ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಶಿರಸಿಯ ಗೌರೀಶ ನಾಯ್ಕ

Last Updated 31 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ತಾಲ್ಲೂಕಿನಲ್ಲೂ ಭೀತಿ ವ್ಯಾಪಿಸಿತ್ತು. ಸೋಂಕಿತರು ಪತ್ತೆಯಾದ ಪ್ರದೇಶದ ಸಮೀಪ ಸುಳಿಯಲೂ ಜನ ಹೆದರುತ್ತಿದ್ದರು. ಅಂತಹ ದಿನಗಳಲ್ಲಿ ಸೋಂಕಿತರು ಕ್ವಾರಂಟೈನ್ ಇದ್ದ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಿ ಮೆಚ್ಚುಗೆ ಗಳಿಸಿದವರು ಶಿರಸಿಯ ನಾರಾಯಣಗುರು ನಗರದ ಗೌರೀಶ ನಾಯ್ಕ ಮತ್ತು ಅವರ ತಂಡ.

ಲಾಕ್‍ಡೌನ್ ಆರಂಭದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಪರದಾಡುವುದನ್ನು ಅವರು ಕಂಡಿದ್ದರು. ಯುವಕರೇ ಅಧಿಕವಿರುವ ತಮ್ಮ ತಂಡದ ಮೂಲಕ ಜನರಿಗೆ ಸಹಾಯ ಒದಗಿಸಲು ಮುಂದಾದರು. ಸ್ನೇಹಿತರೇ ಒಂದಷ್ಟು ಹಣ ಕೂಡಿಸಿಕೊಂಡು ದಿನಬಳಕೆಯ ವಸ್ತುಗಳ ಕಿಟ್‌ಗಳನ್ನು ಸಿದ್ಧಪಡಿಸಿದ್ದರು. ಅವುಗಳನ್ನು ನಾರಾಯಣ ಗುರು ನಗರ ವ್ಯಾಪ್ತಿಯ ಕಡುಬಡ ಕುಟುಂಬಗಳಿಗೆ ನೀಡಿದರು. ಇವರ ಕೆಲಸ ಕಂಡು ಪ್ರೇರಿತರಾದ ಜನ ತಾವೂ ಸಹಾಯಹಸ್ತ ಚಾಚಿದರು. ಬಳಿಕ ನೂರಾರು ಕಿಟ್‍ಗಳನ್ನು ವಿತರಿಸಿ, ಹಸಿವಿನಲ್ಲಿ ದಿನದೂಡಬೇಕಿದ್ದ ಜನರ ಹೊಟ್ಟೆ ತುಂಬಿಸಿದರು.

ಲಾಕ್‍ಡೌನ್ ನಿಧಾನವಾಗಿ ತೆರವುಗೊಳ್ಳುವ ಹೊತ್ತಿಗೆ ನಾರಾಯಣಗುರು ನಗರದ ಹಲವರಿಗೆ ಕೋವಿಡ್ ಖಚಿತಪಟ್ಟಿತ್ತು. ಸೋಂಕಿತರು ಕ್ವಾರಂಟೈನ್ ಇದ್ದ ಮನೆಯಲ್ಲಿ ಇರುವ ಇತರ ಸದಸ್ಯರಿಗೆ ಅಗತ್ಯ ಆಹಾರ ಸಾಮಗ್ರಿ, ಔಷಧದ ಅಗತ್ಯತೆಯನ್ನು ಪೂರೈಸಲು ಗೌರೀಶ ಮತ್ತು ತಂಡ ಮುಂದಾಯಿತು. ನಿರಂತರವಾಗಿ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ನೆರವು ಒದಗಿಸಿ ಸಮಾಜಕ್ಕೊಂದು ಸಂದೇಶ ನೀಡಿದ್ದರು.

‘ಕೋವಿಡ್ ಸೋಂಕಿಗಿಂತ ಜನರ ಮನಸ್ಥಿತಿಯೇ ಮೊದಲು ಅಪಾಯಕಾರಿ ಎನಿಸಿತ್ತು. ಎಂದಿಗೂ ಮಾನವೀಯತೆ ಮರೆಯಬೇಡ ಎಂಬ ಹಿರಿಯರ ಮಾತು ನಮ್ಮ ಸಾಮಾಜಿಕ ಕಾರ್ಯಕ್ಕೆ ಅಡಿಪಾಯ ಹಾಕಿಕೊಟ್ಟಿತ್ತು’ ಎನ್ನುತ್ತಾರೆ ಗೌರೀಶ ನಾಯ್ಕ.

ಗೌರೀಶ ನಾಯ್ಕ
ಗೌರೀಶ ನಾಯ್ಕ

ಕಲಾ ವಿಭಾಗದ ಪದವೀಧರರಾಗಿರುವ ಅವರು, ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದಾರೆ. ಬಾಲ್ಯದಿಂದಲೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಹಂಬಲವಿತ್ತು ಎನ್ನುವ ಅವರು, ನಾರಾಯಣಗುರು ನಗರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಹತ್ತಾರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ.

‘ನಾನೊಬ್ಬನೇ ಈ ಎಲ್ಲ ಕೆಲಸಗಳನ್ನು ಮಾಡಿಲ್ಲ. ಸಮಾನ ಮನಸ್ಕರ ತಂಡ ನನ್ನೊಟ್ಟಿಗೆ ಶ್ರಮಿಸಿದೆ. ಸ್ನೇಹಿತರ ಸಹಾಯವಿಲ್ಲದಿದ್ದರೆ ಇವೆಲ್ಲ ಕೆಲಸ ಸಾಧ್ಯ ಆಗುತ್ತಿರಲಿಲ್ಲ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT