ಗುರುವಾರ , ಜೂನ್ 30, 2022
25 °C
ಜಿಲ್ಲೆಯಲ್ಲಿ ಕೋವಿಡ್ ಸೋಂಕು ದೃಢಪಡುವ ಪ್ರಮಾಣ ಇಳಿಮುಖ

ಕಾರವಾರ: 10 ದಿನಗಳಲ್ಲಿ 77 ಮಂದಿ ಮರಣ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಜನರ ಕಂಗೆಡಿಸಿದ್ದ ಕೋವಿಡ್ ಎರಡನೇ ಅಲೆಯ ಪ್ರಭಾವವು, ಮೂರು ದಿನಗಳಿಂದ ಸ್ವಲ್ಪ ಇಳಿಮುಖವಾಗುತ್ತಿದೆ. ಶೇ 46ರಷ್ಟಿದ್ದ ಸೋಂಕು ದೃಢ ಪಡುವ ಪ್ರಮಾಣವು, ಮಂಗಳವಾರ ಶೇ 8ಕ್ಕೆ ಇಳಿಕೆಯಾಗಿದೆ. ಆದರೆ, ಮರಣ ಪ್ರಮಾಣ ಇನ್ನಷ್ಟು ಕಡಿಮೆಯಾಗಬೇಕಿದೆ.

ಕಳೆದ 10 ದಿನಗಳಲ್ಲಿ (ಮೇ 30ರಿಂದ ಜೂನ್ 8ರವರೆಗೆ) ಜಿಲ್ಲೆಯಲ್ಲಿ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆಯು ಈ ಅವಧಿಯಲ್ಲಿ ಸೋಂಕಿತರಾದವರ ಸಂಖ್ಯೆಗಿಂತ ಹೆಚ್ಚಿದೆ. ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದರೆ, ಆರು ಸಾವಿರಕ್ಕೂ ಹೆಚ್ಚು ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಮೇ 30ರಂದು ಜಿಲ್ಲೆಯಲ್ಲಿ 536, ಮೇ 31ರಂದು 606 ಮಂದಿಗೆ ಸೋಂಕು ದೃಢಪಟ್ಟಿತ್ತು. ಆದರೆ, ಜೂನ್ 8ರಂದು ಈ ಸಂಖ್ಯೆಯು 175ಕ್ಕೆ ಇಳಿದಿದೆ. ಅಂತೆಯೇ, ಗುಣಮುಖರಾದ 1,040 ಜನ ಸೋಂಕಿತರು ಮೇ 30ರಂದು ಬಿಡುಗಡೆಯಾಗಿದ್ದರು. ಜೂನ್ 8ರಂದು 537 ಜನ ಚೇತರಿಸಿಕೊಂಡಿದ್ದರು.

ಕೋವಿಡ್‌ನ ಎರಡನೇ ಅಲೆಯಿಂದ ಸೋಂಕಿತರ ಪ್ರಮಾಣ ಏಕಾಏಕಿ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣಲು ಆರಂಭಿಸಿದ್ದು ಜಿಲ್ಲಾಡಳಿತ ಹಾಗೂ ಸಾರ್ವಜನಿಕರನ್ನು ಕಂಗೆಡಿಸಿತ್ತು. ಲಾಕ್‌ಡೌನ್, ನಿರ್ಬಂಧಿತ ಪ್ರದೇಶಗಳು, ಸೂಕ್ಷ್ಮ ನಿರ್ಬಂಧಿತ ಪ್ರದೇಶಗಳು ಮುಂತಾದ ಹಲವು ಕ್ರಮಗಳನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದರಿಂದ ಜನರ ಅನಗತ್ಯ ಸಂಚಾರವು ಬಹುತೇಕ ನಿಯಂತ್ರಣಕ್ಕೆ ಬಂತು. ಹೀಗಾಗಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಸಾಧ್ಯವಾಯಿತು ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಮಾರುಕಟ್ಟೆ ತೆರೆಯಲು ಅವಕಾಶ ನೀಡಿದ ಅವಧಿಯನ್ನು ಹೊರತಾಗಿ ಬೇರೆ ಸಂದರ್ಭಗಳಲ್ಲಿ ಜನ ಮನೆಯಿಂದ ಹೊರ ಬರುವುದನ್ನು ಕಡಿಮೆ ಮಾಡಿದ್ದಾರೆ. ಒಂದುವೇಳೆ, ಅನಿವಾರ್ಯವಾಗಿ ಬಂದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಅನುಕೂಲ ಎನ್ನುತ್ತಾರೆ ಕಾರವಾರದ ಕೆ.ಎಚ್.ಬಿ. ಕಾಲೊನಿ ನಿವಾಸಿ ರಮೇಶ ನಾಯ್ಕ.

ಮೂರನೇ ಅಲೆ; ಇರಲಿ ಎಚ್ಚರಿಕೆ:

‘ಲಾಕ್‌ಡೌನ್ ನಿಯಮಗಳು ಹಾಗೂ ಜನರಲ್ಲಿ ಜಾಗೃತಿ ಮೂಡಿದ್ದು ಸಹಕಾರಿಯಾಗಿವೆ. ಗ್ರಾಮೀಣ ಭಾಗದಲ್ಲೂ ಹಲವರು ಮೃತಪಟ್ಟಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಇದರಿಂದ ಅನಗತ್ಯವಾಗಿ ಹೊರಗೆ ಬರಲು ಹಿಂದೇಟು ಹಾಕಿದ್ದಾರೆ. ಸೋಂಕಿತರ ಪ್ರಮಾಣದಲ್ಲಿ ಕಡಿಮೆಯಾಗಲು ಇದೂ ಕಾರಣವಾಗಿದೆ’ ಎನ್ನುತ್ತಾರೆ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ.

‘ಎರಡನೇ ಅಲೆ ಗಂಭೀರ ಹಂತಕ್ಕೆ ತಲುಪುವ ಮೊದಲು ಜನರು, ಕೋವಿಡ್ ಲಕ್ಷಣಗಳಿದ್ದರೂ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಇದರ ಪರಿಣಾಮವೇನು ಎಂಬುದನ್ನು ಜನ ಈಗ ಅರಿತುಕೊಂಡಿದ್ದಾರೆ. ಆರಂಭದಲ್ಲೇ ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಹೆಚ್ಚಿದೆ’ ಎಂದರು.

‘ಎರಡನೇ ಅಲೆಯಲ್ಲೇ ಇಷ್ಟೊಂದು ಸಾವು, ನೋವುಗಳನ್ನು ಅನುಭವಿಸಿದ್ದೇವೆ. ಮೂರನೇ ಅಲೆಯು ಮತ್ತಷ್ಟು ತೀವ್ರ ಸ್ವರೂಪದಲ್ಲಿ ಇರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ, ಸಾರ್ವಜನಿಕರು ಈಗಿನಿಂದಲೇ ಎಚ್ಚರಿಕೆ ವಹಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು, ಸ್ಯಾನಿಟೈಸರ್ ಬಳಕೆಯನ್ನು ಮುಂದುರಿಸಬೇಕು. ರೋಗ ಲಕ್ಷಣವಿದ್ದರೆ ತಕ್ಷಣವೇ ವೈದ್ಯರನ್ನು ಕಾಣಬೇಕು’ ಎಂದು ಅವರು ಹೇಳಿದರು.

–––––––––––

ಕೋವಿಡ್: ಅಂಕಿ ಅಂಶ (ಮೇ 30ರಿಂದ ಜೂನ್ 8)

4,146

ಸೋಂಕಿತರು

6,697

ಗುಣಮುಖರಾದವರು

77

ಮೃತಪಟ್ಟವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು