ಸೋಮವಾರ, ಆಗಸ್ಟ್ 15, 2022
24 °C
ಭಾರಿ ಪ್ರಮಾಣದಲ್ಲಿ ಹೂಳು ತುಂಬಿಕೊಂಡು ದೋಣಿಗಳ ಸಂಚಾರಕ್ಕೆ ಭಾರಿ ಅಡಚಣೆ

ಮೀನುಗಾರರಿಗೆ ದುಃಸ್ವಪ್ನ ಶರಾವತಿ ಅಳಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಹೊನ್ನಾವರದ ಶರಾವತಿ ಅಳಿವೆಯಲ್ಲಿ ಹೂಳು ತುಂಬಿಕೊಂಡು ಮೀನುಗಾರರ ಪಾಲಿಗೆ ಭಾರಿ ಸಮಸ್ಯೆ ತಂದಿಡುವ ಪ್ರದೇಶವಾಗಿದೆ. ದೋಣಿಗಳು ಇಲ್ಲಿ ಹೂಳಿನಲ್ಲಿ ಸಿಲುಕಿಕೊಳ್ಳುವ ಆತಂಕದಲ್ಲೇ ಮೀನುಗಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾಗಿದೆ.

ಇದಕ್ಕೆ ಮತ್ತೊಂದು ಉದಾಹರಣೆಯಾಗಿ ಅಳಿವೆಯ ಕೆಸರಲ್ಲಿ ಮೀನುಗಾರಿಕಾ ದೋಣಿಯೊಂದು ಗುರುವಾರ ಸಿಲುಕಿ ಮುಳುಗಿದೆ. ಅದರಲ್ಲಿದ್ದ 22 ಕೆಲಸಗಾರರನ್ನು ಇತರ ದೋಣಿಗಳ ಕಾರ್ಮಿಕರು ರಕ್ಷಿಸಿದರು.

ಅವಘಡಕ್ಕೀಡಾಗಿರುವ ಪರ್ಸೀನ್ ದೋಣಿಯನ್ನು ‘ಸೇಂಟ್ ಆ್ಯಂಟನಿ’ ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು.

‘ದೋಣಿಯನ್ನು ತೀರಕ್ಕೆ ತರುವ ಪ್ರಯತ್ನ ವಿಫಲವಾಗಿದೆ. ಸುಮಾರು ₹ 1 ಕೋಟಿ ಹಾನಿ ಸಂಭವಿಸಿದೆ. ಪ್ರತಿ ವರ್ಷ ಇಂಥ ಹಲವಾರು ಅವಘಡಗಳು ಸಂಭವಿಸುತ್ತಿವೆ. ಅಳಿವೆಯ ಹೂಳಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂಬ ಮೀನುಗಾರರ ಬೇಡಿಕೆಯನ್ನು ನಿರ್ಲಕ್ಷಿಸಿದ್ದೇ ಇಂಥ ದುರಂತಗಳಿಗೆ ಕಾರಣ’ ಎಂದು ಸ್ಥಳೀಯರಾದ ಭಾಸ್ಕರ ತಾಂಡೇಲ ಅಸಮಾಧಾನ ವ್ಯಕ್ತಪಡಿಸಿದರು.

ಮೂರು ದಶಕದ ಕೂಗು: ‘ಈ ಪ್ರದೇಶದಲ್ಲಿ ಪ್ರತಿವರ್ಷ ಐದಾರು ದೋಣಿಗಳು ಅಪಘಾತಕ್ಕೀಡಾಗುತ್ತವೆ. ಮೀನುಗಾರರ ಜೀವ ಹಾನಿಯಾದ ಉದಾಹರಣೆಗಳೂ ಇವೆ. ದೋಣಿ ಮಾಲೀಕರೂ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಾರೆ. ಅಳಿವೆ ಪ್ರದೇಶದಲ್ಲಿ ಹೂಳು ಎತ್ತಬೇಕು ಎನ್ನುವ ಕೂಗು ಮೂರು ದಶಕಗಳಿಂದ ಕೇಳಿ ಬರುತ್ತಿದೆ. ಆದರೂ ಇದುವರೆಗೆ ಒಮ್ಮೆಯೂ ಈಡೇರಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗರಾಜ ಜಿ. ಮೇಸ್ತ.

ಕಾಸರಕೋಡಿನಲ್ಲಿ ವಾಣಿಜ್ಯ ಬಂದರು ಕಾಮಗಾರಿಯನ್ನು ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿದೆ. ಇದು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಪರಿಣಾಮ ಅಳಿವೆಯಲ್ಲಿ ನಾಲ್ಕೈದು ವರ್ಷಗಳಲ್ಲಿ ಹೂಳಿನ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಅಳಿವೆಯಲ್ಲಿ ಮಣ್ಣಿನ ದಿಬ್ಬ ಉಂಟಾಗಿ ಸಮಸ್ಯೆ ಉಲ್ಬಣಿಸಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಮಳೆಗಾಲ, ಮತ್ಸ್ಯಕ್ಷಾಮ, ಲಾಕ್‌ಡೌನ್‌ ಹೀಗೆ ವಿವಿಧ ಕಾರಣಗಳಿಂದ ಮೀನುಗಾರಿಕೆ ಸ್ಥಗಿತವಾಗಿತ್ತು. ಇದರಿಂದ ದುಡಿಮೆ ಇಲ್ಲದೇ ಮೀನುಗಾರರು ಕಂಗಾಲಾಗಿದ್ದಾರೆ. ಇದರ ಜೊತೆ ಅಳಿವೆಯಲ್ಲಿನ ಹೂಳಿನ ಸಮಸ್ಯೆಯೂ ಕಾಡುತ್ತಿದೆ. ಅಳಿವೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅವಘಡವನ್ನು ತಪ್ಪಿಸಲು ತಕ್ಷಣ ಹೂಳೆತ್ತಲು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಮತ್ತು ವಿವಿಧ ಸಂಘ ಸಂಸ್ಥೆಗಳು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಆದರೆ, ಪ್ರಯೋಜನವಾಗಲಿಲ್ಲ ಎಂಬ ಬೇಸರ ಅವರದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು