ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ರ‍್ಯಾಫ್ಟಿಂಗ್‌: ನಿಯಮ ಪಾಲನೆ ಕಡ್ಡಾಯ

ದಾಂಡೇಲಿಯಲ್ಲಿ ಜಲ ಸಾಹಸ ಕ್ರೀಡೆ ಸ್ಥಗಿತಗೊಳಿಸಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
Last Updated 3 ಮೇ 2022, 13:55 IST
ಅಕ್ಷರ ಗಾತ್ರ

ಕಾರವಾರ: ‘ಜೊಯಿಡಾ– ದಾಂಡೇಲಿಯ ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡೆಗಳನ್ನು ಸ್ಥಗಿತಗೊಳಿಸಿಲ್ಲ. ರ‌್ಯಾಫ್ಟಿಂಗ್ ಆಯೋಜಕರು ಅನುಮತಿ ಪಡೆದುಕೊಂಡು ಮುಂದುವರಿಯಬಹುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವಿಚಾರವಾಗಿ ತಪ್ಪು ಮಾಹಿತಿ ರವಾನಿಸಲಾಗುತ್ತಿದೆ. ನಿಯಮ ಪ್ರಕಾರ ಅನುಮತಿ ಪಡೆದಿರುವ ‌ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್‌ ರ‌್ಯಾಫ್ಟಿಂಗ್ ಆಯೋಜಿಸುತ್ತಿದೆ. ಖಾಸಗಿ ಆಯೋಜಕರೂ ಎಷ್ಟು ಬೇಗ ದಾಖಲೆಗಳನ್ನು ಕೊಡುತ್ತಾರೋ ಅಷ್ಟು ಬೇಗ ಅನುಮತಿ ನೀಡಲಾಗುತ್ತದೆ’ ಎಂದರು.

‘ಏ.28ಕ್ಕೆ ಹಮ್ಮಿಕೊಂಡ ಸಭೆಯಲ್ಲೂ ಈ ವಿಚಾರ ತಿಳಿಸಲಾಗಿದೆ. ಆದರೆ, ಆಯೋಜಕರು ಈವರೆಗೆ ಮುಂದೆ ಬಂದಿಲ್ಲ. ಜಲ ಸಾಹಸ ಕ್ರೀಡೆಗಳನ್ನು ಒಂದೇ ವ್ಯವಸ್ಥೆಯಡಿ ತರುವಂತೆ ಈ ಹಿಂದೆ ಕೆಲವು ಆಯೋಜಕರಿಂದಲೇ ಮನವಿ ಬಂದಿತ್ತು. ಆದರೆ, ಅದನ್ನು ಜಾರಿ ಮಾಡಲು ಮುಂದಾಗುವ ಹಂತದಲ್ಲಿ ಆಕ್ಷೇಪಗಳು ಬರುತ್ತಿವೆ’ ಎಂದು ಹೇಳಿದರು.

‘ಈ ಹಿಂದೆ ನಿಯಮಗಳ ಉಲ್ಲಂಘನೆ ಮಾಡಿದವರು, ಕನಿಷ್ಠ ದಾಖಲೆಗಳು ಇಲ್ಲದ ಕೆಲವು ಆಯೋಜಕರು ಏಕರೂಪದ ವ್ಯವಸ್ಥೆ ಜಾರಿಯಾಗುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಜಿಲ್ಲಾಡಳಿತ ಅವಕಾಶ ನೀಡುವುದಿಲ್ಲ. ಎಲ್ಲರೂ ಒಂದೇ ವ್ಯವಸ್ಥೆಯಡಿ ಬರಬೇಕು’ ಎಂದು ತಿಳಿಸಿದರು.

‘ನಿಯಮಗಳ ಪಾಲನೆ ಪರಿಶೀಲಿಸಲು ಮತ್ತು ಏಕರೂಪದ ವ್ಯವಸ್ಥೆ ಪಾಲನೆಯನ್ನು ಖಾತ್ರಿ ಪಡಿಸಲು ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸೇರಿದಂತೆ ಮೂರು ಸಮಿತಿಗಳನ್ನು ರಚಿಸಲು ಉದ್ದೇಶಿಲಾಗಿದೆ. ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ನಿಯಮಗಳ ಜಾರಿ ಸಮಿತಿ, ತಾಂತ್ರಿಕ ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗುವುದು’ ಎಂದರು.

‘ಏಕ ಗವಾಕ್ಷಿ’ ಶಿಬಿರ:‘ಕಾಳಿ ನದಿಯಲ್ಲಿ ರ‌್ಯ‌ಾಫ್ಟಿಂಗ್ ಸೇರಿದಂತೆ ಜಲ ಸಾಹಸ ಕ್ರೀಡೆಗಳ ಆಯೋಜಕರಿಗೆ ಅನುಮತಿ ಪಡೆಯಲು ಸಹಕಾರಿಯಾಗುವಂತೆ, ಮೇ 4 ಮತ್ತು 5ರಂದು ಜೊಯಿಡಾದ ಅವೆಡಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಏಕ ಗವಾಕ್ಷಿ ಶಿಬಿರ ಮಾಡಲಾಗುತ್ತದೆ. ಒಂದುವೇಳೆ, ಆಯೋಜಕರು ಅಲ್ಲಿ ದಾಖಲೆಗಳನ್ನು ಸಲ್ಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಅನುಮತಿ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಯಾವುದೇ ಕಾರಣಕ್ಕೂ ಪ್ರವಾಸಿಗರ ಜೀವಕ್ಕೆ ಅಪಾಯ ತರುವಂತ ಜಲ ಸಾಹಸ ಚಟುವಟಿಕೆಗೆ ಅವಕಾಶವಿಲ್ಲ. ಜಲ ಸಾಹಸ ಚಟುವಟಿಕೆಗಳು ಇರುವ ದೇಶದ ಎಲ್ಲ ತಾಣಗಳಲ್ಲೂ ನಿರ್ದಿಷ್ಟ ನಿಯಮಗಳಿವೆ. ಕೊಡಗು, ಉತ್ತರಾಖಂಡದ ಮಾದರಿಗಳನ್ನು ಇಟ್ಟುಕೊಂಡು ಉತ್ತರ ಕನ್ನಡಕ್ಕೆ ಕರಡು ನಿಯಮ ರೂಪಿಸಲಾಗಿದೆ. ದಾಂಡೇಲಿ ಉನ್ನತ ಪ್ರವಾಸಿ ತಾಣವಾಗಿ ಬೆಳೆಯಬೇಕು. ಏನಾದರೂ ಹಾನಿಯಾದರೆ ಶೋಭೆ ತರುವುದಿಲ್ಲ’ ಎಂದು ಹೇಳಿದರು.

‘ಎಂಟು ಪ್ರಕರಣಗಳು’:‘2013ರ ನಂತರ ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡೆಗೆ ಸಂಬಂಧಿಸಿ ಎಂಟು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಒಂದು ರ‌್ಯಾಫ್ಟ್ ಮಗುಚಿ ಒಬ್ಬರ ಸಾವು ಸೇರಿದಂತೆ ನಾಲ್ಕು ಯು.ಡಿ.ಆರ್ ಹಾಗೂ ಇತರ ನಾಲ್ಕು ಪ್ರಕರಣಗಳಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಡಾ.ಸುಮನ್ ಪೆನ್ನೇಕರ್ ತಿಳಿಸಿದರು.

‘ಈಚೆಗೆ ರ‌್ಯಾಫ್ಟಿಂಗ್ ದೋಣಿ ಮಗುಚಿದ ಪ್ರಕರಣದಲ್ಲಿ ಮಿತಿ ಮೀರಿ ಜನರನ್ನು ಕೂರಿಸಲಾಗಿತ್ತು. ನಿಗದಿತ ವಯೋಮಿತಿಗೂ ಕಡಿಮೆ ವಯಸ್ಸಿನ ಮಕ್ಕಳನ್ನೂ ರ‌್ಯಾಫ್ಟಿಂಗ್‌ನಲ್ಲಿ ಕರೆದುಕೊಂಡು ಹೋಗಲಾಗಿತ್ತ‌ು. ಆಯೋಜಕರು ವಿಮೆ ಮಾಡಿಸಿಲ್ಲ. ಈ ರೀತಿ ಹಲವು ನಿಯಮಗಳ ಉಲ್ಲಂಘನೆ ಕಂಡುಬಂದಿದೆ’ ಎಂದು ತಿಳಿಸಿದರು.

***

ರ‌್ಯಾಫ್ಟಿಂಗ್ ನಡೆಯುವ ಸ್ಥಳಕ್ಕೆ ಭೇಟಿ ನೀಡಿದಾಗ ಹಲವು ನಿಯಮಗಳ ಉಲ್ಲಂಘನೆ ಕಂಡುಬಂದಿದೆ. ಬೇಜವ್ದಾರಿಯಿಂದ, ಅಸುರಕ್ಷಿತವಾಗಿ ನಡೆಸಲು ಅವಕಾಶವಿಲ್ಲ.
– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT