ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ಜೀವಂತಿಕೆ ಕಾಪಿಡುವ ಕಾವ್ಯ’

ನಾಗರಾಜ ಹೆಗಡೆ ಅಪಗಾಲ ಅವರ ‘ಸಣ್ಣ ಬೆಂಕಿ’ ಕವನ ಸಂಕಲನ ಬಿಡುಗಡೆ
Last Updated 28 ಫೆಬ್ರುವರಿ 2021, 16:43 IST
ಅಕ್ಷರ ಗಾತ್ರ

ಹೊನ್ನಾವರ: ಕವಿಯ ಸೌಜನ್ಯ ಕಾವ್ಯದ ಸ್ವರೂಪವಾದರೆ, ಅಂಥ ಕಾವ್ಯ ಓದುಗರ ಹೃದಯವನ್ನು ಹದ ಮಾಡಿ ಅದು ಪ್ರೀತಿಸುವಂತೆ ಪ್ರೇರೇಪಣೆ ನೀಡುತ್ತದೆ ಎಂದು ಕಥೆಗಾರ ಡಾ.ಶ್ರೀಧರ ಬಳಗಾರ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ ಹಾಗೂ ಅಭಿನವ ಪ್ರಕಾಶನ ಇವುಗಳ ಸಹಯೋಗದಲ್ಲಿ ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಪ್ರೊ.ನಾಗರಾಜ ಹೆಗಡೆ ಅಪಗಾಲ ಅವರು ಬರೆದ ‘ಸಣ್ಣ ಬೆಂಕಿ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಕಾವ್ಯ ಹೃದಯದಿಂದ ಹೃದಯಕ್ಕೆ ಪ್ರೀತಿಯನ್ನು ಹಂಚುವ ಮೂಲಕ ಸಮಾಜದ ಜೀವಂತಿಕೆಯ ಚೈತನ್ಯವನ್ನು ಕಾಪಿಡುವ ಕೆಲಸ ಮಾಡುತ್ತದೆ. ಕವಿ ಭಾಷಣಕಾರ, ನೀತಿ ನಿಯಮಗಳ ನಿರೂಪಕ ಅಥವಾ ದೇಶವನ್ನು ಘೋಷಣೆಗಳಿಂದಲೇ ಉದ್ಧಾರ ಮಾಡುವ ನಾಯಕನಲ್ಲ. ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸಿ ಅದನ್ನು ಹದಗೊಳಿಸಿ ಕಾವ್ಯದಲ್ಲಿ ವ್ಯಕ್ತಪಡಿಸುವುದು ಕವಿಯ ಕೆಲಸ. ಸ್ಥಳೀಯತೆ ಅನುಭವದ ದ್ರವ್ಯವಾದಾಗ ಕಾವ್ಯ ಹೆಚ್ಚು ಆಪ್ತವಾಗುತ್ತದೆ. ಇಂಥ ಆಪ್ತ ರೂಪಕಗಳು ಸಣ್ಣ ಬೆಂಕಿ ಕೃತಿಯ ಕವನದ ಸಾಲುಗಳಲ್ಲಿವೆ ಎಂದು ಅವರು ಹೇಳಿದರು. ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಕೃತಿಯ ಕುರಿತು ಮಾತನಾಡಿ, ಕಾರುಣ್ಯ ಇಲ್ಲದವನಿಗೆ ಕಾವ್ಯ ಒಲಿಯಲಾರದು. ಕವಿತೆ ಅರ್ಥವಾಗಲು ಅದಕ್ಕೆ ಮೌನದ ಓದು ಬೇಕು. ಹಳೆಯ ರೂಪಕಗಳಿಗೆ ಹೊಸತನ ನೀಡಿದಾಗ ಅಥವಾ ಹೊಸ ರೂಪಕಗಳನ್ನು ಸೃಷ್ಟಿಸಿದಾಗ
ಅದೊಂದು ಒಳ್ಳೆಯ ಕವಿತೆಯಾಗುತ್ತದೆ. ನಾಗರಾಜ ಹೆಗಡೆ ಅವರ ಕವನಗಳಲ್ಲಿ ಕ್ಲೀಷೆ ಎನಿಸಿದ್ದ ಹಾವು- ಕೋಲು ರೂಪಕ ಕೂಡ ಹೊಸ ಅರ್ಥ ಪಡೆದುಕೊಂಡಿವೆ. ಪ್ರತಿಯೊಂದು ಕವಿತೆಯೂ ಜೀವನ ದರ್ಶನದ ಕಡೆಗಿನ ಒಂದೊಂದು ಪ್ರಯತ್ನದಂತಿದೆ ಎಂದು ಹೇಳಿದರು. ಸಾಹಿತಿ ಡಾ.ಪಿ. ಚಂದ್ರಿಕಾ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿದರು.
ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ, ಡಾ. ಚೈತ್ರ ಹೆಗಡೆ ಕಣ್ಣಿ, ಡಾ.ಸಂಧ್ಯಾ ಹೆಗಡೆ, ಪ್ರಶಾಂತ ಮೂಡಲಮನೆ ಕಾವ್ಯಾನುಸಂಧಾನ ನಡೆಸಿದರು.

ಶಾಂತಿ ನಾಯಕ ಅವರ ಕೆಸು:ಪುರಾಣ ಮತ್ತು ವಾಸ್ತವ ಹಾಗೂ ಡಾ.ಶ್ರೀಧರ ಬಳಗಾರ ಅವರು ಬರೆದ ಮಾಸ್ತಿ ಕಾದಂಬರಿ ಪುರಸ್ಕೃತ ಮೃಗಶಿರ ಕಾದಂಬರಿ ಕೃತಿಗಳ ಕುರಿತ ಸಂವಾದ ನಡೆಯಿತು. ಪ್ರಶಾಂತ ಮೂಡಲಮನೆ ಸ್ವಾಗತಿಸಿದರು. ಶಂಕರ ಗೌಡ ನಿರೂಪಿಸಿದರು. ಪ್ರೊ. ನಾಗರಾಜ ಹೆಗಡೆ ಅಪಗಾಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT