ಶುಕ್ರವಾರ, ಮಾರ್ಚ್ 5, 2021
30 °C

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಸಹಾಯ ಹಸ್ತ ಚಾಚಿದ ಟಿಬೆಟನ್‌ ಕಾಲೊನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಲಾಕ್‍ಡೌನ್ ಸಮಯದಲ್ಲಿ ಟಿಬೆಟನ್‍ರು ಸ್ಥಳೀಯರಿಗೆ ಸಹಾಯದ ಹಸ್ತ ಚಾಚಿದ್ದಾರೆ. ಪಡಿತರ ಕಿಟ್ ಜೊತೆಗೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ವಿವಿಧ ಮೊನ್ಯಾಸ್ಟರಿ, ಸಂಘಗಳಿಂದ ಸುಮಾರು ₹ 2 ಕೋಟಿ ಖರ್ಚು ಮಾಡಿದ್ದಾರೆ.

ಮುಂಡಗೋಡ, ಚವಡಳ್ಳಿ, ಮಳಗಿ, ಇಂದೂರ, ಅಗಡಿ, ಕೊಪ್ಪ, ಹುನಗುಂದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾವಿರಾರು ಬಡಜನರಿಗೆ ದಿನಬಳಕೆಯ ವಸ್ತುಗಳ ಕಿಟ್ ವಿತರಿಸಿದ್ದಾರೆ. ತಾಲ್ಲೂಕು ಆಡಳಿತದವರು ಗುರುತಿಸಿದ್ದ ಬಡಜನರ ಕಾಲೊನಿ, ಪ್ರದೇಶಗಳಿಗೆ ಬೌದ್ಧ ಮುಖಂಡರು ತೆರಳಿ, ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಪ್ರತಿ ಕಿಟ್‍ನಲ್ಲಿ ಕಡಿಮೆ ಎಂದರೂ ₹ 1 ಸಾವಿರ ಮೌಲ್ಯದ ಸಾಮಗ್ರಿಗಳಿದ್ದವು.

‘ಲಾಕ್‍ಡೌನ್ ಸಮಯದಲ್ಲಿ ಊರುಗಳಿಗೆ ಹೋಗಲು ಸಾಧ್ಯವಾಗದೆ, ಅಲ್ಲಲ್ಲಿ ಉಳಿದುಕೊಂಡಿದ್ದ ಕಾರ್ಮಿಕರು, ಸಾಮಗ್ರಿ ಹೊತ್ತು ಮಾರಿ ಜೀವನ ಸಾಗಿಸುತ್ತಿದ್ದ ಅಲೆಮಾರಿ ಕುಟುಂಬಗಳು ಸೇರಿದಂತೆ ಹಲವರಿಗೆ ಕಿಟ್ ನೀಡಿದ್ದರು. ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿದ್ದ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಸಹಾಯ ಮಾಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಟಿಬೆಟನ್‍ರ ಜನಪರ ಕಾಳಜಿಯನ್ನು ಮೆಚ್ಚಲೇಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದವರು ವಕೀಲ ಗುಡ್ಡಪ್ಪ ಕಾತೂರ.
 


ಲಾಕ್‌ಡೌನ್ ಅವಧಿಯಲ್ಲಿ ಮುಂಡಗೋಡದ ಟಿಬೆಟನ್ ಕಾಲೊನಿಗಳಿಂದ ದಿನಬಳಕೆಯ ಕಿಟ್‌ಗಳನ್ನು ವಿತರಿಸುತ್ತಿರುವುದು

‘ಕೋವಿಡ್ ನಿಯಂತ್ರಣದ ಕ್ರಮವಾಗಿ ಜಿಲ್ಲೆಯಲ್ಲಿಯೇ ಮೊದಲು ಟಿಬೆಟನ್ ಕ್ಯಾಂಪ್‍ನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ಬೌದ್ಧ ಮುಖಂಡರು ಹಗಲಿರುಳು ಶ್ರಮಿಸಿದ್ದಾರೆ. ಟಿಬೆಟನ್‍ರಿಂದಲೇ ಮೊದಲು ಕೊರೊನಾ ಬರುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಹಾಗಾಗಲಿಲ್ಲ. ಜೂನ್ ತಿಂಗಳಲ್ಲಿ ಮೊದಲ ಕೋವಿಡ್ ಪ್ರಕರಣ ಕ್ಯಾಂಪ್‍ನಲ್ಲಿ ಕಂಡುಬಂದಿತ್ತು. ವಿವಿಧ ಮೊನ್ಯಾಸ್ಟರಿಗಳ ಮುಖಂಡರು ಕೋವಿಡ್ ಸಮಯದಲ್ಲಿ ಸುಮಾರು ₹ 2 ಕೋಟಿಗಳಷ್ಟು ಸಹಾಯ ಮಾಡಿದ್ದಾರೆ. ಇದರಲ್ಲಿ ಬಡಕುಟುಂಬಗಳಿಗೆ ಪಡಿತರ ಕಿಟ್ ನೀಡುವುದೂ ಸೇರಿದೆ’ ಎಂದು ಡೊಗುಲಿಂಗ್ ಸೆಟ್ಲ್‌ಮೆಂಟ್ ಕಚೇರಿಯ ಚೇರ್‌ಮ್ಯಾನ್ ಲಾಖ್ಪಾ ಸಿರಿಂಗ್ ಹೇಳಿದರು.

‘ಆರು ತಿಂಗಳ ಅವಧಿಯಲ್ಲಿ ಒಟ್ಟು 802 ಟಿಬೆಟನ್ ಜನರಿಗೆ ಕೋವಿಡ್ ಸೋಂಕು ಖಚಿತಗೊಂಡಿತ್ತು. ಅದರಲ್ಲಿ 10 ಜನರು ಮೃತಪಟ್ಟಿದ್ದು, ಉಳಿದವರು ಗುಣಮುಖರಾಗಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಸಿಬ್ಬಂದಿ, ಬೌದ್ಧ ಮುಖಂಡರ ಸೇವೆ ಮರೆಯುವಂತಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು