ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ನಂತರದ ಜೀವನ ಅತಂತ್ರ

ಅಂಕೋಲಾ: ನೆರೆಯಲ್ಲಿ ಮುಳುಗೆದ್ದ ನದಿತೀರದ ಜನರಿಗೆ ಸಾಲು ಸಾಲು ಸವಾಲು
Last Updated 9 ಆಗಸ್ಟ್ 2021, 15:25 IST
ಅಕ್ಷರ ಗಾತ್ರ

ಅಂಕೋಲಾ: ಜುಲೈ 23ರಂದು ಗಂಗಾವಳಿ ನದಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ, ತಾಲ್ಲೂಕಿನ ನದಿತೀರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಗಂಗಾವಳಿ ನದಿ ಈ ಬಾರಿ ಒಂದೇ ದಿನ ಏಕಾಏಕಿ ಅಬ್ಬರಿಸಿದರೂ ಪ್ರವಾಹ ನಂತರದ ಪರಿಸ್ಥಿತಿ ಬಹಳ ಬಿಗಡಾಯಿಸಿದೆ. ಹೊಸ ಬದುಕು ಕಟ್ಟಿಕೊಳ್ಳುವುದು ಸವಾಲಾಗಿದೆ.

ತಾಲ್ಲೂಕಿನಲ್ಲಿ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 40ಕ್ಕೂ ಅಧಿಕ ಗ್ರಾಮಗಳು ತೊಂದರೆಯಲ್ಲಿವೆ. 2,376 ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹದ ನಂತರ ಬಿಸಿಲು ಕಾಣಿಸಿಕೊಂಡಿದ್ದರಿಂದ, ಮನೆ ಗೋಡೆಗಳಲ್ಲಿನ ಬಿರುಕು ಹೆಚ್ಚುತ್ತಿದೆ. ಶಿರೂರು, ಕೂರ್ವೆ, ಕೊಡ್ಸಣಿ, ಗ್ರಾಮಗಳಲ್ಲಿ ಹೂಳಿನ ಸಮಸ್ಯೆ ಅಧಿಕವಾಗಿದೆ. ಕಲುಷಿತ ಹೂಳಿನಿಂದ ನಂಜು, ತುರಿಕೆ ಸಮಸ್ಯೆ ಸಾಮಾನ್ಯವಾಗಿದೆ. ಭತ್ತದ ಸಸಿಗಳು ನೀರುಪಾಲಾದ ಕಾರಣ, ಎತ್ತರದ ಪ್ರದೇಶದಿಂದ ಸಸಿಗಳನ್ನು ತಂದು ಮತ್ತೆ ನಾಟಿ ಮಾಡಲಾಗುತ್ತಿದೆ.

ತಗ್ಗುಪ್ರದೇಶದ ಬಾವಿಗಳಿಗೆ ಪ್ರವಾಹದ ಕೆಸರು ಮಿಶ್ರಿತ ನೀರು ಸೇರಿಕೊಂಡಿದೆ. ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ನದಿಯ ನೀರು ಏಕಾಏಕಿ ಹೆಚ್ಚುತ್ತಿದ್ದಾಗ ಜನ, ಭಯದಿಂದ ಉಟ್ಟ ಬಟ್ಟೆಯಲ್ಲೇ ಕಾಳಜಿ ಕೇಂದ್ರ ಸೇರಿದ್ದರು. ಮನೆಯಲ್ಲಿದ್ದ ಬಟ್ಟೆ, ದವಸ ಧಾನ್ಯಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಸರ್ಕಾರಿ ಸೌಲಭ್ಯ ಪಡೆಯಲು ಅವಶ್ಯಕವಾದ ದಾಖಲೆಗಳು ಮತ್ತು ವಿದ್ಯಾರ್ಥಿಗಳ ಸಮವಸ್ತ್ರವೂ ನೀರುಪಾಲಾಗಿವೆ. ಶಾಲೆಗಳಲ್ಲಿದ್ದನ ದಾಖಲೆಗಳು ನಾಶವಾಗಿವೆ.

ಪ್ರವಾಹದ ಪರಿಸ್ಥಿತಿ ಅವಲೋಕಿಸಲು ಬರುವ ರಾಜಕೀಯ ಮುಖಂಡರು ಮತ್ತೆ ದಾನಿಗಳಿಗೆ ಉಡಲು ಬಟ್ಟೆಯನ್ನು ನೀಡಿ ಎಂದು ಜನ ಬೇಡಿಕೆ ಇಡುತ್ತಿದ್ದಾರೆ. ಶಿರೂರಿನಲ್ಲಿ ದೋಣಿ ಮಗುಚಿ ಇಬ್ಬರು ಮೃತಪಟ್ಟಿದ್ದು, ಶೋಕದ ಛಾಯೆ ತುಂಬಿಕೊಂಡಿದೆ. ಅಲ್ಲಿ ಸೋಮವಾರದವರೆಗೂ ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು.

2019ರ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಇದುವರೆಗೆ ಸಮರ್ಪಕ ಪರಿಹಾರ ವಿತರಣೆಯಾಗಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಪರಿಹಾರ ಕೊಡಿಸಿ ಎಂದು ಜನರು ಅವಲತ್ತುಕೊಳ್ಳುತ್ತಿದ್ದಾರೆ. ತಾಲ್ಲೂಕಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಸ್ಥಿತಿಯ ಅವಲೋಕಿಸಿದ್ದಾರೆ. ವಿವಿಧ ಅಧಿಕಾರಿಗಳೂ ಪರಿಶೀಲಿಸಿದ್ದಾರೆ. ಸರ್ಕಾರದಿಂದ ಪರಿಹಾರದ ಕುರಿತು ಅಧಿಕೃತ ಆದೇಶ ಇದುವರೆಗೂ ಬಂದಿಲ್ಲ. ಹಾಗಾಗಿ ಅಧಿಕಾರಿಗಳ ಮತ್ತು ಜನರ ಗೊಂದಲ ಮುಂದುವರಿದಿದೆ.

‘‍ಪರಿಹಾರ ಸಿಗಲಿ’:

‘2019ರಲ್ಲಿ ಶಿರೂರು ಗ್ರಾಮದ 58 ಮನೆಗಳು ಭಾಗಶಃ ಹಾನಿಗೊಂಡಿದ್ದು, ಕೇವಲ 20 ಮನೆಗಳಿಗೆ ಪರಿಹಾರ ದೊರಕಿತ್ತು. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು ಪ್ರಯೋಜನವಾಗಲಿಲ್ಲ. ನಾವೇ ಮನೆಯ ಗೋಡೆಯನ್ನು ದುರಸ್ತಿಗೊಳಿಸಿದ್ದೆವು. ಈಗ ಮತ್ತೆ ಹಾನಿಗೊಂಡಿದೆ. ಈ ಬಾರಿಯಾದರೂ ಪರಿಹಾರ ಸಿಗುವಂತಾಗಬೇಕು’ ಎಂದು ಹಿರಿಯ ಗ್ರಾಮಸ್ಥ ದೇವು ಪುರ್ಸು ಗೌಡ ಅಳಲು ತೋಡಿಕೊಂಡರು.

‘ಪರಿಹಾರ ಪ್ರಗತಿಯಲ್ಲಿ’:

‘ನೀರು ನುಗ್ಗಿದ 1,726 ಕುಟುಂಬಗಳಿಗೆ ತಲಾ ₹ 3,800 ಪರಿಹಾರ ನೀಡಲಾಗಿದೆ. 551 ಕುಟುಂಬಗಳಿಗೆ ಎರಡು ದಿನಗಳಲ್ಲಿ ಪರಿಹಾರ ನೀಡಲಾಗುವುದು. ಒಟ್ಟು ₹ 65.35 ಲಕ್ಷ ಪರಿಹಾರ ಸಂತ್ರಸ್ತರ ಖಾತೆಗೆ ಜಮಾ ಮಾಡಲಾಗಿದೆ’ ಎಂದು ಶಿರಸ್ತೇದಾರ ಅಮರ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT