ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ರಾಜಸ್ತಾನಿ ಬಾಲಕನಿಗೆ ಕನ್ನಡದಲ್ಲಿ 112 ಅಂಕ

Last Updated 11 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಕಾರವಾರ: ನಗರದ ಹಬ್ಬುವಾಡದಲ್ಲಿ ತಂದೆಯ ಜೊತೆ ಪಾನಿಪುರಿ ಮಾರಾಟ ಮಾಡುತ್ತ ವಿದ್ಯಾಭ್ಯಾಸ ಮಾಡಿದ ರಾಜಸ್ತಾನಿ ಬಾಲಕ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 75ರಷ್ಟು ಅಂಕ ಗಳಿಸಿದ್ದಾನೆ. ಕನ್ನಡ ಭಾಷೆಯಲ್ಲಿ 125ಕ್ಕೆ 112 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾನೆ.

ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಲಲಿತ್‌ ಕುಮಾರ್ ಎಚ್.ಗಾಂಚಿ ಈ ಸಾಧನೆ ಮಾಡಿದವನು. ಸಂಜೆ ಶಾಲಾ ತರಗತಿಗಳು ಮುಗಿದ ಬಳಿಕ ತಂದೆ ಹಕ್ಮಾರಾಮ್ ಅವರ ವ್ಯವಹಾರದಲ್ಲಿ ಆತ ನೆರವಾಗುತ್ತಿದ್ದ.

‘ತಂದೆ ಜೊತೆ ಅಂಗಡಿಯಲ್ಲಿ ರಾತ್ರಿ 10ರವರೆಗೆ ಇದ್ದು, ಗ್ರಾಹಕರಿಗೆ ಪಾನಿಪುರಿ, ಸಮೋಸಾ, ವಡಾದಂತಹ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದೆ. ರಾತ್ರಿ 10ರಿಂದ ಒಂದು ಗಂಟೆಯವರೆಗೂ ಓದುತ್ತಿದ್ದೆ. ಬೆಳಿಗ್ಗೆ ಮತ್ತೆ 4.30ಕ್ಕೆ ಎದ್ದು ಅಧ್ಯಯನ ಮಾಡುತ್ತಿದ್ದೆ. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ’ ಎಂದು ಲಲಿತ್‌ ಕುಮಾರ್ ಹೇಳುತ್ತಾನೆ.

ಮೂಲತಃ ರಾಜಸ್ತಾನದ ಸರೋಯಿ ಊರಿನ ಹಕ್ಮಾರಾಮ್ ಕುಟುಂಬವು, ಉದ್ಯೋಗದ ನಿಮಿತ್ತ ಆಂಧ್ರಪ್ರದೇಶಕ್ಕೆ ವಲಸೆ ಹೋಗಿತ್ತು. ಅಲ್ಲಿನ ಶಾಲೆಗೆ ಸೇರಿದ್ದ ಲಲಿತ್‌ ಕುಮಾರ್ ತೆಲುಗು ಮಾಧ್ಯಮದಲ್ಲಿ ಮೂರನೇ ತರಗತಿಯವರೆಗೂ ಓದಿದ್ದ. ಬಳಿಕ ಹಕ್ಮಾರಾಮ್ ಕಾರವಾರಕ್ಕೆ ಬಂದರು. ನಂತರ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ಪಡೆದುಕೊಂಡು ವಿದ್ಯಾಭ್ಯಾಸ ಮುಂದುವರಿಸಿದ್ದ. ಈಗ ಆತ ಸ್ಫುಟವಾಗಿ, ನಿರರ್ಗಳವಾಗಿ ಕನ್ನಡ ಮಾತನಾಡಬಲ್ಲ.

ಆತನ ಒಬ್ಬಳು ಸಹೋದರಿ ಎಸ್ಸೆಸ್ಸೆಲ್ಸಿ ಪರೀಕ್ಸೆಯಲ್ಲಿ ಶೇ 71.48ರಷ್ಟು ಅಂಕ ಪಡೆದಿದ್ದಾಳೆ. ಕನ್ನಡದಲ್ಲಿ 107 ಅಂಕ ಗಳಿಸಿದ್ದು, ಹಿಂದಿಯಲ್ಲಿ 100ಕ್ಕೆ 100ರ ಸಾಧನೆ ಮಾಡಿದ್ದಾಳೆ. ಮತ್ತೊಬ್ಬಳು ಸಹೋದರಿ ಜಸ್ನಾ ಒಟ್ಟು ಶೇ 63ರಷ್ಟು ಅಂಕ ಪಡೆದಿದ್ದು, ಕನ್ನಡದಲ್ಲಿ 85 ಅಂಕ ಗಳಿಸಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT