ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮೂರನೇ ಅಲೆ ಎದುರಿಸಲು ಸರ್ವ ಸಿದ್ಧತೆ: ಸಚಿವ ಶಿವರಾಮ ಹೆಬ್ಬಾರ

Last Updated 15 ಆಗಸ್ಟ್ 2021, 6:54 IST
ಅಕ್ಷರ ಗಾತ್ರ

ಕಾರವಾರ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಬಂದರೆ ಎದುರಿಸಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಮ್ಲಜನಕದ ಕೊರತೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಮೂರನೆಯ ಅಲೆ ಸಿದ್ಧತೆಯಲ್ಲಿ 284 ಆಮ್ಲಜನಕ ಸಹಿತ ಪ್ರತ್ಯೇಕ ಹಾಸಿಗೆ, 1,888 ಪ್ರತ್ಯೇಕ ಹಾಸಿಗೆಗಳು ಹಾಗೂ 284 ಸಪೋರ್ಟೆಡ್ ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. 104 ವೆಂಟಿಲೇಟರ್‌ ಹಾಗೂ 155 ಐ.ಸಿ.ಯು ಹಾಸಿಗೆ ಮತ್ತು 52 ಮಕ್ಕಳ ವಿಶೇಷ ಐ.ಸಿ.ಯು ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿರುತ್ತದೆ’ ಎಂದು ತಿಳಿಸಿದರು.

‘ದಾಂಡೇಲಿಯಲ್ಲಿ 10, ಭಟ್ಕಳ 37, ಶಿರಸಿ 24, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 70 ಆಮ್ಲಜನಕ ವ್ಯವಸ್ಥಿತ ಹಾಸಿಗೆ ಹಾಗೂ 50 ಐ.ಸಿ.ಯು ಹಾಸಿಗೆಗಳನ್ನು ಹೆಚ್ಚುವರಿಯಾಗಿ ಸಿದ್ಧಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿಪರೀತ ಕಡಿಮೆ ತೂಕದಿಂದ ಬಳಲುತ್ತಿದ್ದ 184 ಮಕ್ಕಳಿಗೂ ಮೆಡಿಸಿನ್ ಕಿಟ್ ವಿತರಿಸಲಾಗಿದ್ದು, ಸಾಧಾರಣ ಕಡಿಮೆ ತೂಕ ಹೊಂದಿದ 3,902 ಮಕ್ಕಳಲ್ಲಿ ಈವರೆಗೆ 2,185 ಮಕ್ಕಳಿಗೆ ಔಷಧಿಯ ಕಿಟ್ ವಿತರಿಸಲಾಗಿದೆ’ ಎಂದೂ ತಿಳಿಸಿದರು.

‘ಜಿಲ್ಲೆಯಲ್ಲಿ ಕರೋನಾ ರೋಗಿಗಳಿಗೆ ಆಕ್ಸಿಜನ್ ಕೊರತೆಯನ್ನು ನೀಗಿಸಲು ಮಹತ್ತರವಾದ ಹೆಜ್ಜೆಯನ್ನು ಇಡಲಾಗಿದೆ. ಈಗಾಗಲೇ ಆರು ಕೆ.ಎಲ್ ಸಾಮರ್ಥ್ಯದ ಘಟಕಗಳನ್ನು ಕಾರವಾರದ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸ್ಥಾಪನೆ ಮಾಡಲಾಗಿದೆ. ಶಿರಸಿ ಹಾಗೂ ಭಟ್ಕಳಗಳಲ್ಲಿ ತಲಾ ಆರು ಕೆ.ಎಲ್ ಸಾಮರ್ಥ್ಯದ ಘಟಕಗಳ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದರು.

ಇದನ್ನೂ ಓದಿ... ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ 14 ಹೊಸ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ

'ಜಿಲ್ಲೆಯಲ್ಲಿ ಈವರೆಗೆ 5,52,379 ಮೊದಲನೇ ಸುತ್ತಿನ ಕೋವಿಡ್ ಲಸಿಕೆ ಹಾಗೂ ಎರಡನೇ ಸುತ್ತಿನ ಲಸಿಕೆಯನ್ನು 1,95,156 ಜನ ಪಡೆದಿರುತ್ತಾರೆ' ಎಂದು ಹೇಳಿದರು.

'ಕೋವಿಡ್‌ನಿಂದ ಶಾಲೆಗಳು ಸಮರ್ಪಕವಾಗಿ ತೆರೆಯದೇ ವಿದ್ಯಾರ್ಥಿಗಳು ನಿರಂತರವಾಗಿ ಭೌತಿಕ ತರಗತಿಗಳಿಗೆ ಹಾಜರಾಗದಿರುವ ವಿಷಮ ಪರಿಸ್ಥಿತಿಯಲ್ಲೂ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆದು ಜಿಲ್ಲೆಯು 'ಎ' ಗ್ರೇಡ್ ಫಲಿತಾಂಶ ಪಡೆದಿದೆ' ಎಂದು ಸಂತಸ ವ್ಯಕ್ತಪಡಿಸಿದರು.

'ಪ್ರಕೃತಿ ವಿಕೋಪವನ್ನು ಜಿಲ್ಲಾಡಳಿತ ಯಶಸ್ವಿಯಾಗಿ ನಿಭಾಯಿಸಿದೆ. ನನ್ನ ವಿನಂತಿಯ ಮೇರೆಗೆ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ ಮರು ದಿನವೇ ಜಿಲ್ಲೆಗೆ ಭೇಟಿ ನೀಡಿ ರೂ 210 ಕೋಟಿ ಘೋಷಿಸಿದ್ದಾರೆ. 2021ರ ಮೇ ತಿಂಗಳಲ್ಲಿ ತೌತೆ ಚಂಡಮಾರುತ ಅಪ್ಪಳಿಸಿ ಜಿಲ್ಲೆಯಲ್ಲಿನ 110 ಮನೆಗಳಿಗೆ ಸಮುದ್ರದ ನೀರು ನುಗ್ಗಿ ಹಾನಿಯಾಗಿದ್ದು, ಇದಕ್ಕೆ ರೂ 41.74 ಕೋಟಿ ಪರಿಹಾರ ವಿತರಿಸಲಾಗಿದೆ' ಎಂದು ತಿಳಿಸಿದರು

ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿ.ಪಂ ಸಿ.ಇ.ಒ ಪ್ರಿಯಾಂಗಾ ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT