮತಿಗೆ ಕಾಯುತ್ತಿದೆ.

ಕಾಲೇಜಿನ ತರಕಾರಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಶಿವಾನಂದ ಹೊಂಗಲ್ ನೇತೃತ್ವದ ವಿಜ್ಞಾನಿಗಳ ತಂಡವು ₹ 1 ಕೋಟಿ ವೆಚ್ಚದ ವಿಸ್ತ್ರತ ಯೋಜನೆಯನ್ನು ಒಂದು ವರ್ಷದ ಹಿಂದೆ ಆರ್‌ಕೆವಿವೈ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳಿಗೆ ಸಲ್ಲಿಸಿದೆ. ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ರೈತರಿಗೆ ನಷ್ಟವಾಗದಂತೆ ರೋಗರಹಿತ ತಳಿ ಬೆಳೆಸಿ, ಗುಣಮಟ್ಟ ಹಾಗೂ ಅಧಿಕ ಇಳುವರಿ ಪಡೆಯುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

‘ಮುಂದುವರಿದ ರಾಷ್ಟ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಸಿ ತಂತ್ರಜ್ಞಾನ ಅಳವಡಿಸಿಕೊಂಡು ತರಕಾರಿ ಬೆಳೆಯಲಾಗುತ್ತದೆ. ಇಸ್ರೇಲ್ ದೇಶದಲ್ಲಿ ಶೇ 98ರಷ್ಟು ತರಕಾರಿ ಉತ್ಪಾದನೆ ಕಸಿ ಪದ್ಧತಿಯಲ್ಲೇ ನಡೆಯುತ್ತದೆ. ಆದರೆ, ಭಾರತದಲ್ಲಿ ಈ ಮಾದರಿಯ ಕೃಷಿ ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ಜನಸಂಖ್ಯೆ ಹೆಚ್ಚುತ್ತಿರುವ ನಮ್ಮ ದೇಶದಲ್ಲಿ ಲಭ್ಯ ಕೃಷಿಭೂಮಿಯಲ್ಲಿ ಬೆಳೆ ಬೆಳೆದರೂ, ಇಲ್ಲಿನ ಇಳುವರಿ ಅತ್ಯಂತ ಕಡಿಮೆಯಿದೆ. ಮಣ್ಣಿನಲ್ಲಿ ಕಡಿಮೆಯಿರುವ ಫಲವತ್ತತೆ, ಕೀಟ ಮತ್ತು ರೋಗ ಭಾದೆಯಿಂದ ರೈತರಿಗೆ ನಿರೀಕ್ಷಿತ ಮಟ್ಟದ ಇಳುವರಿ ಸಿಗುತ್ತಿಲ್ಲ. ರೋಗನಿರೋಧಕ ಶಕ್ತಿ ಹೊಂದಿರುವ ತಳಿ ಆಯ್ಕೆ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು’ ಎನ್ನುತ್ತಾರೆ ಡಾ.ಶಿವಾನಂದ ಹೊಂಗಲ್.

‘ಇಸ್ರೇಲ್ ಮಾದರಿಯಿಂದ ಪ್ರೇರಿತರಾಗಿ ನಾವು ಕಾಡು ಬದನೆಯ ಮೇಲೆ ಚೆರ್ರಿ ಟೊಮೆಟೊ ಗಿಡ ಬೆಳೆಸಿ ಅಧಿಕ ಇಳುವರಿ ಪಡೆದಿದ್ದೇವೆ. ಸಾಮಾನ್ಯ ಕಸಿ ಗಿಡಗಳಿಂತ, ಅಡಿಯ ಗಿಡ (ರೂಟ್ ಸ್ಟಾಕ್) ಸದೃಢವಾಗಿರುವ ತಳಿಗೆ ತರಕಾರಿ ಕಸಿ ಮಾಡುವುದರಿಂದ, ಯಾವುದೇ ಸಂದರ್ಭದಲ್ಲಿ ಅಧಿಕ ಬೆಳೆ ಬೆಳೆಯಬಹುದು. ಆರಂಭಿಕ ಹಂತದಲ್ಲಿ ಟೊಮೆಟೊ, ಕಲ್ಲಂಗಡಿ, ಸೌತೆಕಾಯಿ ಆಯ್ದುಕೊಂಡು ಈ ಪ್ರಯೋಗ ನಡೆಸಿದ್ದೇವೆ’ ಎಂದು ಅವರು ವಿವರಿಸಿದರು.

‘ಅಡಿಯ ಗಿಡ ಸದೃಢವಾಗಿದ್ದರೆ, ಆಳದವರೆಗೆ ಬೇರೂರಿ, ಮಣ್ಣಿನಲ್ಲಿರುವ ಪೌಷ್ಟಿಕಾಂಶವನ್ನು ಎಳೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಯೋಜನೆಗೆ ಅನುಮತಿ ದೊರೆತಲ್ಲಿ, ಸ್ಥಳೀಯವಾಗಿ ಲಭ್ಯವಿರುವ ಒಂದೇ ಕುಟುಂಬದ ಗಿಡಗಳನ್ನು ಆಯ್ಕೆ ಮಾಡಿಕೊಂಡು, ಕಸಿ ಗಿಡಗಳನ್ನು ವ್ಯಾಪಕವಾಗಿ ಬೆಳೆಸಿ, ರೈತರಿಗೆ ನೀಡಲು ಸಾಧ್ಯವಾಗುತ್ತದೆ. ಸ್ವ ಸಹಾಯ ಸಂಘಗಳು, ಯುವಜನರಿಗೆ ತರಬೇತಿ ನೀಡುವ ಮೂಲಕ ಗ್ರಾಮ ಮಟ್ಟದಲ್ಲಿ ಕಸಿ ನರ್ಸರಿ ಹೆಚ್ಚಿದರೆ, ಒಟ್ಟಾರೆ ಉತ್ಪಾದನೆಯೂ ಹೆಚ್ಚುತ್ತದೆ’ ಎಂದು ಅವರು ಯೋಜನೆಯ ಉದ್ದೇಶವನ್ನು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT